ADVERTISEMENT

ಹುಬ್ಬಳ್ಳಿ | ಆನ್‌ಲೈನ್‌ ಬೆಟ್ಟಿಂಗ್‌; 1,050 ಪ್ರಕರಣ ದಾಖಲು

ಯುವಜನರಿಗೆ ದಿಢೀರ್‌ ಶ್ರೀಮಂತರಾಗುವ ಆಮಿಷ

ನಾಗರಾಜ ಬಿ.ಎನ್‌.
Published 20 ಡಿಸೆಂಬರ್ 2024, 5:55 IST
Last Updated 20 ಡಿಸೆಂಬರ್ 2024, 5:55 IST
ಆನ್‌ಲೈನ್‌ ಗೇಮಿಂಗ್‌, ಬೆಟ್ಟಿಂಗ್‌–ಪ್ರಾತಿನಿಧಿಕ ಚಿತ್ರ
ಆನ್‌ಲೈನ್‌ ಗೇಮಿಂಗ್‌, ಬೆಟ್ಟಿಂಗ್‌–ಪ್ರಾತಿನಿಧಿಕ ಚಿತ್ರ   

ಹುಬ್ಬಳ್ಳಿ: ಆನ್‌ಲೈನ್‌ ಬೆಟ್ಟಿಂಗ್‌ ದಂಧೆಗಳು ಹುಬ್ಬಳ್ಳಿ–ಧಾರವಾಡ ಮಹಾನಗರದಲ್ಲಿ ಜೋರಾಗಿದೆ. ಮೂರು ವರ್ಷದಲ್ಲಿ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಬರೋಬ್ಬರಿ 1,050 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

2022ರಲ್ಲಿ 351, 2023ರಲ್ಲಿ 470 ಹಾಗೂ 2024ರಲ್ಲಿ 229 ಪ್ರಕರಣಗಳು ಧಾರವಾಡ ಹಾಗೂ ಹುಬ್ಬಳ್ಳಿಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿವೆ.

ಕಾನೂನಿನಡಿ ಅನುಮತಿಯಿಲ್ಲದ ಅಪ್ಲಿಕೇಷನ್‌ ಮೂಲಕ ನಡೆಸುವ ಆನ್‌ಲೈನ್‌ ದಂಧೆಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಹಣ ಕಳೆದುಕೊಳ್ಳುತ್ತಿದ್ದಾರೆ. ಆನ್‌ಲೈನ್‌ ಬೆಟ್ಟಿಂಗ್‌ ಹಾಗೂ ಗೇಮ್‌ನಲ್ಲಿ ಮುಳುಗಿದ್ದ ಹುಬ್ಬಳ್ಳಿ ಸೇರಿ ಬೆಂಗಳೂರು ಮತ್ತು ವಿಜಯಪುರದ ಒಟ್ಟು ಏಳು ಮಂದಿ ಒಂದು ವರ್ಷದ ಅವಧಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ADVERTISEMENT

‘23ಕ್ಕೂ ಹೆಚ್ಚು ಆನ್‌ಲೈನ್‌ ಬೆಟ್ಟಿಂಗ್‌ ಅಪ್ಲಿಕೇಷನ್‌ಗಳು ರಾಜ್ಯದಲ್ಲಿ ಸಕ್ರಿಯವಾಗಿವೆ. ಇವುಗಳಿಗೆ ಕಾನೂನಿನಡಿ ಅನುಮತಿ ಇಲ್ಲ. ಕಡಿಮೆ ಅವಧಿಯಲ್ಲಿ, ಪರಿಶ್ರಮವಿಲ್ಲದೆ ಕೂತಲ್ಲೇ ಹೆಚ್ಚು ಹಣ ಗಳಿಸಬಹುದು ಮತ್ತು ಶ್ರೀಮಂತರಾಗಬಹುದು ಎಂಬ ಆಮಿಷವನ್ನು ಯುವಜನರಿಗೆ ಒಡ್ಡುತ್ತಿವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಕಾಲೇಜು ವಿದ್ಯಾರ್ಥಿಗಳನ್ನು ಹೆಚ್ಚು ಆಕರ್ಷಿಸುವ ಈ ಬೆಟ್ಟಿಂಗ್‌ ಗೇಮ್‌ ಆ್ಯಪ್‌ಗಳು, ಹೊಸ ಟಾಸ್ಕ್‌ ನೀಡುತ್ತ ಹಣ ವರ್ಗಾಯಿಸಿಕೊಳ್ಳುತ್ತವೆ. ದಿಢೀರ್ ಹಣ ಗಳಿಸಬಹುದು ಮತ್ತು ಶ್ರೀಮಂತರಾಗಬಹುದು ಎಂದು ನಂಬಿಕೆ ಮೂಡಿಸುತ್ತವೆ’ ಎಂದು ಸಾಮಾಜಿಕ ಕಾರ್ಯಕರ್ತ ಲಿಂಗರಾಜ ಧಾರವಾಡಶೆಟ್ಟರ್‌ ತಿಳಿಸಿದರು.

‘ಕೆಲವರು ಆನ್‌ಲೈನ್‌ ಲೋನ್‌ ಆ್ಯಪ್‌ ಮೂಲಕ ಸಾಲ ಪಡೆಯುತ್ತಾರೆ. ಅಲ್ಲಿ ಸಾಲ ನೀಡಿದವರು ವಾರದೊಳಗೆ ಮರುಪಾವತಿಗೆ ಹೇಳುತ್ತಾರೆ. ಅದನ್ನು ತುಂಬಲು ಸಾಧ್ಯವಾಗದಿದ್ದರೆ, ಆ್ಯಪ್‌ ಮೂಲಕ ಅವರ ಮೊಬೈಲ್‌ನಲ್ಲಿರುವ ಗ್ಯಾಲರಿ, ಕಾಂಟೆಕ್ಟ್‌ಗಳ ಸಂಪರ್ಕ ಸಾಧಿಸಿ, ಅಶ್ಲೀಲ ಚಿತ್ರಗಳಿಗೆ ಫೋಟೊಗಳನ್ನು ಜೋಡಿಸಿ, ಸ್ನೇಹಿತರಿಗೆ ಕಳುಹಿಸಿ, ಬೆದರಿಸಿ ಹೆಚ್ಚಿನ ಹಣ ವರ್ಗಾಯಿಸಿಕೊಳ್ಳುತ್ತಾರೆ. ಇದರಿಂದ ಮಾನಸಿಕವಾಗಿ ನೊಂದು ಕೆಲವರು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳು ಇವೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

‘‌ಬೆಟ್ಟಿಂಗ್ ದಂಧೆ ವಿರುದ್ಧ ಜಾಗೃತಿ’

‘ಆನ್‌ಲೈನ್‌ ಸೇರಿ ಯಾವುದೇ ಬೆಟ್ಟಿಂಗ್‌ ದಂಧೆಯಲ್ಲಿ ಪಾಲ್ಗೊಳ್ಳದಂತೆ ಪೊಲೀಸ್‌ ಇಲಾಖೆ ಜಾಗೃತಿ ಮೂಡಿಸುತ್ತಿದೆ. ಎಲ್ಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಆನ್‌ಲೈನ್‌ ಹಾಗೂ ಆಫ್‌ಲೈನ್‌ ಬೆಟ್ಟಿಂಗ್‌ ದಂಧೆ ಕುರಿತು ಗುಪ್ತ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಲಾಗುತ್ತದೆ. ಪ್ರಕರಣಗಳನ್ನು ದಾಖಲಿಸಿಕೊಂಡು ದೋಷಾರೋಪ ಪಟ್ಟಿ ಸಹ ಸಲ್ಲಿಸಲಾಗುತ್ತದೆ’ ಎಂದು ಡಿಸಿಪಿ ಮಹಾನಿಂಗ ನಂದಗಾವಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.