ADVERTISEMENT

ಹೆಲ್ಮೆಟ್ ಕಡ್ಡಾಯ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 6:29 IST
Last Updated 21 ಡಿಸೆಂಬರ್ 2012, 6:29 IST
ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿ ರುವುದನ್ನು ವಿರೋಧಿಸಿ ಹೆಲ್ಮೆಟ್ ವಿರೋಧಿ ಹೋರಾಟ ಸಮಿತಿ ಕಾರ್ಯಕರ್ತರು ಗುರುವಾರ ನಗರದಲ್ಲಿ ಬೈಕ್ ರ‌್ಯಾಲಿ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
 
ಹುಬ್ಬಳ್ಳಿ-ಧಾರವಾಡ ಅವಳಿ ನಗರ ಭೌಗೋಳಿಕ ವಾಗಿ ಚಿಕ್ಕದಾಗಿದೆ. ಅಲ್ಲದೇ ಟ್ರಾಫಿಕ್ ಕೂಡ ಬಹಳ ದಟ್ಟಣೆಯಾಗುವುದಿಲ್ಲ. ಹೆಲ್ಮೆಟ್ ಧಾರಣೆಯಿಂದ ಸಾಧಕ-ಬಾಧಕಗಳನ್ನು ಪುನರ್ ವಿಮರ್ಶಿಸಿ ಅವಳಿ ನಗರಕ್ಕೆ ಹೆಲ್ಮೆಟ್ ಕಡ್ಡಾಯವನ್ನು ನಿರ್ಬಂಧಗೊಳಿಸ ಬೇಕು.

ಅವಳಿನಗರದಲ್ಲಿ ಒಂದು ಪ್ರದೇಶದಿಂದ ಇನ್ನೊಂದು ನಗರ ಪ್ರದೇಶಕ್ಕೆ ಸಂಚರಿಸಬೇಕಾದರೆ ಕೇವಲ 3ರಿಂದ 4 ಕಿ.ಮೀ. ಕ್ರಮಿಸಬೇಕಾಗುತ್ತದೆ. ಇಂಥ ಪ್ರದೇಶದಲ್ಲಿ ಹೆಲ್ಮೆಟ್ ಅನವಶ್ಯಕವಾಗಿದೆ. ಪ್ರಸ್ತುತ ರಾಜ್ಯದಲ್ಲಿ ಬೆಂಗಳೂರು, ಮೈಸೂರು ಮತ್ತು ಬಳ್ಳಾರಿ ಜಿಲ್ಲೆಗಳನ್ನು ಬಿಟ್ಟರೆ ರಾಜ್ಯದ ಯಾವುದೇ ಭಾಗದಲ್ಲಿ ಯೂ ಪೂರ್ಣ ಪ್ರಮಾಣದ ಹೆಲ್ಮೆಟ್ ಕಡ್ಡಾಯ ನಿಯಮ ಅನುಷ್ಠಾನಗೊಂಡಿಲ್ಲ. 
 
ಈ ಅವಳಿ ನಗರದಲ್ಲಿ ಕಡ್ಡಾಯಗೊಳಿಸಿದ್ದನ್ನು ನೆಪವಾಗಿರಿಸಿಕೊಂಡು ಪೊಲೀಸರು ಸಾರ್ವಜನಿಕರಿಗೆ ದಂಡವಿಧಿಸುತ್ತಾ ಹಗಲು ದರೋಡೆ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಸಂಚಾರಿ ನಿಯಮದ ಬಗ್ಗೆ ಜಾಗೃತಿ ಮೂಡಿಸಬೇಕು. ಟ್ರಾಫಿಕ್‌ನಲ್ಲಿ ಅಡೆತಡೆಯಾದಾಗ ಅದನ್ನು ಸರಳೀಕರಣಗೊಳಿಸಿ ಸಂಚಾರ ಸುಗಮವಾಗು ವಂತೆ ಶ್ರಮಿಸಬೇಕು. ಹೆಲ್ಮೆಟ್ ಕಡ್ಡಾಯ ನಿರ್ಧಾರ ವನ್ನು ಹಿಂತೆಗೆದುಕೊಳ್ಳಬೇಕು. ಇಲ್ಲದೇ ಇದ್ದಲ್ಲಿ ಬೈಕ್ ಸವಾರರು, ವಿವಿಧ ಸಂಘ ಸಂಸ್ಥೆಗಳ ಜೊತೆಗೂಡಿ ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
 
ವಸಂತ ಅರ್ಕಾಚಾರ್, ಆನಂದ ಜಾಧವ, ಅರವಿಂದ ಏಗನಗೌಡರ, ನಿಜಾಮ ರಾಹಿ, ಮಹೇಶ ಹುಲ್ಲಣ್ಣವರ, ರೆಹಮತ್ ಗೋಲಂದಾಜ, ರವಿ ಹಂದಿಗೋಳ, ಸುರೇಶ ಗೌಡಿಮನಿ, ನವೀನ ಕದಂ, ಸಾಗರ ಮುನವಳ್ಳಿ, ಉಸ್ಮಾನ ಮೀರಜಕರ, ಎಂ.ಎಂ.ಮುಲ್ಲಾ, ಶಿವಾನಂದ ಕವಳಿ, ಬಸೀರ್ ಬಳ್ಳಾರಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.