ADVERTISEMENT

18 ಪರೀಕ್ಷಾರ್ಥ ಸಾರಿಗೆ ಸಿಬ್ಬಂದಿ ವಜಾ

ಸಿಬ್ಬಂದಿ ಮುಷ್ಕರದ ನಡುವೆಯೂ ಹೆಚ್ಚುತ್ತಿರುವ ಸರ್ಕಾರಿ ಬಸ್‌ಗಳ ಸಂಚಾರ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 17:12 IST
Last Updated 20 ಏಪ್ರಿಲ್ 2021, 17:12 IST
ಹುಬ್ಬಳ್ಳಿಯ ಹಳೇ ಬಸ್‌ ನಿಲ್ದಾಣದಲ್ಲಿ ಮಂಗಳವಾರ ನಿಂತಿದ್ದ ಸರ್ಕಾರಿ ಬಸ್‌ಗಳು
ಹುಬ್ಬಳ್ಳಿಯ ಹಳೇ ಬಸ್‌ ನಿಲ್ದಾಣದಲ್ಲಿ ಮಂಗಳವಾರ ನಿಂತಿದ್ದ ಸರ್ಕಾರಿ ಬಸ್‌ಗಳು   

ಹುಬ್ಬಳ್ಳಿ: ಅಸಮರ್ಪಕ ಹಾಜರಾತಿಯ ಕಾರಣ ನೀಡಿ ಕಾಯಂ ಪೂರ್ವ ಪರೀಕ್ಷಾರ್ಥ ಸೇವೆಯಲ್ಲಿರುವ 18 ಸಾರಿಗೆ ಸಿಬ್ಬಂದಿಯನ್ನು ಮಂಗಳವಾರ ವಜಾ ಮಾಡಲಾಗಿದೆ.

ಹುಬ್ಬಳ್ಳಿ ವಿಭಾಗ ವ್ಯಾಪ್ತಿಯಲ್ಲಿ 12 ಜನ ಚಾಲಕರು, ಇಬ್ಬರು ನಿರ್ವಾಹಕರು ಮತ್ತು ನಾಲ್ವರು ಚಾಲಕ ಕಂ ನಿರ್ವಾಹಕರು ವಜಾ ಆಗಿದ್ದಾರೆ. ನಾಲ್ವರು ಗ್ರಾಮಾಂತರ 1ನೇ ಡಿಪೊ, ಐದು ಜನ 2ನೇ ಡಿಪೊ, ಇಬ್ಬರು ನವಲಗುಂದ ಡಿಪೊ ಮತ್ತು ಏಳು ನೌಕರರು ಕಲಘಟಗಿ ಡಿಪೊದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

’ಕಾಯಂ ಪೂರ್ವ ಪರೀಕ್ಷಾರ್ಥ ಸೇವೆಯಲ್ಲಿರುವ ಸಿಬ್ಬಂದಿ ಈ ಅವಧಿಯಲ್ಲಿ ಕರ್ತವ್ಯಕ್ಕೆ ಗೈರು ಹಾಜರಾಗುವಂತಿಲ್ಲ. ಹಾಜರಾತಿ ಸಮರ್ಪಕವಾಗಿರದಿದ್ದರೆ ಯಾವ ಸೂಚನೆ ಇಲ್ಲದೆ ವಜಾ ಮಾಡಬಹುದಾಗಿದೆ‘ ಎಂದು ಹೇಳಿದ್ದಾರೆ.

ADVERTISEMENT

ಸರ್ಕಾರಿ ಬಸ್‌ ಸೇವೆ ಹೆಚ್ಚಳ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಮಂಗಳವಾರ 14ನೇ ದಿನಕ್ಕೆ ಕಾಲಿಟ್ಟಿದ್ದು, ದಿನದಿಂದ ದಿನಕ್ಕೆ ಸರ್ಕಾರಿ ಬಸ್‌ಗಳ ಸಂಚಾರ ಹೆಚ್ಚಾಗುತ್ತಿದೆ.

ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ 140 ಬಸ್‌ಗಳು ಸಂಚರಿಸಿವೆ. ಗದಗ, ರಾಯಚೂರು, ಬೆಳಗಾವಿ, ವಿಜಯಪುರ, ಇಳಕಲ್‌, ಬಾಗಲಕೋಟೆ, ಹಾವೇರಿ, ದಾವಣಗೆರೆ, ಬೆಂಗಳೂರು, ಹೈದರಾಬಾದ್‌ ಸೇರಿದಂತೆ ವಿವಿಧ ಊರುಗಳಿಗೆ ಬಸ್‌ಗಳು ಸಂಚರಿಸಿದವು. ಹುಬ್ಬಳ್ಳಿ–ಧಾರವಾಡ ನಗರ ಸಾರಿಗೆ ವ್ಯಾಪ್ತಿಯಲ್ಲಿ 131 ಬಸ್‌ಗಳು ಸಂಚಾರ ನಡೆಸಿದವು.

ಮೊಬೈಲ್‌ ಪರಿಶೀಲನೆ?: ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿ ಬೇರೆಯವರಿಗೆ ಮುಷ್ಕರಕ್ಕೆ ಪ್ರಚೋದನೆ ನೀಡುತ್ತಿದ್ದಾರೆಯೇ? ಎಂದು ಪರಿಶೀಲಿಸಲು ಕೆಲ ಅಧಿಕಾರಿಗಳು ಅಲ್ಲಲ್ಲಿ ತಮ್ಮ ಸಿಬ್ಬಂದಿಯ ಮೊಬೈಲ್‌ಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ’ಪ್ರಜಾವಾಣಿ‘ ಜೊತೆ ಮಾತನಾಡಿದ ಹೆಸರು ಹೇಳಲು ಬಯಸದ ಸಿಬ್ಬಂದಿಯೊಬ್ಬರು ’ವೈಯಕ್ತಿಕ ಕಾರಣಕ್ಕೆ ಬಳಸುವ ಮೊಬೈಲ್‌ ಫೋನ್‌ ಅನ್ನು ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದಾರೆ. ಹೀಗಾಗಿ ನಮಗೆ ಖಾಸಗಿ ಬದುಕೇ ಇಲ್ಲದಂತಾಗಿದೆ. ನೌಕರಿಗೆ ತೊಂದರೆಯಾಗಬಹುದು ಎನ್ನುವ ಕಾರಣಕ್ಕಾಗಿ ಹೊರಗಡೆ ಏನನ್ನೂ ಹೇಳುವಂತಿಲ್ಲ‘ ಎಂದು ನೋವು ತೋಡಿಕೊಂಡರು.

ಕರ್ತವ್ಯಕ್ಕೆ ವಾಪಸ್‌ ಬನ್ನಿ: ಬಾಜಪೇಯಿ

ಹುಬ್ಬಳ್ಳಿ: ಬಸ್‌ಗಳ ಸಂಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಉಳಿದ ಸಿಬ್ಬಂದಿ ಕೂಡ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ವಾಪಸ್‌ ಬರಬೇಕು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಮನವಿ ಮಾಡಿದ್ದಾರೆ.

’ಮಂಗಳವಾರದ ಅಂತ್ಯಕ್ಕೆ ಬಸ್‌ಗಳ ಕಾರ್ಯಾಚರಣೆ ಶೇ 45ರಷ್ಟು ಆಗಿದ್ದು, ಸಿಬ್ಬಂದಿಯ ಹಾಜರಾತಿ ಕ್ರಮೇಣ ಹೆಚ್ಚಾಗುತ್ತಿದೆ. ಕೆಲ ದಿನಗಳಲ್ಲಿಯೇ ಸಹಜ ಸ್ಥಿತಿಗೆ ಮರಳುವ ಸಾಧ್ಯತೆ ಅಧಿಕವಾಗಿದೆ‘ ಎಂದು ಹೇಳಿದ್ದಾರೆ.

ಒಟ್ಟು 292 ಸಿಬ್ಬಂದಿಯನ್ನು ವಜಾ ಮಾಡಲಾಗಿದ್ದು, 36 ನೌಕರರನ್ನು ಅಮಾನತು ಮಾಡಲಾಗಿದೆ. 114 ತಾಂತ್ರಿಕ ಸಿಬ್ಬಂದಿ, 75 ಚಾಲಕರು, 78 ನಿರ್ವಾಹಕರು, 183 ಚಾಲಕ ಕಂ ನಿರ್ವಾಹಕರು, ಮೂವರು ಸಾರಿಗೆ ನಿಯಂತ್ರಿಕರು ಹಾಗೂ ಇಬ್ಬರು ಸಂಚಾರ ಮೇಲ್ವಿಚಾರಕರನ್ನು ವರ್ಗಾವಣೆ ಮಾಡಲಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಸಿಬ್ಬಂದಿ ಕರ್ತವ್ಯಕ್ಕೆ ಮರಳಬೇಕು ಎಂದು ಬಾಜಪೇಯಿ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.