ಹುಬ್ಬಳ್ಳಿ: ಜನರಿಗೆ ತುರ್ತು ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಧಾರವಾಡ ಜಿಲ್ಲೆಯಲ್ಲಿ ಹೊಸದಾಗಿ ಒಂಬತ್ತು ‘ನಮ್ಮ ಕ್ಲಿನಿಕ್’ ಆರೋಗ್ಯ ಕೇಂದ್ರಗಳನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ.
ಸದ್ಯ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ತಲಾ ಎರಡು, ಕಲಘಟಗಿ, ನವಲಗುಂದ, ಕುಂದಗೋಳ, ಅಳ್ನಾವರ ಹಾಗೂ ಅಣ್ಣಿಗೇರಿಯಲ್ಲಿ ತಲಾ ಒಂದರಂತೆ ಜಿಲ್ಲೆಯಲ್ಲಿ ಒಂಬತ್ತು ‘ನಮ್ಮ ಕ್ಲಿನಿಕ್’ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇದೀಗ ಹೊಸದಾಗಿ ಹುಬ್ಬಳ್ಳಿಯಲ್ಲಿ ಏಳು, ಧಾರವಾಡದಲ್ಲಿ ಎರಡು ‘ನಮ್ಮ ಕ್ಲಿನಿಕ್’ ಆರಂಭಿಸಲು ಸರ್ಕಾರ ಮುಂದಾಗಿದ್ದು, ಶೀಘ್ರದಲ್ಲಿಯೇ ಜನರಿಗೆ ಸೇವೆ ನೀಡಲಿವೆ.
‘ಧಾರವಾಡದಲ್ಲಿ ನವಲೂರು, ಮಾಳಾಪುರ ಹಾಗೂ ಹುಬ್ಬಳ್ಳಿಯಲ್ಲಿ ತಾರಿಹಾಳ, ಗೋಪನಕೊಪ್ಪ, ಮಂಟೂರು ರಸ್ತೆ, ಮೆಹಬೂಬ್‌ನಗರ, ನ್ಯೂ ಮ್ಯಾದಾರ ಓಣಿ, ವಡ್ಡರ ಓಣಿ, ಅರಳಿಕಟ್ಟಿ ಓಣಿಯಲ್ಲಿ ಹೊಸದಾಗಿ ನಮ್ಮ ಕ್ಲಿನಿಕ್ ಆರಂಭಿಸಲಾಗುವುದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಶಶಿ ಪಾಟೀಲ ತಿಳಿಸಿದರು.
ಹುಬ್ಬಳ್ಳಿಯ ನ್ಯೂ ಮ್ಯಾದಾರ ಓಣಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ₹4.57 ಕೋಟಿ ವೆಚ್ಚದಲ್ಲಿ ನಮ್ಮ ಕ್ಲಿನಿಕ್‌ಗಾಗಿ ಕಟ್ಟಡ ನಿರ್ಮಿಸಲಾಗಿದೆ. ಉಳಿದ ‘ನಮ್ಮ ಕ್ಲಿನಿಕ್’ಗಳನ್ನು ಸರ್ಕಾರ ಅನುದಾನ ನೀಡಿದರೆ ಸ್ವಂತ ಕಟ್ಟಡಗಳಲ್ಲಿ, ಇಲ್ಲದಿದ್ದರೆ ಬಾಡಿಗೆ ಕಟ್ಟಡದಲ್ಲಿ ಆರಂಭಿಸಲಾಗುವುದು’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಸದ್ಯ ಅವಳಿ ನಗರದಲ್ಲಿ ಪ್ರತಿ 50 ಸಾವಿರ ಜನಸಂಖ್ಯೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮೀಣ ಪ್ರದೇಶ ಹಾಗೂ 60 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಳಿ ‘ನಮ್ಮ ಕ್ಲಿನಿಕ್’ ಆರಂಭಿಸಲಾಗುತ್ತಿದೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 4ರವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉಪ ಕೇಂದ್ರಗಳಾಗಿ ‘ನಮ್ಮ ಕ್ಲಿನಿಕ್’ ಕಾರ್ಯ ನಿರ್ವಹಿಸುತ್ತವೆ.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ‘ನಮ್ಮ ಕ್ಲಿನಿಕ್’ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸುತ್ತವೆ. ಹೆರಿಗೆ, ನವಜಾತ ಶಿಶುಗಳ ಆರೈಕೆ, ರೋಗ ನಿರೋಧಕ ಸೇವೆಗಳು, ಮಕ್ಕಳು ಮತ್ತು ಹದಿಹರೆಯದವರಿಗೆ ಆರೋಗ್ಯ ಸೇವೆಗಳು, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನ, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ದಂತ ಆರೋಗ್ಯ ಸೇವೆಗಳ ಅನುಷ್ಠಾನ, ತುರ್ತು ವೈದ್ಯಕೀಯ ಸೇವೆಗಳು ಸೇರಿವೆ.
ಜಿಲ್ಲೆಯಲ್ಲಿ ಒಟ್ಟು 18ಕ್ಕೇರಿದ ‘ನಮ್ಮ ಕ್ಲಿನಿಕ್’ ಜನರಿಗೆ ಆರೋಗ್ಯ ಸೇವೆ ಇನ್ನಷ್ಟು ಹತ್ತಿರ ಬಹುತೇಕ ‘ನಮ್ಮ ಕ್ಲಿನಿಕ್’ ಬಾಡಿಗೆ ಕಟ್ಟಡದಲ್ಲೇ ನಿರ್ವಹಣೆ
ಹೊಸದಾಗಿ ಆರಂಭಿಸುವ 9 ‘ನಮ್ಮ ಕ್ಲಿನಿಕ್’ಗಳಿಗೆ ಜಾಗ ಗುರುತಿಸಲಾಗಿದೆ. ಶಾಸಕರೊಂದಿಗೆ ಮಾತುಕತೆ ನಡೆಸಿ ಶೀಘ್ರದಲ್ಲಿಯೇ ಉದ್ಘಾಟನೆ ಮಾಡಿ ಜನರ ಸೇವೆಗೆ ಒದಗಿಸಲಾಗುವುದುಡಾ. ಶಶಿ ಪಾಟೀಲ ಜಿಲ್ಲಾ ಆರೋಗ್ಯಾಧಿಕಾರಿ
ಜಿಲ್ಲೆಯಲ್ಲಿ ಸದ್ಯ ಇರುವ 9 ‘ನಮ್ಮ ಕ್ಲಿನಿಕ್’ಗಳಲ್ಲಿ ಕೆಲವೆಡೆ ವೈದ್ಯರು ಸಿಬ್ಬಂದಿ ಕೊರತೆ ಇದೆ. ಜನರಿಗೆ ಸಮಯಕ್ಕೆ ಸರಿಯಾಗಿ ಆರೋಗ್ಯ ಸೇವೆ ಸಿಗುತ್ತಿಲ್ಲ. ‘ನಮ್ಮ ಕ್ಲಿನಿಕ್’ ಸಮರ್ಪಕ ನಿರ್ವಹಣೆ ಆಗಲಿ– ಪ್ರದೀಪ ನವಲೂರ ಧಾರವಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.