ADVERTISEMENT

ಧಾರವಾಡ–ಬೆಳಗಾವಿ ಹೊಸ ಮಾರ್ಗಕ್ಕೆ ₹10 ಕೋಟಿ

ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ್‌ ಕಿಶೋರ್ ಮಾಹಿತಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 6:17 IST
Last Updated 4 ಫೆಬ್ರುವರಿ 2023, 6:17 IST

ಹುಬ್ಬಳ್ಳಿ: ‘ಕೇಂದ್ರ ಸರ್ಕಾರವು 2023–24ನೇ ಸಾಲಿನ ಬಜೆಟ್‌ನಲ್ಲಿ ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಘೋಷಿಸಿದ ಅನುದಾನದಲ್ಲಿ ನೈರುತ್ಯ ರೈಲ್ವೆ ವಲಯದ ಧಾರವಾಡ–ಕಿತ್ತೂರು– ಬೆಳಗಾವಿ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ₹10 ಕೋಟಿ ಅನುದಾನ ಮೀಸಲಿಡಲಾಗಿದೆ’ ಎಂದು ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ್‌ ಕಿಶೋರ್ ತಿಳಿಸಿದರು.

ಶುಕ್ರವಾರ ನವದೆಹಲಿಯಲ್ಲಿ ಕೇಂದ್ರದ ರೈಲ್ವೆ ಬಜೆಟ್‌ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ ಬೆನ್ನಲ್ಲೆ, ಬೆಂಗಳೂರಿನಿಂದ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಂಜೀವ್‌ ಕಿಶೋರ್ ಮಾತನಾಡಿದರು. ಮಾಜಿ ಸಚಿವ ದಿ. ಸುರೇಶ ಅಂಗಡಿ ಅವರ ಕನಸಿನ ಯೋಜನೆ ಇದಾಗಿದ್ದು, ಅವರೇ ಯೋಜನೆಗೆ ಅಂಕಿತ ಹಾಕಿದ್ದರು.

‘ಹುಬ್ಬಳ್ಳಿಯಿಂದ ಚಿಕ್ಕಜಾಜೂರು ನುಡುವೆ ರೈಲ್ವೆ ಮಾರ್ಗ ದ್ವಿಪಥಗೊಳಿಸಲು ₹150 ಕೋಟಿ, ಲೋಂಡಾ–ಮೀರಜ್‌ ಮಾರ್ಗಕ್ಕೆ ₹200 ಕೋಟಿ ಮೀಸಲಿಡಲಾಗಿದೆ. ಹುಬ್ಬಳ್ಳಿ–ಚಿಕ್ಕಬಾಣಾವರ ರೈಲ್ವೆ ಮಾರ್ಗ ವಿದ್ಯುದ್ದೀಕರಣಕ್ಕೆ ₹128 ಕೋಟಿ, ಮೀರಜ್‌–ಲೋಂಡಾ ಮಾರ್ಗದ ವಿದ್ಯುದ್ದೀಕರಣಕ್ಕೆ ₹182 ಕೋಟಿ, ಹೊಸಪೇಟೆ–ಹುಬ್ಬಳ್ಳಿ– ವಾಸ್ಕೊ–ಡ–ಗಾಮಾ ಮಾರ್ಗದ ವಿದ್ಯುದ್ದೀಕರಣಕ್ಕೆ ₹20 ಕೋಟಿ ನೀಡಲಾಗುತ್ತದೆ’ ಎಂದು ಹೇಳಿದರು.

ADVERTISEMENT

‘ನೈರುತ್ಯ ರೈಲ್ವೆ ವ್ಯಾಪ್ತಿಯ ಗದಗ–ವಾಡಿ ನಡುವಿನ ಹೊಸ ಮಾರ್ಗ ನಿರ್ಮಾಣಕ್ಕೆ ₹350 ಕೋಟಿ, ಬಾಗಲಕೋಟೆ–ಕುಡಚಿ ಮಾರ್ಗಕ್ಕೆ ₹360 ಕೋಟಿ, ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರ ಮಾರ್ಗಕ್ಕೆ ₹150 ಕೋಟಿ ನಿಗದಿಯಾಗಿದೆ. ಗದಗ–ಹೊಟಗಿ ದ್ವಿಪಥಕ್ಕಾಗಿ ₹170 ಕೋಟಿ, ಹೊಸಪೇಟೆ–ತಿನೈಘಾಟ್‌–ವಾಸ್ಕೊಡಗಾಮ ಮಾರ್ಗಕ್ಕೆ ₹400 ಕೋಟಿ ಮೀಸಲಿಡಲಾಗಿದೆ. ಗದಗ–ಹೊಟಗಿ ರೈಲ್ವೆ ಮಾರ್ಗದ ವಿದ್ಯುದ್ದೀಕರಣಕ್ಕೆ ₹110 ಕೋಟಿ ನೀಡಲಾಗುತ್ತದೆ’ ಎಂದರು.

‘ಕರ್ನಾಟಕದಲ್ಲಿ ಹೊಸ ಮಾರ್ಗ ನಿರ್ಮಾಣಕ್ಕೆ ಒಟ್ಟಾರೆ ₹2,423 ಕೋಟಿ, ದ್ವಿಪಥೀಕರಣಕ್ಕೆ ₹1,529 ಕೋಟಿ ನಿಗದಿಯಾಗಿದೆ. ಮೇಲ್ಸೇತುವೆ ಹಾಗೂ ಕೆಳಸೇತುವೆ ನಿರ್ಮಾಣಕ್ಕೆ ₹242 ಕೋಟಿ, ವಿದ್ಯುದ್ದೀಕರಣಕ್ಕೆ ₹793.3 ಕೋಟಿ ನೀಡಿದೆ. ನೈರುತ್ಯ ರೈಲ್ವೆ ವ್ಯಾಪ್ತಿಯ ಅಮೃತ ಭಾರತ ಯೋಜನೆಯಡಿ 51 ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. 2,243 ಕಿ.ಮೀ ಮಾರ್ಗದಲ್ಲಿ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಕಳೆದ ವರ್ಷ ನೈರುತ್ಯ ರೈಲ್ವೆಯು ₹9,200 ಕೋಟಿ ಆದಾಯ ಗಳಿಸಿ, ಭಾರತೀಯ ರೈಲ್ವೆಯಲ್ಲೇ ನಂ.1 ಸ್ಥಾನ ಗಳಿಸಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.