ADVERTISEMENT

ಸಚಿವ ಸ್ಥಾನ: ಗೊಂದಲ ಮೂಡಿಸಿದ ಜಾರಕಿಹೊಳಿ ಹೇಳಿಕೆ

ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ: ಶ್ರೀಮಂತ ಪಾಟೀಲ

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 22:21 IST
Last Updated 18 ಜನವರಿ 2020, 22:21 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ    

ಹುಬ್ಬಳ್ಳಿ: ಸಚಿವ ಸ್ಥಾನಕ್ಕಾಗಿ ಕಾಯುತ್ತಿರುವ ಶಾಸಕರ ನಾಯಕತ್ವ ವಹಿಸಿಕೊಂಡಿರುವ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಶನಿವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿಯಾಗಲು ಬಂದಿದ್ದ ವೇಳೆ ನೀಡಿದ ಹೇಳಿಕೆ ಗೊಂದಲಕ್ಕೆ ಕಾರಣವಾಯಿತು.

ಶಾ ಅವರನ್ನು ಭೇಟಿಯಾಗುವ ಉದ್ದೇಶದಿಂದ ಜಾರಕಿಹೊಳಿ ಅವರು ನಗರದ ಡೆನಿಸನ್ ಹೋಟೆಲ್‌ನಲ್ಲಿ ಬಹಳ ಹೊತ್ತಿನಿಂದ ಕಾಯುತ್ತಿದ್ದರು. ಶಾ ಪೌರತ್ವ (ತಿದ್ದುಪಡಿ) ಕಾಯ್ದೆ ಜನಜಾಗೃತಿ ಸಮಾವೇಶ ಮುಗಿಸಿ ಹೋಟೆಲ್‌ಗೆ ಬಂದ ಕೆಲ ನಿಮಿಷಗಳಲ್ಲಿಯೇ ಜಾರಕಿಹೊಳಿ ಹೋಟೆಲ್‌ನಿಂದ ಹೊರಬಂದರು.

ಆಗ ಮಾಧ್ಯಮದವರು ಶಾ ಅವರನ್ನು ಭೇಟಿ ಮಾಡಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ‘ಇಲ್ಲ’ ಎಂದರು. ಭೇಟಿಗೆ ಅವಕಾಶ ಕೊಡಲಿಲ್ಲವೇ ಎಂಬ ಮರುಪ್ರಶ್ನೆಗೆ ‘ನೀವು ಹಾಗೆಯೇ ಬರೆದುಕೊಳ್ಳಿ’ ಎಂದು ಹೇಳಿ ಹೊರಟು ಹೋದರು.

ADVERTISEMENT

ಜಾರಕಿಹೊಳಿ ಅವರ ಜೊತೆಯಿದ್ದ ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ ‘ಶಾ ಅವರನ್ನು ಜಾರಕಿಹೊಳಿ ಭೇಟಿಯಾಗಿ ಚರ್ಚಿಸಿದ್ದಾರೆ. ನೂತನ ಶಾಸಕರನ್ನು ಶಾ ಅಭಿನಂದಿಸಿ ಔಪಚಾರಿಕವಾಗಿ ಕೆಲ ಹೊತ್ತು ಮಾತುಕತೆ ನಡೆಸಿದರು. ಆದರೆ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಗಲಿಲ್ಲ’ ಎಂದು ಸ್ಪಷ್ಟಪಡಿಸಿದರು.

ಶಾ ಅವರನ್ನು ಭೇಟಿಯಾಗಿ ಹೊರಬಂದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶೆಟ್ಟರ್‌ ಮಾತಿಗೆ ಸಹಮತ ವ್ಯಕ್ತಪಡಿಸಿದರು.

ಕೆಲಸ ಮಾಡುವೆ: ಸಚಿವನಾದರೆ ರಾಜ್ಯಕ್ಕೆ, ಶಾಸಕನಾಗಿಯೇ ಉಳಿದರೆ ಕ್ಷೇತ್ರಕ್ಕೆ ಕೆಲಸ ಮಾಡುವೆ. ಯಾರ ಬಳಿಯೂ ಸಚಿವ ಸ್ಥಾನಕ್ಕೆ ಬೇಡಿಕೆ ಸಲ್ಲಿಸುವುದಿಲ್ಲ ಶಾಸಕ ಉಮೇಶ ಕತ್ತಿ ಹೇಳಿದರು.

‘ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಬಂದಿದ್ದೇನೆಯೇ ಹೊರತು; ಸಚಿವ ಸ್ಥಾನ ಕೇಳಲು ಅಲ್ಲ. ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸಂಕಷ್ಟಕ್ಕೆ ಸಿಲುಕುತ್ತದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಮೂರು ವರ್ಷ ಸರ್ಕಾರ ಭದ್ರವಾಗಿರುತ್ತದೆ’ ಎಂದರು.

ಕಾಯುತ್ತೇನೆ: ಸಚಿವ ಸ್ಥಾನ ನೀಡುವ ತನಕ‌ ಕಾಯುತ್ತೇನೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.

‘ನಾನೂ ಸಚಿವ ಸ್ಥಾನದ ಆಕಾಂಕ್ಷಿ. ಸಚಿವ ಸ್ಥಾನ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಮ್ಮೆ ಭರವಸೆ ನೀಡಿದ್ದಾರೆ. ಮಾತು ಉಳಿಸಿಕೊಳ್ಳಲಿದ್ದಾರೆ ಎಂಬ ಭರವಸೆ ಇದೆ’ ಎಂದರು.

ಹಿರೇಕೆರೂರ ಶಾಸಕ ಬಿ.ಸಿ. ಪಾಟೀಲ ಮಾತನಾಡಿ ‘ಅಮಿತ್ ಶಾ ನಮ್ಮ ಭಾಗಕ್ಕೆ ಮೊದಲ ಬಾರಿಗೆ ಬಂದಿದ್ದಾರೆ. ಅವರಿಗೆ ಸನ್ಮಾನ ಮಾಡಿ ಗೌರವ ಸಲ್ಲಿಸಿದ್ದೇನೆ. ಸಚಿವ ಸ್ಥಾನದ ಬಗ್ಗೆ ಚರ್ಚೆ ಮಾಡಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.