ADVERTISEMENT

ಬಸವರಾಜ ಹೊರಟ್ಟಿ ಹೆಸರು ಹೇಳಿಕೊಂಡು ಜೀವ ಬೆದರಿಕೆ: ಕಣ್ಣೀರಿಟ್ಟ ಶಿಕ್ಷಕ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 15:59 IST
Last Updated 20 ಅಕ್ಟೋಬರ್ 2021, 15:59 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ    

ಹುಬ್ಬಳ್ಳಿ: ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧ ಚುನಾವಣಾ ಪ್ರಚಾರ ಮಾಡುತ್ತೀಯಾ? ಎಂದು ಮೂವರು ನನಗೆ ಜೀವ ಬೆದರಿಕೆ ಒಡ್ಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ವಿಜಯನಗರದ ಬಾಲಕಿಯರ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಆರ್‌.ಎಚ್‌. ಪಾಟೀಲ ಆಗ್ರಹಿಸಿದ್ದಾರೆ.

ಕರ್ನಾಟಕ ರಾಜ್ಯ ಶಿಕ್ಷಣಸಂಸ್ಥೆಗಳ ನೌಕರರ ಸಂಘದ ಕೋಶಾಧ್ಯಕ್ಷರೂ ಆದ ಪಾಟೀಲ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಅ. 16ರಂದು ಜೆಡಿಎಸ್‌ ಮುಖಂಡ ಗಜಾನನ ಅಣ್ವೇಕರ ಹಾಗೂ ಇನ್ನಿಬ್ಬರು ಹಿಂಬಾಲಿಸಿಕೊಂಡು ಮನೆಗೆ ಬಂದು ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾರೆ. ಮೊಬೈಲ್‌ ಕಸಿದುಕೊಂಡು ಹೊರಟ್ಟಿ ಅವರ ವಿರುದ್ಧ ಸಂಘ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದೀಯಾ, ನಿನ್ನನ್ನು ಜೀವ ಸಹಿತಬಿಡುವುದಿಲ್ಲವೆಂದು ಬೆದರಿಕೆ ಒಡ್ಡಿದ್ದಾರೆ’ ಎಂದು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಕಣ್ಣೀರು ಸುರಿಸಿದರು. ಈ ಕುರಿತು ಅಶೋಕ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಹೊರಟ್ಟಿ ಅವರು ‘ಶಿಕ್ಷಕನ ಆರೋಪಕ್ಕೂ, ನನಗೂ ಯಾವುದೇ ಸಂಬಂಧವಿಲ್ಲ. ಎಫ್‌ಐಆರ್‌ ದಾಖಲಾಗಿದ್ದು, ಪೊಲೀಸರು ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳುವರು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.