ADVERTISEMENT

ನವಲಗುಂದ: ಕೃಷಿ ಇಲಾಖೆ ಕಚೇರಿ ಕಟ್ಟಡ ಶಿಥಿಲ

ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಲು ರೈತರ ಮನವಿ

ಪ್ರಜಾವಾಣಿ ವಿಶೇಷ
Published 30 ಜುಲೈ 2024, 4:39 IST
Last Updated 30 ಜುಲೈ 2024, 4:39 IST
ನವಲಗುಂದ ಪಟ್ಟಣದಲ್ಲಿರುವ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ನೌಕರರ ಕೆಲಸ ನಿರ್ವಹಿಸುತ್ತಿರುವುದು ಕೊಠಡಿ ಒಳಭಾಗದಲ್ಲಿ ಸ್ಲ್ಯಾಬ್ ಉದುರಿರುವುದು
ನವಲಗುಂದ ಪಟ್ಟಣದಲ್ಲಿರುವ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ನೌಕರರ ಕೆಲಸ ನಿರ್ವಹಿಸುತ್ತಿರುವುದು ಕೊಠಡಿ ಒಳಭಾಗದಲ್ಲಿ ಸ್ಲ್ಯಾಬ್ ಉದುರಿರುವುದು   

ನವಲಗುಂದ: ಪಟ್ಟಣದಲ್ಲಿರುವ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ಕಟ್ಟಡ ಶಿಥಿಲಗೊಂಡಿದ್ದು, ಕಟ್ಟಡದ ಮೇಲ್ಚಾವಣಿಯ ಸಿಮೆಂಟ್‌ ಕಳಚಿ ಬಿದ್ದಿದೆ.

ಪ್ರತಿ ದಿನ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬೆಳೆ ಹಾನಿ, ಬೆಳೆ ಸಮೀಕ್ಷೆ, ಸಹಾಯಧನ, ಬೀಜ ಗೊಬ್ಬರ ಸೇರಿದಂತೆ ವಿವಿಧ ಕೆಲಸಗಳಿಗಾಗಿ ಕಚೇರಿಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬರುತ್ತಾರೆ.  

ಶಿಥಿಲಗೊಂಡಿರುವ ಕೊಠಡಿಗಳ ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿವೆ. ಮೇಲ್ಚಾವಣಿಯ ಸಿಮೆಂಟ್‌ ಕಿತ್ತು ಪುಡಿಪುಡಿಯಾಗಿ ಬೀಳುತ್ತಿದೆ. ಮೇಲ್ಚಾವಣಿಗೆ ಬಳಸಿದ್ದ ಕಬ್ಬಿಣದ ಸರಳುಗಳು ಹೊರಗೆ ಕಾಣಿಸುತ್ತಿವೆ.

ADVERTISEMENT

ಈ ಹಿಂದೆ ಧಾರವಾಡ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಈ ಕಟ್ಟಡದ ಸ್ಥಿರತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಅಲ್ಲದೆ, ಕಚೇರಿ ಕೆಲಸಗಳಿಗೆ ಬಳಸಲು ಕಟ್ಟಡ ಯೋಗ್ಯವಲ್ಲ ಎಂದು ಹೇಳಿದ್ದರು. ಹೀಗಿದ್ದರೂ ಇದೇ ಕಟ್ಟಡದಲ್ಲಿ ಕಚೇರಿಯನ್ನು ಮುಂದುವರಿಸಲಾಗುತ್ತಿದೆ.

‘ಮೇಲ್ಚಾವಣಿಯ ಸಿಮೆಂಟ್‌ ಕಳಚಿ ರೈತರ ತಲೆ ಮೇಲೆ ಬಿದ್ದು ಪ್ರಾಣಹಾನಿಯಾಗಿದ್ದರೆ ಯಾರು ಹೊಣೆ?  ಏನಾದರೂ ಅನಾಹುತ ಸಂಭವಿಸುವ ಮುನ್ನ ಸಂಬಂಧಿಸಿದವರು ಗಮನ ಹರಿಸಿ ಸುಸಜ್ಜಿತ ಕಟ್ಟಡಕ್ಕೆ ಕಚೇರಿಯನ್ನು ಸ್ಥಾಳಾಂತರಿಸಬೇಕು’ ಎಂಬುದು ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಶಂಕರ ಅಂಬಲಿ ಅವರ ಆಗ್ರಹ.

ಈ ಕುರಿತು ಪ್ರತಿಕ್ರಿಯಿಸಿದ ಸಹಾಯಕ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ ವಿ., ‘ಕಟ್ಟಡ ಶಿಥಿಲಗೊಂಡಿರುವುದು ನಿಜ. ನಗರದಲ್ಲಿ ಬಾಡಿಗೆ ಕಟ್ಟಡ ಸಿಗುತ್ತಿಲ್ಲ. ಹೀಗಾಗಿ ಈ ಕಟ್ಟಡವನ್ನೇ ದುರಸ್ತಿ ಮಾಡಲಾಗುವುದು. ನೂತನ ಕಟ್ಟಡ ನಿರ್ಮಿಸುವ ಕುರಿತು ಶಾಸಕ ಎನ್‌.ಎಚ್‌.ಕೋನರಡ್ಡಿ ಹಾಗೂ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ಹೇಳಿದರು.

1987ರಲ್ಲಿ ಕೃಷಿ ಇಲಾಖೆ ಕಚೇರಿಯ ಕಟ್ಟಡ ನಿರ್ಮಿಸಲಾಗಿದೆ. ಮೇಲ್ಚಾವಣಿಯ ಸಿಮೆಂಟ್ ಕಿತ್ತು ಬಿದ್ದಿರುವುದು ಗಮನಕ್ಕೆ ಬಂದಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದವರಿಗೆ ಸೂಚಿಸಲಾಗುವುದು
–ಎನ್.ಎಚ್.ಕೋನರಡ್ಡಿ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.