ADVERTISEMENT

ಹುಬ್ಬಳ್ಳಿ: ಸೌಹಾರ್ದಕ್ಕಾಗಿ ಸದ್ಭಾವನಾ ಯಾತ್ರೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2013, 19:59 IST
Last Updated 20 ಫೆಬ್ರುವರಿ 2013, 19:59 IST
ಹುಬ್ಬಳ್ಳಿಯಲ್ಲಿ ಬುಧವಾರ ಬಾಳೇಹೊಸೂರಿನ ದಿಂಗಾಲೇಶ್ವರ ಶ್ರೀಗಳ ನೇತೃತ್ವದಲ್ಲಿ ನಡೆದ `ಸದ್ಭಾವನಾ ಯಾತ್ರೆ'ಯಲ್ಲಿ ಬಸವಲಿಂಗ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಶಿವಲಿಂಗ ಸ್ವಾಮೀಜಿ, ಗುರುಮಹಾಂತ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಚನ್ನಮಲ್ಲದೇವರು, ಹುಕ್ಕೇರಿ ಶ್ರೀಗಳು, ಮುಧೋಳ ಶ್ರೀಗಳು ಪಾಲ್ಗೊಂಡಿದ್ದರು
ಹುಬ್ಬಳ್ಳಿಯಲ್ಲಿ ಬುಧವಾರ ಬಾಳೇಹೊಸೂರಿನ ದಿಂಗಾಲೇಶ್ವರ ಶ್ರೀಗಳ ನೇತೃತ್ವದಲ್ಲಿ ನಡೆದ `ಸದ್ಭಾವನಾ ಯಾತ್ರೆ'ಯಲ್ಲಿ ಬಸವಲಿಂಗ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಶಿವಲಿಂಗ ಸ್ವಾಮೀಜಿ, ಗುರುಮಹಾಂತ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಚನ್ನಮಲ್ಲದೇವರು, ಹುಕ್ಕೇರಿ ಶ್ರೀಗಳು, ಮುಧೋಳ ಶ್ರೀಗಳು ಪಾಲ್ಗೊಂಡಿದ್ದರು   

ಹುಬ್ಬಳ್ಳಿ: ಬಾಳೇಹೊಸೂರಿನ ದಿಂಗಾಲೇಶ್ವರ ಶ್ರೀಗಳು ಇಪ್ಪತ್ತು ದಿನಗಳಿಂದ ನಗರದ ವಿವಿಧ ಬಡಾವಣೆಗಳಲ್ಲಿ ಕೈಗೊಂಡ `ದುರ್ಗುಣಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ' ಪಾದಯಾತ್ರೆಯ ಸಮಾರೋಪದ ಅಂಗವಾಗಿ ನಗರದಲ್ಲಿ ಬುಧವಾರ ಮುಂಜಾನೆ `ಸದ್ಭಾವನಾ ಯಾತ್ರೆ' ನಡೆಯಿತು.

ಸಿದ್ಧಾರೂಢ ಮಠದಿಂದ ಮೂರುಸಾವಿರ ಮಠದವರೆಗೆ ನಡೆದ ಈ ಯಾತ್ರೆಯಲ್ಲಿ ಮಠ, ಮಂದಿರ, ದರ್ಗಾ, ಬಸದಿಗಳಿಗೆ ಭೇಟಿ ನೀಡಿ, ವಿವಿಧ ಧರ್ಮಗಳ ಮುಖಂಡರನ್ನು ಭೇಟಿ ಮಾಡಿದ ಶ್ರೀಗಳು ಎಲ್ಲರ ಜೊತೆ ಸಾಮಾಜಿಕ ಸಾಮರಸ್ಯ ಕುರಿತು ಮಾತುಕತೆ ನಡೆಸಿದರು.

ಸಿದ್ಧಾರೂಢ ಮಠದ ಆವರಣದಲ್ಲಿ ಮಠದ ಪದಾಧಿಕಾರಿಗಳ ನೇತೃತ್ವದಲ್ಲಿ ಶ್ರೀಗಳಿಗೆ ಆರತಿ ಎತ್ತಿ ಸ್ವಾಗತಿಸಲಾಯಿತು. ಅಲ್ಲಿಂದ ಆರಂಭವಾದ ಪಾದಯಾತ್ರೆ ಮೊದಲಿಗೆ ಇಂಡಿ ಪಂಪ್ ವೃತ್ತದಲ್ಲಿರುವ ಸಯ್ಯದ್ ಫತೇಶಾ ವಲಿ ದರ್ಗಾಕ್ಕೆ ತಲುಪಿತು. ಕಾಂಗ್ರೆಸ್ ಮುಖಂಡರಾದ ಎ.ಎಂ. ಹಿಂಡಸಗೇರಿ, ಎಫ್.ಎಚ್. ಜಕ್ಕಪ್ಪನವರ ಇತರರು ಶ್ರೀಗಳನ್ನು ಸ್ವಾಗತಿಸಿದರು. ದರ್ಗಾದಲ್ಲಿ ಪುಷ್ಪ ಸಮರ್ಪಿಸಿದ ಶ್ರೀಗಳು, ಮೌಲ್ವಿಗಳ ಸಮ್ಮುಖದಲ್ಲಿ ಕೋಮು ಸೌಹಾರ್ದ ಕುರಿತು ಮಾತನಾಡಿದರು.

ಅಲ್ಲಿಂದ ಹಳೇಹುಬ್ಬಳ್ಳಿಯ ವೀರಭದ್ರೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆ ಮುಂದುವರಿಯಿತು. ಹಿರೇಪೇಟೆಯ ಗುಜ್ಜರ್ ಬಸದಿ, ಮಹಾವೀರ ಗಲ್ಲಿಯ ಜೈನ ಬಸದಿಗಳಿಗೆ ಸ್ವಾಮೀಜಿಗಳು ಭೇಟಿ ನೀಡಿದರು. ಬಾಸೆಲ್ ಮಿಶನ್ ಚರ್ಚ್‌ಗೆ ಭೇಟಿ ನೀಡಿದ ಸ್ವಾಮೀಜಿಗಳನ್ನು ಅಲ್ಲಿನ ಪಾದ್ರಿಗಳು ಮತ್ತು ಕ್ರೈಸ್ತ ಮುಖಂಡರು ಸ್ವಾಗತಿಸಿದರು. ಎಲ್ಲ ಕೋಮಿನ ಜನರು ಪರಸ್ಪರ ಸೌಹಾರ್ದದಿಂದ ಬಾಳಬೇಕಾದ ಅಗತ್ಯ ಕುರಿತು ದಿಂಗಾಲೇಶ್ವರ ಶ್ರೀಗಳು ಮಾತನಾಡಿದರು.

ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರನ್ನು ಸಾರೋಟಿನಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು. ವಿವಿಧ ಮಠಾಧೀಶರು ಹಾಗೂ ನೂರಾರು ಭಕ್ತರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.