ADVERTISEMENT

ಸುಮಂಗಲಾಗೆ ‘ಶಾಂತಾದೇವಿ ಕಣವಿ ಕಥಾ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 7:11 IST
Last Updated 16 ಸೆಪ್ಟೆಂಬರ್ 2013, 7:11 IST

ಧಾರವಾಡ: ‘ಹಲವು ಕಾಲಘಟ್ಟಗಳನ್ನು ದಾಟಿ ಮುಂದುವರಿಯುತ್ತಿರುವ ಕನ್ನಡ ಸಾಹಿತ್ಯದಲ್ಲಿ ಪ್ರಸ್ತುತ ಮಹಿಳೆಯರು ಸಾಹಿತ್ಯದ ಎಲ್ಲ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಪ್ರಸ್ತುತ ಮಹಿಳಾ ಸಾಹಿತ್ಯ ಕಾಲಘಟ್ಟ ಎನಿಸುತ್ತಿದೆ’ ಎಂದು ಲೇಖಕಿ ಲತಾ ರಾಜಶೇಖರ ಅಭಿಪ್ರಾಯಪಟ್ಟರು.

ಇಲ್ಲಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಉತ್ತರ ಕರ್ನಾಟಕ ಲೇಖಕಿಯರ ಸಂಘವು ಭಾನುವಾರ ಏರ್ಪಡಿಸಿದ್ದ ಸಂಘದ ವಾರ್ಷಿಕೋತ್ಸವ ಮತ್ತು  ‘ಶಾಂತಾದೇವಿ ಕಣವಿ ಕಥಾ ಪುರಸ್ಕಾರ’ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ‘12ನೇ ಶತಮಾನದಲ್ಲಿ ಬಹಳಷ್ಟು ವಚನಕಾರ್ತಿಯರು ತಮ್ಮ ಅನುಭವಗಳನ್ನು ದೊಡ್ಡ ಪ್ರಮಾಣದಲ್ಲಿ ಅಭಿವ್ಯಕ್ತಿಸಿದ್ದನ್ನು ಕಾಣುತ್ತೇವೆ.

ಅದಾದ ನಂತರ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಸಾಹಿತ್ಯ ಕೃಷಿಯಲ್ಲಿ ಮಹಿಳೆಯರು ತೊಡಗಿಸಿಕೊಂಡಿರುವ ಕಾಲಘಟ್ಟ ಎಂದರೆ 20ನೇ ಶತಮಾನದ ಕೊನೆಭಾಗ ಮತ್ತು 21ನೇ ಶತಮಾನದ ಆರಂಭ. ಕೇವಲ ಸಂಖ್ಯೆಯ ದೃಷ್ಟಿಯಿಂದ ಮಾತ್ರ­ವಲ್ಲ. ಗುಣಮಟ್ಟದ ನಿಟ್ಟಿನಲ್ಲೂ ಉತ್ತಮ ಕೃತಿಗಳು ಹೊರಬರುತ್ತಿವೆ. ಇದು ಸಂತೋಷದ ಬೆಳವಣಿಗೆ‘ ಎಂದರು.

ಕಥಾ ಪುರಸ್ಕಾರ ಸ್ವೀಕರಿಸಿದ ಕತೆಗಾರ್ತಿ ಸುಮಂಗಲಾ, ‘ಬದುಕಿನ ಬಗ್ಗೆ ನಕಾರಾತ್ಮಕವಾಗಿ ಯೋಚಿಸದೇ ಜೀವಂ­ತಿ­ಕೆಯಿಂದ ಜೀವನೋತ್ಸಾಹ, ಧನಾತ್ಮಕ ಚೈತನ್ಯ ಪಡೆಯಬೇಕಿದೆ. ಪ್ರಸ್ತುತ ಮಹಿ­ಳೆ­ಯರು ತಮ್ಮ ಅಸ್ಮಿತೆಯನ್ನು ಕಂಡು­ಕೊಳ್ಳುವ ಪ್ರಕ್ರಿಯೆಯಲ್ಲಿ ಗಟ್ಟಿಯಾಗುತ್ತಿ­ದ್ದಾರೆ. ಆರಂಭದಲ್ಲಿ ಪುರುಷಛಾಯೆ­ಯಲ್ಲಿ ಬರೆಯುತ್ತಿದ್ದ ಲೇಖಕಿ­ಯರು ಇತ್ತೀಚಿನ ದಿನಗಳಲ್ಲಿ ಆ ಪೊರೆಯನ್ನು ಹರಿದು ತಮ್ಮ ಅನುಭವಗಳನ್ನು ಗಟ್ಟಿ­ಯಾಗಿ ಅಭಿವ್ಯಕ್ತಿಸುತ್ತಿದ್ದಾರೆ. ಬರವಣಿ­ಗೆಗೆ ದ್ರವ್ಯ ದಕ್ಕುವುದು ಸಮುದಾ­ಯದಿಂದ’ ಎಂದರು.

ಸಂಘದ ಅಧ್ಯಕ್ಷೆ ಉಜ್ವಲಾ ಹಿರೇಮಠ, ಡಾ.ಸರೋಜಿನಿ ಶಿಂತ್ರಿ, ಡಾ.ವೀಣಾ ಸಂಕನಗೌಡರ, ಪಾರ್ವತಿ ಹಾಲಭಾವಿ, ಡಾ.ಚೆನ್ನವೀರ ಕಣವಿ ಪಾಲ್ಗೊಂಡಿ­ದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯೆಯರನ್ನು ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT