ADVERTISEMENT

ಸಿದ್ಧಪ್ಪಜ್ಜನಿಗೆ ಬೆಳ್ಳಿರಥ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 4:24 IST
Last Updated 18 ಡಿಸೆಂಬರ್ 2013, 4:24 IST

ಹುಬ್ಬಳ್ಳಿ: ಉಣಕಲ್ ನ ಸಿದ್ಧಪ್ಪಜ್ಜನ ತೊಟ್ಟಿ­ಲೋತ್ಸವ ನಡೆಯುವ ಇದೇ 20ರಂದು ಮೂಲ ಗದ್ದುಗೆ ಮಠಕ್ಕೆ 94 ಕಿಲೋ ತೂಕದ ಬೆಳ್ಳಿ ರಥ ಅರ್ಪಿಸಲಾಗುತ್ತಿದೆ.

ಸದ್ಗುರು ಸಿದ್ಧಪ್ಪಜ್ಜನ ಸೇವಾ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಬಿದರಿಕೊಪ್ಪ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬೆಳ್ಳಿರಥ ಕುರಿತಾದ ವಿವರಗಳನ್ನು ನೀಡಿದರು.

ಸಿದ್ಧಪ್ಪಜ್ಜನ ಸೇವಾ ಸಮಿತಿಯ ವತಿಯಿಂದ ಭಕ್ತರಿಂದ ದೇಣಿಗೆ ಸಂಗ್ರಹಿಸಿ ₨65 ಲಕ್ಷ ವೆಚ್ಚದಲ್ಲಿ 11.4 ಅಡಿ ಎತ್ತರದ ರಥ ನಿರ್ಮಿಸ­ಲಾಗಿದೆ. ಇದೇ 19 ಹಾಗೂ 20ರಂದು ಎರಡು ದಿನ ಕಾಲ ರಥ ಅರ್ಪಣೆ ಕುರಿತಾದ ಧಾರ್ಮಿಕ ವಿಧಿ–ವಿಧಾನಗಳು ನಡೆಯಲಿವೆ ಎಂದರು.

ಉತ್ತರ ಕನ್ನಡ ಜಿಲ್ಲೆ ಕುಮಟಾದ ಶಿಲ್ಪಿ ಸತೀಶ್ ಶೆಟ್ಟಿ ಸತತ ಆರು ತಿಂಗಳು ಶ್ರಮವಹಿಸಿ ಬೆಳ್ಳಿ ರಥ ನಿರ್ಮಿಸಿದ್ದು, 19ರಂದು ಬೆಳಿಗ್ಗೆ 8 ಗಂಟೆಗೆ ಬಾಲೇ­ಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ಪಾದಯಾತ್ರೆ ಹಾಗೂ ಪ್ರವಚನದ ಮೂಲಕ ಬೆಳ್ಳಿಯ ರಥರ ಮೆರವಣಿಗೆ ಉದ್ಘಾಟಿಸಲಿದ್ದಾರೆ ಎಂದರು.

ಅಂದು ಮಧ್ಯಾಹ್ನ 12 ಗಂಟೆಗೆ ನಡೆಯುವ ಮೆರವಣಿಗೆಯಲ್ಲಿ ಕೇರಳದ ಚಂಡೆ, ಆಂಧ್ರಪ್ರದೇಶದ ನಾದಸ್ವರ, ಶಿಕಾರಿಪುರದ ಮಹಿಳಾ ತಂಡದಿಂದ ಡೊಳ್ಳು, ಮೈಸೂರಿನ ಮಲೆಮಹದೇಶ್ವರ ಬೆಟ್ಟದ ಕಂಸಾಳೆ, ನಂದಿಕೋಲು, ಕಲಘಟಗಿ ತಾಲ್ಲೂಕು ಗಂಜಿಗಟ್ಟಿಯ ಕೋಲುಮೇಳ, ಸಮಾಳ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಆನೆ, ಕುದುರೆ, ಚಿಕ್ಕಮಕ್ಕಳ ಆರತಿ ತಂಡ, ಮುತ್ತೈದೆಯರ ಕುಂಭ ಮೆರವಣಿಗೆ ಹಾಗೂ ವಾದ್ಯ–ವೈಭವ ನಡೆಯಲಿದೆ ಎಂದರು.

ಇದೇ 20ರಂದು ಸಂಜೆ 4 ಗಂಟೆಗೆ ಗದಗದ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರ ಸಂಗೀತ, ಪ್ರವಚನ ನಡೆಯಲಿದೆ. ಸಂಜೆ 6.30ಕ್ಕೆ ಅಜ್ಜನವರ ತೊಟ್ಟಿ­ಲೋತ್ಸವ ನಡೆಯಲಿದೆ. ಸಂಜೆ 7 ಗಂಟೆಗೆ ಕಲ್ಲಯ್ಯಜ್ಜನವರು ಬೆಳ್ಳಿ ರಥೋತ್ಸ­ವಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಮಹಾಂತೇಶ ಫಿರಂಗಿ, ಮುಖಂಡರಾದ ಸುರೇಶ ಐನಾಪುರ, ರಾಜಶೇಖರ ಹೆಬ್ಬಳ್ಳಿ, ವೀರಯ್ಯ ಮಠಪತಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.