ADVERTISEMENT

ಸುವರ್ಣ ಭೂಮಿ: ಲಾಟರಿ ಮೂಲಕ ಆಯ್ಕೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2012, 6:50 IST
Last Updated 3 ಜುಲೈ 2012, 6:50 IST

ಹುಬ್ಬಳ್ಳಿ: ಸುವರ್ಣ ಭೂಮಿ ಯೋಜನೆಯಡಿ ಹುಬ್ಬಳ್ಳಿಯ ಮೂರು ಹೋಬಳಿಗಳ ಸಾಮಾನ್ಯ ವರ್ಗದ ಫಲಾನುಭವಿಗಳ ಆಯ್ಕೆ ಸೋಮವಾರ ಲಾಟರಿ ಎತ್ತುವ ಮೂಲಕ ಸುಸೂತ್ರ ವಾಗಿ ನಡೆಯಿತು.

ಕಳೆದ ಬಾರಿ ಫಲಾನುಭವಿಗಳ ಆಯ್ಕೆ ನಡೆದಾಗ ಅಸಮಾಧಾನ ದಿಂದಾಗಿ ಗಲಾಟೆ, ಗೊಂದಲ ನಡೆದಿತ್ತು. ಇದೇ ಕಾರಣಕ್ಕೆ ಸೋಮ ವಾರ ಆಯ್ಕೆ ಪ್ರಕ್ರಿಯೆ ನಡೆದ ಸ್ಥಳದಲ್ಲಿ ಬಳಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಶಿರಗುಪ್ಪಿ ಹಾಗೂ ಛಬ್ಬಿ ಹೋಬಳಿಯ ಫಲಾನುಭವಿಗಳ ಆಯ್ಕೆ ಟೆಂಡರ್ ಹಾಲ್‌ನಲ್ಲಿ ನಡೆದರೆ, ಹುಬ್ಬಳ್ಳಿ ಹೋಬಳಿಯ ಆಯ್ಕೆ ರೈತ ಸಂಪರ್ಕ ಕೇಂದ್ರದಲ್ಲಿ ನಡೆಯಿತು. ಬೆಳಿಗ್ಗೆ ಮೂರೂ ಕಡೆಗಳಲ್ಲೂ ಫಲಾನುಭವಿಗಳ ಸಂಖ್ಯೆ ಕಡಿಮೆ ಇತ್ತು. ಮಧ್ಯಾಹ್ನ ಶಿರಗುಪ್ಪಿ ಹೋಬಳಿಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಆದರೆ ಯಾವುದೇ ಗೊಂದಲ, ಸಮಸ್ಯೆಗಳಿಗೆ ಆಸ್ಪದವಿರಲಿಲ್ಲ.

ADVERTISEMENT

ಕಳೆದ ಬಾರಿ ಆಯ್ಕೆಯಾಗದೆ ಉಳಿದಿದ್ದ 6622 ಫಲಾನುಭವಿಗಳ ಪೈಕಿ 1175 ಮಂದಿಯನ್ನು ಆಯ್ಕೆ ಮಾಡಿ ತಲಾ 10 ಸಾವಿರ ರೂಪಾಯಿಯ ಚೆಕ್ ಹಸ್ತಾಂತರಿಸಲಾಯಿತು.

ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಎಂ.ಡಿ. ಪವಾರ ಛಬ್ಬಿ ಹೋಬಳಿಯ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಹುಬ್ಬಳ್ಳಿ ಹೋಬಳಿಯ ಆಯ್ಕೆ ಪ್ರಕ್ರಿಯೆ ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಎಸ್.ವಿ. ದಿಂಡಲಕೊಪ್ಪ ಹಾಗೂ ಶಿರಗುಪ್ಪಿ ಹೋಬಳಿಯ ಆಯ್ಕೆ ಪ್ರಕ್ರಿಯೆ ಕೃಷಿ ಅಧಿಕಾರಿ ಮಂಗಳಾ ರೇವಣಕರ ಅವರ ಉಸ್ತುವಾರಿಯಲ್ಲಿ ನಡೆಯಿತು.

`ಹುಬ್ಬಳ್ಳಿ ಹೋಬಳಿಯಲ್ಲಿ ಒಟ್ಟು 3001 ಮಂದಿ ಫಲಾನುಭವಿಗಳಿದ್ದು ಕಳೆದ ಬಾರಿ 495 ಮಂದಿ ಆಯ್ಕೆಯಾಗಿದ್ದರು. ಉಳಿದ 1235 ಮಂದಿ ಪೈಕಿ 200 ಮಂದಿಯನ್ನು ಆಯ್ಕೆ ಮಾಡಲಾಯಿತು. ಛಬ್ಬಿ ವ್ಯಾಪ್ತಿಯಲ್ಲಿ 3001 ಮಂದಿ ಇದ್ದು 495 ಮಂದಿಯನ್ನು ಕಳೆದ ಬಾರಿ ಆಯ್ಕೆ ಮಾಡಲಾಗಿತ್ತು. ಉಳಿದ 2506 ಮಂದಿಯ ಪೈಕಿ 407 ಮಂದಿಯನ್ನು ಆಯ್ಕೆ ಮಾಡಲಾಯಿತು.

ಶಿರಗುಪ್ಪಿ ವ್ಯಾಪ್ತಿಯಲ್ಲಿ 3450 ಮಂದಿ ಇದ್ದು ಕಳೆದ ಬಾರಿ 569 ಮಂದಿ ಆಯ್ಕೆಯಾಗಿದ್ದರು. 2881 ಮಂದಿ ಉಳಿದಿದ್ದು ಅವರ ಪೈಕಿ 468 ಮಂದಿಯನ್ನು ಆರಿಸಲಾಯಿತು~ ಎಂದು ಸಹಾಯಕ ಕೃಷಿ ನಿರ್ದೇಶಕ ಪಿ.ಎನ್. ಪಾಟೀಲ ತಿಳಿಸಿದರು.

`ಫಲಾನುಭವಿಗಳು ಎಲ್ಲರೂ ಆಯ್ಕೆ ಸ್ಥಳಕ್ಕೆ ಬರಲಿಲ್ಲ. ಆದರೆ ಆಯ್ಕೆಯಾದವರಿಗೆ ತಕ್ಷಣ ಮಾಹಿತಿ ನೀಡಲಾಗುವುದು~ ಎಂದು ವಿವರಿಸಿದರು.

ಎಪಿಎಂಸಿ ಅಧ್ಯಕ್ಷ ಶಂಕರಗೌಡ ಪಾಟೀಲ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಯಲ್ಲವ್ವ ದೊಡಮನಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಟಿ.ಜಿ. ಬಾಲಣ್ಣವರ, ಎಂ.ವೈ. ಅಣ್ಣಿಗೇರಿ, ಎಪಿಎಂಸಿ ಸದಸ್ಯ ಸುರೇಶ ದಾಸನೂರ, ಕೃಷಿಕ ಸಮಾಜದ ಎಂ.ಸಿ. ಬೆಟಗೇರಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.