ಸಿರುಗುಪ್ಪ: ನಾಲ್ಕು ಗ್ರಾಮಗಳಿಗೆ ಒಂದೇ ಶುದ್ಧ ಸಿಹಿ ನೀರಿನ ಕೊಳಾಯಿ (ನಲ್ಲಿ) ವ್ಯವಸ್ಥೆ. ಅದರಲ್ಲಿ ಬರುವ ನೀರಲ್ಲೇ ದೂರದ ಊರುಗಳ ಜನರಿಗೆ ರೂ 10ಕ್ಕೆ ಒಂದು ಕೊಡ. ಹತ್ತಿರದ ಊರುಗಳ ಜನರಿಗೆ ರೂ 5ಕ್ಕೆ ಒಂದು ಕೊಡ ನೀರು ಮಾರಾಟವಾಗುತ್ತಿದೆ.
ಇದು ತಾಲ್ಲೂಕಿನ ಗಡಿಭಾಗದ ಗ್ರಾಮಗಳಲ್ಲಿನ ಜನತೆ ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಹಿಡಿದ ಕನ್ನಡಿ.
ಅಕ್ಕಪಕ್ಕದಲ್ಲಿಯೇ ಇರುವ ಅಕ್ಕತಂಗಿಯರಹಾಳು, ಬಸರಹಳ್ಳಿ, ಕೆ.ಕೆ. ಹಾಳು ಮತ್ತು ಬಿ.ಜಿ. ದಿನ್ನಿಯ ಒಟ್ಟು 4 ಗ್ರಾಮಗಳ ಜನ ಪ್ರತಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಾರೆ. ಗ್ರಾಮದ ಯುವಕರ ತಂಡಗಳು ಜನರಿಂದ ಹಣ ಪಡೆದು ಆಟೋ ರಿಕ್ಷಾಗಳಲ್ಲಿ ಪ್ಲಾಸ್ಟಿಕ್ ಡ್ರಮ್ ಮತ್ತು ಕೊಡಗಳನ್ನು ಇರಿಸಿಕೊಂಡು ನೀರು ಸರಬರಾಜು ಮಾಡುತ್ತಿದ್ದಾರೆ. ಸ್ಥಿತಿವಂತರು ಹಣಕೊಟ್ಟು ನೀರು ಪಡೆದರೆ, ಬಡವರು ಮಾತ್ರ ಕಡು ಬಿಸಿಲಿನಲ್ಲಿ ದೂರದ ಗ್ರಾಮಕ್ಕೆ ನಡೆದು ಹೋಗಿ ನೀರು ತರುವುದು ಇಲ್ಲಿ ಸಾಮಾನ್ಯವಾಗಿದೆ.
ಈ ವರ್ಷ ತೀವ್ರ ಬರಗಾಲವಾಗಿದ್ದರಿಂದ ಇವರ ಸಮಸ್ಯೆ ಮತ್ತಷ್ಟು ಹೆಚ್ಚಿದೆ. ಹೆಚ್ಚುತ್ತಿರುವ ಬಿಸಿಲು ಒಂದು ಕಡೆಯಾದರೆ ಪ್ರತಿ ದಿನವೂ ದೂರದ ಊರಿಗೆ ಹೋಗಿ ಕುಡಿಯುವ ನೀರು ತರುವ ಬವಣೆ ಇನ್ನೊಂದೆಡೆ. ಒಂದು ಕೊಡಕ್ಕೆ ರೂ 10ಕ್ಕೆ ಕೊಟ್ಟು ನೀರು ಪಡೆಯಬೇಕೆಂಬ ಅಳಲನ್ನು ಇಲ್ಲಿಯ ಜನತೆ ವ್ಯಕ್ತಪಡಿಸುತ್ತಾರೆ.
ಪಕ್ಕದಲ್ಲಿರುವ ಗರ್ಜಿಹಳ್ಳದಲ್ಲಿ ನೀರಿನ ಸೆಲೆ ಬತ್ತಿ ಹೋಗಿದೆ. ಊರಲ್ಲಿರುವ ಕೊಳವೆ ಬಾವಿಗಳಲ್ಲಿ ಉಪ್ಪು ನೀರು. ಹಳ್ಳದ ನೀರನ್ನು ಸರಬರಾಜು ಮಾಡುತ್ತಿದ್ದರೂ, ಅವು ಸಪ್ಪೆ ಇರುವುದರಿಂದ ಸಮಸ್ಯೆಯಾಗಿದೆ ಎಂದು ಅಕ್ಕತಂಗಿಯರಹಾಳು ಗ್ರಾಮದ ಯುವಕ, ಪದವಿ ವಿದ್ಯಾರ್ಥಿ ಶ್ರೀನಿವಾಸ ತಮ್ಮ ಊರಿನ ಕುಡಿಯುವ ನೀರಿನ ಸಮಸ್ಯೆ ಕುರಿತು ವಿವರಿಸುತ್ತಾನೆ.
`ಊರಿನಿಂದ ಮೂರು ಕಿಮೀ ದೂರದಲ್ಲಿರುವ ಬಿ.ಜಿ. ದಿನ್ನಿ ಗ್ರಾಮಕ್ಕೆ ಹೋಗಿ ಅಲ್ಲಿರುವ ಒಂದೇ ಒಂದು ಕೊಳಾಯಿ ಮುಂದೆ ಸರದಿಯಲ್ಲಿ ನಿಂತು ನೀರು ಪಡೆದು ಸೈಕಲ್ ಮೇಲೆ ಕೊಂಡೊಯ್ಯುತ್ತೇನೆ~ ಎಂದು ಆತ ಹೇಳುತ್ತಾನೆ.
`ನಾನೂ ಸಹ ಶಾಲೆ ಬಿಟ್ಟು ನೀರು ತರಾಕ ಬರತೇನ್ರಿ~ ಎಂದು 7ನೇ ತರಗತಿ ಓದುತ್ತಿರುವ ವಿದ್ಯಾರ್ಥಿ ಸಂಜೀವ ಆತನಿಗೆ ದನಿಗೂಡಿಸಿದ.
`ನಮ್ಮ ಊರಾಗ ನೀರಿನ ಸಮಸ್ಯೆ ಇದೆ. ಆದರೂ ಯಾರು ಕೇಳೋರಿಲ್ಲ~ ಎಂದು ಗುಬ್ಬಿಹಾಳು ಗ್ರಾಮದ ವೃದ್ಧೆ ಲಕ್ಷ್ಮಮ್ಮ ತಿಳಿಸಿದರೆ, ಬಾರಿಕರ ಚಿದಾನಂದ ಅವರು ಅವರನ್ನೇ ಬೆಂಬಲಿಸಿದರು.
`ಮನುಷ್ಯರಿಗೇ ನೀರಿನ ತೊಂದರೆ ಐತಿ. ಇನ್ನು ದನಕರುಗಳಿಗೆ ಏನ್ ಮಾಡಬೇಕ್ರೀ. ಬಟ್ಟೆ ಒಗೆಯಲು, ಪಾತ್ರೆ ತೊಳೆಯಲು, ಸ್ನಾನ ಮಾಡಲು ನೀರು ಸಂಗ್ರಹಿಸುವುದೇ ನಿತ್ಯದ ಕೆಲಸವಾಗಿದೆ~ ಎಂಬುದು ಗ್ರಾಮದ ಮಹಿಳೆಯರ ಹೇಳಿಕೆ.
ಪಕ್ಕದ ಕೊತ್ತಲಚಿಂತೆ ಗ್ರಾಮದಲ್ಲಿ ಕೆರೆ ಇದೆ, ನೀರೂ ಇದೆ. ಆದರೆ, ಅದರ ನಿರ್ವಹಣೆಯಲ್ಲಿ ಲೋಪವಿದ್ದು, ಜನತೆ ದೂರದ ಹಳ್ಳದಿಂದ ಕುಡಿಯುವ ಸಿಹಿ ನೀರು ಪಡೆಯಬೇಕಾಗಿದೆ. ಅಲ್ಲಿ ನೀರಿಗಾಗಿ ಬಂದಿದ್ದ ಕೊರಸರ ರಾಮಮ್ಮ, ಚೆಲುವಾದಿ ಉರುಕುಂದೆಪ್ಪ, ಮಾರೆಮ್ಮ, ಹುಲಿಗೆಮ್ಮ, ಸತ್ಯನಾರಾಯಣರೆಡ್ಡಿ ಅವರು, `ಗ್ರಾಮ ಪಂಚಾಯಿತಿಯವರು ಸಕಾಲಕ್ಕೆ ನೀರು ಬಿಡುವ ವ್ಯವಸ್ಥೆ ಮಾಡುತ್ತಿಲ್ಲ~ ಎಂದು ದೂರಿದರು.
ಅಕ್ಕತಂಗಿಯರಹಾಳು ಮತ್ತು ಬಸರಹಳ್ಳಿ ಗ್ರಾಮದಲ್ಲಿ ಸಮುದಾಯ ಆಧಾರಿತ ಕುಡಿಯುವ ನೀರಿನ ಯೋಜನೆ 2004ರಲ್ಲಿ ಆರಂಭಗೊಂಡಿದ್ದು, ಕೆರೆ ನಿರ್ಮಾಣ ಮಾಡಲಾಗಿದೆ. ಆದರೆ, ಕೆರೆಗೆ ನೀರು ತುಂಬಿಸುವ ಕಾರ್ಯ ನೆನೆಗುದಿಗೆ ಬಿದ್ದಿದೆ.
ಆಂದ್ರದ ಗಡಿಯಲ್ಲಿರುವ ತಾಲ್ಲೂಕಿನ ಗ್ರಾಮಗಳಲ್ಲಿ ಇದೇ ರೀತಿಯ ಸಮಸ್ಯೆಯನ್ನು ಜನ ಎದುರಿಸುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆಯ ನಡುವೆ ಬಿರು ಬೇಸಿಗೆಯನ್ನು ಹೇಗೆ ಕಳೆಯುವುದು, ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಇಡೀ ದಿನ ನೀರು ತರುವುದರಲ್ಲಿಯೇ ಕಾಲ ಕಳೆಯುವಂತಾಗಿದೆಯಲ್ಲ ಎಂಬುದು ಗಡಿಭಾಗದ ಹಳ್ಳಿಗಳ ಜನರ ಗೋಳಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.