ADVERTISEMENT

‘ಸಾಧನೆಗೆ ಸಾವಿರ ವರ್ಷ ಆಯಸ್ಸು’

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 9:01 IST
Last Updated 14 ಸೆಪ್ಟೆಂಬರ್ 2013, 9:01 IST

ಹುಬ್ಬಳ್ಳಿ: ‘ಸಾಧನೆಗೆ ಸಾವಿರಾರು ವರ್ಷ ಆಯಸ್ಸು ಇರುತ್ತದೆ. ನಾವು ಮರಣ ಹೊಂದಿದರೂ, ನಮ್ಮ ಸಾಧನೆ ನೂರಾರು ವರ್ಷ ಜೀವಂತವಾಗಿರು­ತ್ತದೆ. ಅಂತಹ ಸಾಧನೆ ಮಾಡುವ ಆಸೆ ನಿಮ್ಮಲ್ಲಿರಲಿ’ ಎಂದು ಕೋತಿರಾಜ ಎಂದೇ ಖ್ಯಾತರಾದ ಜ್ಯೋತಿರಾಜ ಹೇಳಿದರು.

ನಗರದ ಮೂರುಸಾವಿರಮಠದ ಸಭಾ­ಭವನದಲ್ಲಿ ಶುಕ್ರವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಜೀವ­ನ­­ದಲ್ಲಿ ಶೇ 30ರಷ್ಟು ಶಿಕ್ಷಣ ಇದ್ದರೆ, ಶೇ 70ರಷ್ಟು ಪ್ರತಿಭೆ ಇರಬೇಕು. ಒಲಿಂಪಿಕ್‌­ನಲ್ಲಿ, ಇತರೆ ಕ್ರೀಡಾಕೂಟ­ಗಳಲ್ಲಿ ಗಿನ್ನಿಸ್ ದಾಖಲೆ ಮಾಡುವಂತಹ ಪ್ರತಿಭಾ­ವಂತರು ನಮ್ಮ ದೇಶದಲ್ಲಿ­ದ್ದಾರೆ. ಆದರೆ, ಅವರಿಗೆ ಸೂಕ್ತ ಪ್ರೋತ್ಸಾಹ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. 

ಸಾನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಗುರುಸಿದ್ದರಾಜ ಯೋಗೀಂದ್ರ ಸ್ವಾಮೀಜಿ ‘ಗಣೇಶೋ­ತ್ಸವದ ಸಂದರ್ಭ­ದಲ್ಲಿ ವಿವಿಧ ಕ್ಷೇತ್ರಗ­ಳಲ್ಲಿ ಸಾಧನೆ ಮಾಡಿದ ನಾಡಿನ ಗಣ್ಯರನ್ನು ಆಹ್ವಾನಿಸಿ ಗೌರವಿಸುತ್ತಿರು­ವುದು ಸ್ವಾಗ­ತಾರ್ಹ. ಗೋಡೆ ಏರುವುದು ಮಾತ್ರ­ವಲ್ಲ, ದೇಶದ ಬಗ್ಗೆ ಯೋಚಿಸು­ವುದೂ ಗೊತ್ತು ಎಂಬು­ದನ್ನು ಜ್ಯೋತಿರಾಜ ಅವರ ಮಾತು­ಗಳನ್ನು ಕೇಳಿದ ನಂತರ ತಿಳಿಯುತ್ತದೆ. ಸಾಹಸದಲ್ಲಿ ಅವರು ಯುವಕರಿಗೆ ಮಾದರಿಯಾಗಿದ್ದಾರೆ’ ಎಂದು ಶ್ಲಾಘಿಸಿದರು.

ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಹಾಮಂಡಳದ ವತಿ­ಯಿಂದ ಜ್ಯೋತಿರಾಜ ಅವರನ್ನಲ್ಲದೆ, ವನ್ಯಜೀವಿ ಪ್ರೇಮಿ ವಸಂತ ಹಳದಿಪುರ, ಅಂಧ ಕ್ರೀಡಾಪಟು ನಾನು ಪಾಟೀಲ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ಶಿಕ್ಷಕಿ ವೀಣಾ ಅಠವಲೆ, ಕಿರುತೆರೆ ನಟಿ ಸುನಂದಾ ಹೊಸಪೇಟ, ವೈದ್ಯ ಡಾ. ಚಂದ್ರಶೇಖರ ಕಾಚಾಪುರ, ಉದ್ಯಮಿ ಎನ್.ಎಸ್. ಬಿರಾದಾರ, ಭಾವೈಕ್ಯತೆ ಸೇವೆಗಾಗಿ ಸುರೇಶಕುಮಾರ ಪೆಂಡಮ್, ಯುವಜನಾಂಗಕ್ಕೆ ಕೃಷಿ ಪ್ರೋತ್ಸಾಹಕ್ಕಾಗಿ ರಾಜು ಎಂ. ಕೆಂಚನ­ಗೌಡ್ರ ಅವರನ್ನು ಸನ್ಮಾನಿಸಲಾಯಿತು.

ಅಂಧ ಕ್ರೀಡಾಪಟು ನಾನು ಪಾಟೀಲ, ಸಾಹಿತಿ ಆರೂರು ಲಕ್ಷ್ಮಣಶೇಟ್, ರಾಜಾ ದೇಸಾಯಿ ಮಾತನಾಡಿದರು. ಶ್ರೀಶೈಲಪ್ಪ ಶೆಟ್ಟರ್, ಎಸ್.ಎಸ್. ಕಮಡೊಳ್ಳಿಶೆಟ್ರು ಇತರರು ಉಪಸ್ಥಿತರಿದ್ದರು.  ವಿಧಾನಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಸ್ವಾಗತಿಸಿದರು. ಅಮರೇಶ ಹಿಪ್ಪರಗಿ ನಿರೂಪಿಸಿದರು.

ಬಾಲಪ್ರತಿಭೆ ಶಾಂತಲಾ ಹಂಜಿ ನೃತ್ಯಪ್ರದರ್ಶನ ನೀಡಿ ಗಮನ ಸೆಳೆದರು. ಈ ಬಾರಿಯ ಗಣೇಶೋತ್ಸವದಲ್ಲಿ ಮಣ್ಣಿನ ಕಲಾತ್ಮಕ ಗಣಪತಿ ಮೂರ್ತಿ­ಗಳು, ವೇದಿಕೆ ಅಲಂಕಾರ, ವಿದ್ಯುತ್ ಅಲಂಕಾರ, ಸಾಂಸ್ಕೃತಿಕ ಕಾರ್ಯ­ಕ್ರಮ ವಿಭಾಗದಲ್ಲಿ ಗಣೇಶೋತ್ಸವ ಸಮಿತಿಗಳಿಗೆ, ಕಲಾವಿದರಿಗೆ ಪ್ರಶಸ್ತಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.