ADVERTISEMENT

ರಾಯಾಪುರದಲ್ಲಿ ಇ.ವಿ ಘಟಕ ಸ್ಥಾಪನೆ

ಬ್ಯಾಟರಿ ಚಾಲಿತ ವಾಹನ ತಯಾರಿಕೆಗೆ ₹5ಸಾವಿರ ಹೂಡಿಕೆ

ಶಿವಕುಮಾರ ಹಳ್ಯಾಳ
Published 11 ಡಿಸೆಂಬರ್ 2021, 21:04 IST
Last Updated 11 ಡಿಸೆಂಬರ್ 2021, 21:04 IST

ಧಾರವಾಡ: ಇಲ್ಲಿನ ರಾಯಾಪುರದಲ್ಲಿಬ್ಯಾಟರಿ ಚಾಲಿತ ವಾಹನ ತಯಾರಿಕಾ ಘಟಕ ಆರಂಭವಾಗಲಿದೆ. ಶುಭಂ ಗೋಲ್ಡ್‌ನ ಮಾಲೀಕ ರಾಜೇಶ ಮೆಹ್ತಾ ಅವರು ₹5 ಸಾವಿರ ಕೋಟಿ ಹೂಡಿಕೆ ಮಾಡಲಿದ್ದಾರೆ.

ಘಟಕ ನಿರ್ಮಾಣಕ್ಕೆ 150 ಎಕರೆ ಜಮೀನು ಗುರುತಿಸಲಾಗಿದೆ. ಮುಂದಿನ ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದ್ದು, ಈ ಘಟಕದಲ್ಲಿ ಶೇ 85ರಷ್ಟು ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ‘ದೇಶದ ಎಲೆಕ್ಟ್ರಿಕ್ ವಾಹನ (ಇ.ವಿ) ಕ್ಷೇತ್ರದಲ್ಲಿ ಅಚ್ಚರಿಯ ಬೆಳವಣಿಗೆ ಆಗುತ್ತಿದೆ. ಈ ಕ್ಷೇತ್ರದಲ್ಲಿ ಬೃಹತ್‌ ಅವಕಾಶಗಳು ತೆರೆಯುವ ಲಕ್ಷಣಗಳು ಗೋಚರಿಸುತ್ತಿವೆ.’ ಎಂದರು.

ADVERTISEMENT

‘ಎಲೆಕ್ಟ್ರಿಕ್ ವಾಹನಗಳ ಸಂಶೋಧನೆ ಮತ್ತು ಅಭಿವೃದ್ಧಿ ಘಟಕಗಳು ಬೆಂಗಳೂರಿನ ಬಿಡದಿ, ಕೋಲಾರ, ಹೊಸೂರು ಹಾಗೂ ಧಾರವಾಡದಲ್ಲಿ ಸ್ಥಾಪನೆಗೊಳ್ಳಲಿವೆ. ರಾಜ್ಯದಲ್ಲಿ ಬ್ಯಾಟರಿ ಚಾಲಿತ ವಾಹನಗಳ ಮಾರಾಟದಲ್ಲಿ ಶೇ 31ರಷ್ಟು ಪ್ರಗತಿ ಕಂಡು ಬಂದಿದ್ದು, ಇದನ್ನು ಇನ್ನಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ರಾಯಾಪುರ ಘಟಕಕ್ಕೆ ಅನುಮೋದನೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ಬ್ಯಾಟರಿ ಚಾಲಿತ ವಾಹನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ತಯಾರಿಕೆ ಹಾಗೂ ತ್ವರಿತ ಅಳವಡಿಕೆ (ಎಫ್‌ಎಎಂಇ) ನೀತಿಯ ಎರಡನೇ ಹಂತದಲ್ಲಿ 2021ರ ಜುಲೈ 20ರವರೆಗೆ 87,659 ಎಲೆಕ್ಟ್ರಿಕ್‌ ವಾಹನಗಳ ಮಾರಾಟಕ್ಕೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಿತ್ತು. ಇದರಲ್ಲಿ 19,270 ವಾಹನಗಳು ಕರ್ನಾಟಕ ಒಂದರಲ್ಲೇ ಮಾರಾಟವಾಗಿವೆ. ಆ ಮೂಲಕ ದೇಶದ ಎಲೆಕ್ಟ್ರಿಕ್‌ ವಾಹನಗಳ ಪ್ರಮುಖ ತಾಣವಾಗಿ ರಾಜ್ಯ ಹೊರಹೊಮ್ಮಿದೆ’ ಎಂದು ನಿರಾಣಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.