ADVERTISEMENT

ಹೆಲ್ಮೆಟ್‌ ಧರಿಸದೇ ಪೆಟ್ರೋಲ್‌ ಇಲ್ಲ!

ಗುರು ಪಿ.ಎಸ್‌
Published 12 ಫೆಬ್ರುವರಿ 2018, 5:03 IST
Last Updated 12 ಫೆಬ್ರುವರಿ 2018, 5:03 IST
ಹುಬ್ಬಳ್ಳಿ ಪೂರ್ವಸಂಚಾರ ಠಾಣೆ ಇನ್‌ಸ್ಪೆಕ್ಟರ್‌ ಎ.ಎ. ಶೇಖ್‌ ಅವರು ರೈಲು ನಿಲ್ದಾಣದ ರಸ್ತೆಯಲ್ಲಿ ಸಾರ್ವಜನಿಕರಿಗೆ ಗುಣಮಟ್ಟದ ಹೆಲ್ಮೆಟ್‌ ಕುರಿತು ಮಾಹಿತಿ ನೀಡಿದರು
ಹುಬ್ಬಳ್ಳಿ ಪೂರ್ವಸಂಚಾರ ಠಾಣೆ ಇನ್‌ಸ್ಪೆಕ್ಟರ್‌ ಎ.ಎ. ಶೇಖ್‌ ಅವರು ರೈಲು ನಿಲ್ದಾಣದ ರಸ್ತೆಯಲ್ಲಿ ಸಾರ್ವಜನಿಕರಿಗೆ ಗುಣಮಟ್ಟದ ಹೆಲ್ಮೆಟ್‌ ಕುರಿತು ಮಾಹಿತಿ ನೀಡಿದರು   

ಹುಬ್ಬಳ್ಳಿ: ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಹಾಕಿಕೊಳ್ಳುವುದನ್ನು ಕಡ್ಡಾಯಗೊಳಿಸಲು ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರೇಟ್‌ ಮಾರ್ಚ್‌ 1ರಿಂದ ಹೆಲ್ಮೆಟ್‌ ಧರಿಸದವರಿಗೆ ಪೆಟ್ರೋಲ್‌ ಇಲ್ಲ(ನೋ ಹೆಲ್ಮೆಟ್‌– ನೋ ಪೆಟ್ರೋಲ್‌) ಅಭಿಯಾನ ಆರಂಭಿಸಲು ನಿರ್ಧರಿಸಿದೆ.

‘ಪೆಟ್ರೋಲ್‌ ಬಂಕ್‌ ಮಾಲೀಕರು ಹಾಗೂ ಹೆಲ್ಮೆಟ್‌ ಮಾರಾಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ರೀತಿ ಅಭಿಯಾನ ಮಾಡಿ ಮಾಡಬೇಕು ಎಂದುಕೊಂಡಿದ್ದೇವೆ. ಹೆಲ್ಮೆಟ್‌ ಯಾರು ಬಳಸುವುದಿಲ್ಲವೋ ಅವರ ಮೇಲೆ ಇನ್ನಷ್ಟು ಒತ್ತಡ ಹೇರಬೇಕು ಎಂಬ ಉದ್ದೇಶದಿಂದ ಈ ಅಭಿಯಾನ ಆರಂಭಿಸಲು ನಿರ್ಧರಿಸಿದ್ದೇವೆ’ ಎಂದು ಸಂಚಾರ ಡಿಸಿಪಿ ಬಿ.ಎಸ್.ನೇಮಗೌಡ ‘‌ಪ್ರಜಾವಾಣಿ’ಗೆ ತಿಳಿಸಿದರು.

‘ಈಗಾಗಲೇ ಬಹುತೇಕ ಪೆಟ್ರೋಲ್‌ ಬಂಕ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇನ್ನು, ಯಾವ ಬಂಕ್‌ಗಳಲ್ಲಿ ಇಲ್ಲವೋ, ಅಲ್ಲಿ ಅಳವಡಿಸಲು ಸೂಚಿಸಲಾಗುವುದು. ಈ ಕ್ಯಾಮೆರಾಗಳನ್ನು ನಿಯಮಿತವಾಗಿ ವೀಕ್ಷಿಸಲಾಗುವುದು. ಹೆಲ್ಮೆಟ್‌ ಧರಿಸದೆ ಬರುವ ವಾಹನ ಸವಾರರ ವಿರುದ್ಧ ಕ್ರಮಕೈಗೊಳ್ಳಲು ಇದರಿಂದ ಸಹಾಯವಾಗುತ್ತದೆ’ ಎಂದು ಅವರು ಹೇಳಿದರು.

ADVERTISEMENT

ಸುಮಾರು ಒಂದು ತಿಂಗಳ ಕಾಲ ನಡೆದ ವಾಹನ ಸವಾರರ ಜಾಗೃತಿ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮಾರ್ಚ್‌ 1ರಿಂದ ಈ ಅಭಿಯಾನ ಕೈಗೊಳ್ಳುತ್ತಿದ್ದು, ಯೋಜನೆಯ ಅನುಷ್ಠಾನಕ್ಕೆ ಆಸಕ್ತ ಸರ್ಕಾರೇತರ ಸಂಸ್ಥೆಗಳ ನೆರವನ್ನೂ ಪಡೆಯಲಾಗುವುದು ಎಂದರು.

ಸಹಕಾರ ಮುಖ್ಯ: ‘ಈ ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲರ ಸಹಕಾರ ಮುಖ್ಯವಾಗುತ್ತದೆ. ಹೆಲ್ಮೆಟ್‌ ಕಡ್ಡಾಯಗೊಳಿಸಿದರೆ ಗ್ರಾಹಕರು ವಾಪಸ್‌ ಹೋಗಬಹುದು. ಇದರಿಂದ ನಷ್ಟವಾಗಬಹುದು ಎಂದು ಕೆಲವು ಪೆಟ್ರೋಲ್‌ ಬಂಕ್‌ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ಎಲ್ಲ ಬಂಕ್‌ನವರೂ ಕಟ್ಟುನಿಟ್ಟಾಗಿ ಈ ನಿಯಮ ಪಾಲಿಸಿದರೆ, ಅನಿವಾರ್ಯವಾಗಿ ಎಲ್ಲರೂ ಹೆಲ್ಮೆಟ್‌ ಧರಿಸಿ ಬರುತ್ತಾರೆ’ ಎಂದು ನೇಮಗೌಡ ಹೇಳಿದರು.

‘ಐಎಸ್‌ಐ ಗುರುತಿನ, ಉತ್ತಮ ಗುಣಮಟ್ಟದ ಹೆಲ್ಮೆಟ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಇಟ್ಟುಕೊಳ್ಳುವಂತೆ ಹೆಲ್ಮೆಟ್‌ ಮಾರಾಟಗಾರರಿಗೂ ತಿಳಿಸುವ ಕಾರ್ಯ ನಡೆಯುತ್ತಿದೆ’ ಎಂದು ಹೇಳಿದರು.

ಪೊಲೀಸರೂ ಕಟ್ಟುನಿಟ್ಟಾಗಬೇಕು: ‘ಹೆಲ್ಮೆಟ್‌ ಧರಿಸದೆ ಬರುವವರಿಗೆ ಪೆಟ್ರೋಲ್‌ ನಿರಾಕರಿಸುವ ಕ್ರಮ ಉತ್ತಮವಾದದ್ದು. ಅಪಘಾತಗಳಲ್ಲಿ ಹೆಚ್ಚಿನ ಹಾನಿ ಸಂಭವಿಸುವುದನ್ನು ಆದಷ್ಟು ತಪ್ಪಿಸಬಹುದು. ಅಪಘಾತದಲ್ಲಿ ಯಾರೇ ಸಾವನ್ನಪ್ಪಿದ್ದರೂ ನೋವಾಗುತ್ತದೆ. ಈ ಅಭಿಯಾನಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ’ ಎಂದು ಮೃತ್ಯುಂಜಯನಗರ ಪೆಟ್ರೋಲ್‌ ಬಂಕ್‌ ಮಾಲೀಕ ಶಿವಣ್ಣ ಮೆಣಸಿನಕಾಯಿ ಹೇಳಿದರು.

‘ಸಂಚಾರ ನಿಯಮಗಳು ಸಾಕಷ್ಟಿವೆ. ಆದರೆ, ಅವು ಯಾವುವೂ ಸರಿಯಾಗಿ ಪಾಲನೆಯಾಗುತ್ತಿಲ್ಲ. ಎಲ್ಲರೂ ಒಗ್ಗೂಡಿ ಶ್ರಮಿಸಿದರೆ ಈ ಅಭಿಯಾನ ಅನುಷ್ಠಾನವಾಗಬಹುದು. ಆದರೆ, ಸಂಚಾರ ಪೊಲೀಸರು ಮೊದಲು ಇದನ್ನು ಸರಿಯಾಗಿ ಪಾಲಿಸಬೇಕು. ಹೆಲ್ಮೆಟ್‌ ಧರಿಸದೆ ವಾಹನ ಚಲಾಯಿಸಿದವರಿಂದ ದುಡ್ಡು ತೆಗೆದುಕೊಂಡು ಹಾಗೇ ಬಿಟ್ಟರೆ ಏನೂ ಪ್ರಯೋಜನವಾಗುವುದಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

‘ಪ್ರಾರಂಭಿಕ ಹಂತದಲ್ಲಿ ಎರಡು–ಮೂರು ಪೆಟ್ರೋಲ್‌ ಬಂಕ್‌ಗೆ ಒಬ್ಬರಂತೆ ಸಂಚಾರ ಕಾನ್‌ಸ್ಟೆಬಲ್‌ ಒಬ್ಬರನ್ನು ನಿಯೋಜಿಸಬೇಕು. ನಿಯಮ ಸರಿಯಾಗಿ ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.

‘ಹೆಲ್ಮೆಟ್‌ ಇರದಿದ್ದರೆ ಪೆಟ್ರೋಲ್‌ ನಿರಾಕರಿಸುವುದು ಉತ್ತಮ ಕ್ರಮ. ವೈಯಕ್ತಿಕವಾಗಿ ನನಗೆ ಈ ನಿಯಮ ಖುಷಿ ತಂದಿದೆ. ಅಪಘಾತದಿಂದಾಗುವ ಹೆಚ್ಚಿನ ಅನಾಹುತವನ್ನು ಆದಷ್ಟು ಕಡಿಮೆ ಮಾಡಲು ಈ ನಿಯಮ ಸಹಕಾರಿಯಾಗಬಹುದು. ಪೊಲೀಸರು ಉತ್ತಮ ನಿರ್ಧಾರ ಕೈಗೊಂಡಿದ್ದಾರೆ’ ಎಂದು ವಾಹನ ಸವಾರ ಶ್ರೀಧರ ಬಾರ್ಕಿ ಹೇಳಿದರು.

ಸಭೆ ನಾಳೆ
ಪೆಟ್ರೋಲ್‌ ಬಂಕ್‌ ಮಾಲೀಕರ ಸಭೆಯನ್ನು ಮಂಗಳವಾರ ಕರೆಯಲಾಗಿದೆ. ಎಲ್ಲ ಮಾಹಿತಿ ಸಂಗ್ರಹಿಸಲು ಪೊಲೀಸರಿಗೆ ತಿಳಿಸಿದ್ದೇನೆ. ಅವರೊಂದಿಗೆ ಚರ್ಚಿಸಿ, ಈ ಅಭಿಯಾನಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಲಾಗುವುದು ಎಂದು ನೇಮಗೌಡ ತಿಳಿಸಿದರು. ಈ ಬಗ್ಗೆ ಈಗಾಗಲೇ, ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿದೆ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.