ADVERTISEMENT

ಹಲ್ಲೆ ವಿರೋಧಿಸಿ ವಕೀಲರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 13:33 IST
Last Updated 14 ಅಕ್ಟೋಬರ್ 2019, 13:33 IST
ಧಾರವಾಡ ವಕೀಲರ ಸಂಘದ ಸದಸ್ಯರೊಬ್ಬರ ಮೇಲೆ ಹಲ್ಲೆ ನಡೆಸಿದವರ ಮತ್ತು ದೂರು ನೀಡಲು ಹೋದ ವಕೀಲರೊಂದಿಗೆ ಅನುಚಿತವಾಗಿ ವರ್ತಿಸಿದ ಉಪನಗರ ಠಾಣೆ ಪೊಲೀಸ್‌ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಧಾರವಾಡ ವಕೀಲರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು 
ಧಾರವಾಡ ವಕೀಲರ ಸಂಘದ ಸದಸ್ಯರೊಬ್ಬರ ಮೇಲೆ ಹಲ್ಲೆ ನಡೆಸಿದವರ ಮತ್ತು ದೂರು ನೀಡಲು ಹೋದ ವಕೀಲರೊಂದಿಗೆ ಅನುಚಿತವಾಗಿ ವರ್ತಿಸಿದ ಉಪನಗರ ಠಾಣೆ ಪೊಲೀಸ್‌ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಧಾರವಾಡ ವಕೀಲರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು    

ಧಾರವಾಡ: ವಕೀಲರ ಸಂಘದ ಸದಸ್ಯರೊಬ್ಬರ ಮೇಲೆ ಹಲ್ಲೆ ನಡೆಸಿದ ಮತ್ತು ದೂರು ನೀಡಲು ಹೋದ ವಕೀಲರೊಂದಿಗೆ ಅನುಚಿತವಾಗಿ ವರ್ತಿಸಿದ ಉಪನಗರ ಠಾಣೆ ಪೊಲೀಸ್‌ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಧಾರವಾಡ ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು.

ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಉಂಟಾದ ವಿವಾದದಲ್ಲಿ ಇದೇ 11 ರಂದು ಸಂಘದ ಸದಸ್ಯ ಯಲ್ಲಪ್ಪ ಬೆಳ್ಳಕ್ಕಿ ಎನ್ನುವವರ ಮೇಲೆ ಮಲ್ಲಿಕಾರ್ಜುನ ಕುಂಬಾರ, ಶಿವಾನಂದ ಕುಂಬಾರ, ಭೀಮರಾಜ ಕುಂಬಾರ ಮತ್ತು ಇತರರು ಸೇರಿಕೊಂಡು ವಿನಾಕಾರಣ ಬಡಿಗೆ, ಚಾಕು, ಇಟ್ಟಂಗಿಯಿಂದ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಕೀಲ ಯಲ್ಲಪ್ಪ ಉಪನಗರ ಠಾಣೆಗೆ ದೂರು ನೀಡಲು ಹೋದರೆ, ಪೊಲೀಸರು ದೂರು ದಾಖಲಿಸಿಕೊಳ್ಳದೆ, ಹಲ್ಲೆ ನಡೆಸಿದವರೊಂದಿಗೆ ಶಾಮೀಲಾಗಿ ಹಲ್ಲೆ ಘಟನೆಯನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ ಎಂದು ವಕೀಲರು ದೂರಿದರು.

‘ವಕೀಲ ಯಲ್ಲಪ್ಪ ಅವರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಮತ್ತು ವಕೀಲರೊಂದಿಗೆ ಅನುಚಿತವಾಗಿ ವರ್ತಿಸಿದ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ವಕೀಲರ ಮೇಲೆ ಹಲ್ಲೆ ನಡೆಯದಂತೆ ಸೂಕ್ತ ರಕ್ಷಣೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಗೃಹ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಲಾಗಿದೆ.

ADVERTISEMENT

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಬಿ.ಎಸ್‌.ಗೋಡಸೆ, ರಾಜು ಕೋಟಿ, ಎಸ್‌.ಆರ್. ಮಟ್ಟಿ, ಎನ್‌.ಬಿ.ಖೈರೋನವರ, ಆಶೀಷ್‌ ಮುಗದುಮ್‌, ಎಂ.ಎನ್.ತಾರೀಹಾಳ, ಸಂತೋಷ ಭಾವಿಹಾಳ, ಕೃಷ್ಣಾಜಿ ಪವಾರ, ಪ್ರಕಾಶ ಭಾವಿಕಟ್ಟಿ, ರಾಹುಲ್‌ ಅರವಾಡೆ, ಕಲ್ಮೇಶ ನಿಂಗಣ್ಣವರ, ರೂಪಾ ಕೆಂಗಾನೂರ ಸೇರಿದಂತೆ ಅನೇಕ ವಕೀಲರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.