ADVERTISEMENT

ಪರಿಶಿಷ್ಟರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ; ಜಕ್ಕಪ್ಪನವರ ಆರೋಪ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 9:55 IST
Last Updated 10 ಆಗಸ್ಟ್ 2021, 9:55 IST

ಹುಬ್ಬಳ್ಳಿ: ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಪರಿಶಿಷ್ಟ ಮತ್ತು ಆದಿವಾಸಿ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನು ಖಂಡಿಸಿ ಆ. 12ರಂದು ದೆಹಲಿಯಲ್ಲಿ ನಡೆಯುವ ಪ್ರತಿಭಟನೆಯಲ್ಲಿ ರಾಜ್ಯದಿಂದಲೂ ಕಾಂಗ್ರೆಸ್‌ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಎಫ್‌.ಎಚ್‌. ಜಕ್ಕಪ್ಪನವರ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಅಂದು ಜಂತರ್‌ ಮಂಥರ್‌ನಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2ರ ವರೆಗೆ ಪ್ರತಿಭಟನೆ ನಡೆಯಲಿದೆ. ಕಾಂಗ್ರೆಸ್‌ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಪಾಲ್ಗೊಳ್ಳಲಿದ್ದಾರೆ’ ಎಂದರು.

‘ಪರಿಶಿಷ್ಟರ ಮೇಲೆ ದೇಶದಾದ್ಯಂತ 45 ಸಾವಿರ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ನಡೆದಿವೆ. ಉತ್ತರ ಪ್ರದೇಶದಲ್ಲಷ್ಟೇ 10 ಸಾವಿರಕ್ಕೂ ಹೆಚ್ಚು ಘಟನೆಗಳು ಜರುಗಿವೆ. ಪೊಲೀಸರು ಅಪರಾಧಿಗಳಿಗೆ ಕಾವಲಾಗಿ ನಿಂತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪರಿಶಿಷ್ಟರ ಹಾಗೂ ಆದಿವಾಸಿಗಳ ಪ್ರಾಣ ರಕ್ಷಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಪರಿಶಿಷ್ಟ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದರಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಮೀಸಲಾತಿ ನೀತಿಗೆ ಉಲ್ಲಂಘನೆಯಾಗುವ ಕೇಂದ್ರ ಸರ್ಕಾರದ ಸೇವೆಯಲ್ಲಿನ ನೇರ ನೇಮಕಾತಿ ಮತ್ತು ಹೊರ ಗುತ್ತಿಗೆಸೇವೆ ರದ್ದುಪಡಿಸಬೇಕು, ಬಿಎಸ್‌ಎನ್‌ಎಲ್‌, ರೈಲ್ವೆ ಮತ್ತು ಇತರೆ ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ಕೈ ಬಿಡಬೇಕು, ದೇಶದ ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಆದ್ಯತೆ ನೀಡಬೇಕು’ ಎಂದು ಆಗ್ರಹಿಸಿದರು.

‘ರಾಷ್ಟ್ರೀಯ ಪರಿಶಿಷ್ಟ ಜಾತಿ ಹಾಗೂ ಪಂಗಡ ಆಯೋಗಕ್ಕೆ ವಿಚಾರಣೆ ಮತ್ತು ಶಿಕ್ಷೆ ನೀಡುವ ಅಧಿಕಾರ ಕೊಡಬೇಕು. ಎಲ್ಲ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಶಿಷ್ಯ ವೇತನ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.