ADVERTISEMENT

ಲಾಕ್‌ಡೌನ್‌ ಪರಿಣಾಮ: ಸದ್ದಿಲ್ಲದೆ ನಡೆದ ಬಾಲ್ಯ ವಿವಾಹ ಯತ್ನಕ್ಕೆ ಬಿತ್ತು ತಡೆ

ಕಲಾವತಿ ಬೈಚಬಾಳ
Published 21 ಜೂನ್ 2021, 4:19 IST
Last Updated 21 ಜೂನ್ 2021, 4:19 IST
ದೀಪಾ ಜಾವೂರ
ದೀಪಾ ಜಾವೂರ   

ಹುಬ್ಬಳ್ಳಿ: ಲಾಕ್‌ಡೌನ್ ಅವಧಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಸದ್ದಿಲ್ಲದೆ ನಡೆದಿದ್ದ ಬಾಲ್ಯ ವಿವಾಹದ ಪ್ರಯತ್ನಗಳನ್ನು ಅಧಿಕಾರಿಗಳು ವಿಫಲಗೊಳಿಸಿದ್ದಾರೆ. ಏಪ್ರಿಲ್‌ನಿಂದ ಜೂನ್‌ 15ರ ಅವಧಿಯಲ್ಲಿ ಇಂಥ 15 ಪ‍್ರಕರಣಗಳು ವರದಿಯಾಗಿವೆ.

ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಒಟ್ಟು 15 ದೂರುಗಳು ಬಂದಿದ್ದು, ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಪೊಲೀಸರು, ಅಂಗನವಾಡಿ ಕಾರ್ಯಕರ್ತೆಯರು ಬಾಲ್ಯ ವಿವಾಹಗಳನ್ನು ತಡೆದಿದ್ದಾರೆ.

‘ಎಲ್ಲ ಪ್ರಕರಣಗಳಲ್ಲೂ 15 ವರ್ಷ ಮೇಲ್ಪಟ್ಟ ಮಕ್ಕಳ ವಿವಾಹಕ್ಕೆ ತಯಾರಿ ನಡೆಸಲಾಗಿತ್ತು. ಕಳೆದ ವರ್ಷ ಲಾಕ್‌ಡೌನ್‌ ಅವಧಿಯಲ್ಲಿ ಅಂದರೆ ಏ.20ರಿಂದ ಮೇ 21ರ ವರೆಗೆ 26 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿದ್ದವು’ ಎಂದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಧಾರವಾಡದ ಜಿಲ್ಲೆಯ ಗ್ರಾಮವೊಂದರಲ್ಲಿ 24 ವರ್ಷದ ಯುವಕ ಮತ್ತು 15 ವರ್ಷದ ಬಾಲಕಿಯ ಪ್ರೇಮ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೂನ್‌ 16ರಂದು ವಿವಾಹ ನಿಶ್ಚಯಿಸಲಾಗಿತ್ತು. ಈ ಕುರಿತು ಮೂರ್ನಾಲ್ಕು ದಿನಗಳ ಮುಂಚಿತವಾಗಿ ಮಕ್ಕಳ ಸಹಾಯವಾಣಿ 1098ಕ್ಕೆ ದೂರು ಬಂದಿದ್ದರಿಂದ ಅಧಿಕಾರಿಗಳು ಕೂಡಲೇ ಅಲ್ಲಿಗೆ ಧಾವಿಸಿ ಪಾಲಕರಲ್ಲಿ ಜಾಗೃತಿ ಮೂಡಿಸಿ ಮದುವೆ ತಡೆದಿದ್ದಾರೆ.

ಮನೆಗಳಲ್ಲಿಯೇ ಬಿಟ್ಟು ಬರುತ್ತೇವೆ: ‘ಬಾಲಕಿಗೆ 18 ವರ್ಷ ತುಂಬುವವರೆಗೂ ಮದುವೆ ಮಾಡದಂತೆ ಪಾಲಕರಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ಬಾಲಕಿಯನ್ನು ಬಾಲ ಮಂದಿರಕ್ಕೆ ಕರೆತರಲಾಗುತ್ತಿತ್ತು. ಆದರೆ, ಕೊರೊನಾ ಸೋಂಕು ಹರಡುವ ಭೀತಿಯಿಂದ ಬಾಲಕಿಯರನ್ನು ಅವರ ಮನೆಗಳಲ್ಲಿಯೇ ಬಿಟ್ಟು ಬರುತ್ತಿದ್ದೇವೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕ್ಷೇತ್ರ ಕಾರ್ಯಕರ್ತ ಮೊಹಮ್ಮದ್‌ ಅಲಿ ತಹಶೀಲ್ದಾರ್‌ ತಿಳಿಸಿದರು.

ಅಸಹಕಾರ: ‘ಬಾಲ್ಯ ವಿವಾಹಗಳನ್ನು ತಡೆಯುವುದಕ್ಕಾಗಿ ತಂಡದೊಂದಿಗೆ ಗ್ರಾಮಗಳಿಗೆ ತೆರಳಿದಾಗ ಅಲ್ಲಿನ ಸ್ಥಳೀಯ ಆಡಳಿತದವರು, ಗ್ರಾಮದ ಹಿರಿಯರು ಅಸಹಕಾರ ತೋರುತ್ತಿದ್ದಾರೆ. ತಿಳಿವಳಿಕೆಯುಳ್ಳವರೂ ನಮ್ಮ ಪ್ರಯತ್ನಕ್ಕೆ ತಡೆಯೊಡ್ಡುತ್ತಿರುವುದು ನೋವಿನ ಸಂಗತಿ’ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದರು.

2 ವರ್ಷ ಜೈಲು ಶಿಕ್ಷೆ

ಬಾಲ್ಯ ವಿವಾಹ ಪ್ರಯತ್ನಗಳು ಕಂಡು ಬಂದರೆ ಮಕ್ಕಳ ಸಹಾಯವಾಣಿ: 1098, ಸಿಡಿಪಿಒ ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಚೇರಿಯ ದೂರವಾಣಿ ಸಂಖ್ಯೆ 0836–2742420ಗೆ ಕರೆ ಮಾಡಿ ಮಾಹಿತಿ ನೀಡಬಹುದು.

ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಗಟ್ಟಿ, ಅವರ ಪೋಷಕರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗುವುದು. ಒಂದು ವೇಳೆ ಇದನ್ನು ಮೀರಿದರೆ ಕಾನೂನು ಕ್ರಮ ಜರುಗಿಸುತ್ತೇವೆ. ಬಾಲ್ಯ ವಿವಾಹ ಮಾಡಿದರೆ ಗರಿಷ್ಠ 2 ವರ್ಷ ಜೈಲು ಶಿಕ್ಷೆ ಮತ್ತು ₹ 1 ಲಕ್ಷದವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

‘ಪತ್ತೆ ಹಚ್ಚುವುದೇ ಸವಾಲು’

‘ಸರ್ಕಾರ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ವಿಧಿಸಿದೆ. ಆದರೆ, ಜನರು ಮಕ್ಕಳ ಮದುವೆ ಮಾಡಲು ಸದ್ದಿಲ್ಲದೆ ಪ್ರಯತ್ನ ನಡೆಸುತ್ತಿದ್ದಾರೆ. ಲಾಕ್‌ಡೌನ್‌ ಕಾರಣ ಬಹುತೇಕರು ಮನೆಗಳಲ್ಲಿಯೇ ಸರಳ ಮದುವೆ ನಡೆಸಲು ಮುಂದಾಗಿರುವುದರಿಂದ ಎಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿವೆ ಎಂದು ಪತ್ತೆ ಹಚ್ಚುವುದೇ ಸವಾಲಾಗಿದೆ’ ಎಂದು ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ ಜಾವೂರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.