ADVERTISEMENT

ಆರೋಪಿಗಳ ಕಾಲಿಗೆ ಗುಂಡೇಟು; ಇಬ್ಬರ ಬಂಧನ

ಕಳವು ಪ್ರಕರಣ: ಪೊಲೀಸರಿಗೆ ಕಲ್ಲು ತೂರಿ ತಪ್ಪಿಸಿಕೊಳ್ಳಲು ಯತ್ನ: ಒಬ್ಬ ಆರೋಪಿ ಪರಾರಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 4:55 IST
Last Updated 25 ಜುಲೈ 2025, 4:55 IST
ವಿಜಯ ಅಣ್ಣಿಗೇರಿ
ವಿಜಯ ಅಣ್ಣಿಗೇರಿ   

ಧಾರವಾಡ: ಕಳವು ಪ್ರಕರಣದ ಇಬ್ಬರು ಆರೋಪಿಗಳು ತಪ್ಪಿಸಿಕೊಳ್ಳಲು ಓಡುವಾಗ ಪೊಲೀಸರು ಕಾಲಿಗೆ ಗುಂಡು ಹೊಡೆದಿರುವ ಘಟನೆ ಉದಯಗಿರಿಯಲ್ಲಿ ಗುರುವಾರ ನಡೆದಿದೆ.

ರಾಜೀವ್‌ಗಾಂಧಿ ನಗರದ ವಿಜಯ ಅಣ್ಣಿಗೇರಿ (35) ಹಾಗೂ ಮುಜಾಮಿಲ್‌ ಸೌದಾಗರ್‌ (22) ಬಲಗಾಲಿಗೆ ಗುಂಡು ಹೊಡೆಯಲಾಗಿದೆ. ಇಬ್ಬರನ್ನೂ ಹುಬ್ಬಳ್ಳಿಯ ಕೆಎಂಸಿ–ಆರ್‌ಐ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಹುಸೇನ್‌ ಸಾಬ್‌ ಕನವಳ್ಳಿ ಪರಾರಿಯಾಗಿದ್ದಾನೆ.

‘ಗಿರಿನಗರದ ಪೊಲೀಸ್‌ ತರಬೇತಿ ಶಾಲೆ ಸಮೀಪ ಬುಧವಾರ ರಾತ್ರಿ ದುಷ್ಕರ್ಮಿಗಳು ಬೈಕ್‌ ಸವಾರನೊಬ್ಬನಿಗೆ ಹಲ್ಲೆ ನಡೆಸಿ, ಹಣ, ಬೈಕ್ ಕಿತ್ತುಕೊಳ್ಳಲು ಯತ್ನಿಸಿದ್ದರು. ವಿದ್ಯಾಗಿರಿ ಉಪನಗರ ಮತ್ತು ನಗರ ಠಾಣೆ ಪೊಲೀಸರು ಆ ಗ್ಯಾಂಗ್‌ ಪತ್ತೆಗೆ ಕಾರ್ಯಾಚರಣೆ ನಡೆಸಿದಾಗ ಗುರುವಾರ ಆರೋಪಿ ಹುಸೇನ್‌ ಸಾಬ್‌ ಕನವಳ್ಳಿ ಸಿಕ್ಕಿಬಿದ್ದಿದ್ದ. ಗ್ಯಾಂಗ್‌ನ ಸಹಚರರನ್ನು ತೋರಿಸುವುದಾಗಿ ಆತ ಉದಯಗಿರಿ ಸಮೀಪ ಇಟ್ಟಿಗೆಭಟ್ಟಿ ಬಳಿಗೆ ಪೊಲೀಸರನ್ನು ಕರೆದೊಯ್ದಿದ್ದ. ಅಲ್ಲಿ ದ್ವಿಚಕ್ರವಾಹನ ಬಳಿಯಿದ್ದ ಇಬ್ಬರನ್ನು ಹಿಡಿಯಲು ಪೊಲೀಸರು ಮುಂದಾದಾಗಿದ್ಧಾರೆ. ಆಗ ಹುಸೇನ್‌, ಪೊಲೀಸರನ್ನು ದಬ್ಬಿ ಪರಾರಿಯಾಗಿದ್ಧಾನೆ’ ಎಂದು ಹು–ಧಾ ಮಹಾನಗರ ಪಾಲಿಕೆ ಕಮಿಷನರ್‌ ಶಶಿಕುಮಾರ್‌ ತಿಳಿಸಿದರು.

ADVERTISEMENT

‘ದ್ವಿಚಕ್ರವಾಹನ ಬಳಿಯಿದ್ದ ಇಬ್ಬರು ಪೊಲೀಸರ ಕಡೆಗೆ ಕಲ್ಲು ತೂರಿ ಓಡಿದ್ದಾರೆ. ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಅವರು ನಿಲ್ಲಲಿಲ್ಲ. ಆಗ ಪೊಲೀಸರು ಅವರ ಕಡೆಗೆ ಗುಂಡು ಹಾರಿಸಿದ್ದು, ಕಾಲಿಗೆ ತಗುಲಿದೆ. ಇಬ್ಬರನ್ನು ಚಿಕಿತ್ಸೆಗಾಗಿ ಕೆಎಂಸಿ–ಆರ್‌ಐ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳು ಕಲ್ಲು ಎಸೆದಾಗ ಪಿಎಸ್‌ಐ ಮಲ್ಲಿಕಾರ್ಜುನ್ ಹೊಸೂರ್ ಮತ್ತು ಕಾನ್‌ಸ್ಟೆಬಲ್‌ ಇಸಾಕ್ ನದಾಫ್‌ ಅವರಿಗೆ ಸಣ್ಣ ಪೆಟ್ಟಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ತಿಳಿಸಿದರು.

ಮುಜಾಮಿಲ್‌ ಸೌದಾಗರ್‌

‘ವಿವಿಧೆಡೆ 35ಕ್ಕೂ ಹೆಚ್ಚು ಪ್ರಕರಣ’:

ತಪ್ಪಿಸಿಕೊಂಡಿರುವ ಆರೋಪಿ ಹುಸೇನ್‌ ಸಾಬ್‌ ಕನವಳ್ಳಿ ವಿರುದ್ಧ ಕಳ್ಳತನ ಸುಲಿಗೆ ಸಹಿತ ವಿವಿಧ ರೀತಿಯ 35ಕ್ಕೂ ಹೆಚ್ಚು ಪ್ರಕರಣಗಳು ಠಾಣೆಗಳಲ್ಲಿ ದಾಖಲಾಗಿವೆ. ಕರ್ನಾಟಕದಲ್ಲಷ್ಟೇ ಅಲ್ಲದೆ ಮಹಾರಾಷ್ಟ್ರ ಗೋವಾ ಸೇರಿದಂತೆ ಇತರ ರಾಜ್ಯಗಳಲ್ಲೂ ಪ್ರಕರಣಗಳು ದಾಖಲಾಗಿವೆ’ ಎಂದು ಶಶಿಕುಮಾರ್‌ ತಿಳಿಸಿದರು. ‘ವಿಜಯ ಅಣ್ಣಿಗೇರಿ ವಿರುದ್ಧವೂ 35ಕ್ಕೂ ಹೆಚ್ಚು ಪ್ರಕರಣಗಳು ಇವೆ. ಧಾರವಾಡ ಬೆಳಗಾವಿ ಗೋವಾ ಮಹಾರಾಷ್ಟ್ರದಲ್ಲಿ ಪ್ರಕರಣ ದಾಖಲಾಗಿವೆ. ಈತ ಹಲವು ವರ್ಷಗಳಿಂದ ಪೊಲೀಸ್‌ ವಾಂಟೆಡ್‌ ಪಟ್ಟಿಯಲ್ಲಿದ್ದ. ಮುಜಾಮಿಲ್‌ ಸೌದಾಗರ್‌ ವಿರುದ್ಧ 15ಕ್ಕೂ ಹೆಚ್ಚು ಪ್ರಕರಣಗಳಿವೆ. ಸುಮಾರು ಎಂಟು ವರ್ಷಗಳಿಂದ ಕಳವು ಕೃತ್ಯ ಸಕ್ರಿಯವಾಗಿದ್ಧಾನೆ. ‘ಗ್ಯಾಂಗ್‌’ನಲ್ಲಿ ಎಂಟು ಮಂದಿ ಇದ್ಧಾರೆ ಎಂಬ ಮಾಹಿತಿ ಇದೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.