ADVERTISEMENT

ಕೃವಿವಿ 32ನೇ ಘಟಿಕೋತ್ಸವ ನಾಳೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 12:40 IST
Last Updated 15 ಜೂನ್ 2019, 12:40 IST

ಧಾರವಾಡ: ‘ಕೃಷಿ ವಿಶ್ವವಿದ್ಯಾಲಯದ 32ನೇ ಘಟಿಕೋತ್ಸವ ಜೂನ್‌ 17ರಂದು ಬೆಳಿಗ್ಗೆ 11.30ಕ್ಕೆ ರೈತ ಜ್ಞಾನಾಭಿವೃದ್ದಿ ಕೇಂದ್ರದಲ್ಲಿ ನಡೆಯಲಿದೆ’ ಎಂದು ಕುಲಪತಿ ಡಾ. ಮಹಾದೇವ ಚೆಟ್ಟಿ ತಿಳಿಸಿದರು.

‘ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ಅಧ್ಯಕ್ಷತೆ ವಹಿಸಿ ಪದವಿ ಮತ್ತು ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ದೆಹಲಿಯ ಕೃಷಿ ಅನುಸಂಧಾನ ಪರಿಷತ್‌ ಮಹಾ ನಿರ್ದೇಶಕ ಡಾ. ತ್ರಿಲೋಚನ ಮಹಾಪಾತ್ರ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಈ ಬಾರಿಯ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡುತ್ತಿಲ್ಲ’ ಎಂದರು.

ADVERTISEMENT

‘ಘಟಿಕೋತ್ಸವದಲ್ಲಿ 1029 ಅಭ್ಯರ್ಥಿಗಳಿಗೆ ವಿವಿಧ ವಿಷಯಗಳಲ್ಲಿ ಪದವಿ ಪ್ರದಾನ ಮಾಡಲಾಗುತ್ತಿದೆ. ಅದರಲ್ಲಿ 793 ಅಭ್ಯರ್ಥಿಗಳು ಹಾಜರಾಗಿ ಪದವಿ ಸ್ವೀಕರಿಸಲಿದ್ದಾರೆ. ಒಟ್ಟು 43 ಬಂಗಾರದ ಪದಕಗಳು ಹಾಗೂ ಒಂಭತ್ತು ನಗದು ಬಹುಮಾನಗಳನ್ನು ಅರ್ಹ ಅಭ್ಯರ್ಥಿಗಳಿಗೆ ನೀಡಲಾಗುವುದು.76 ಅಭ್ಯರ್ಥಿಗಳಿಗೆ ಡಾಕ್ಟರ್ ಆಫ್ ಫಿಲಾಸಫಿ ಪದವಿಯನ್ನು ಪ್ರದಾನ ಮಾಡುತ್ತಿದ್ದು, 64 ಅಭ್ಯರ್ಥಿಗಳು ಹಾಜರಾಗಿ ಪದವಿ ಸ್ವೀಕರಿಸಲಿದ್ದಾರೆ’ ಎಂದು ಹೇಳಿದರು.

‘ಧಾರವಾಡದ ಕೃಷಿ ಮಹಾವಿದ್ಯಾಲಯದ ಸಿದ್ದು ಚಿಂದಿನಾಲ್ಕು ವರ್ಷದ ಕೃಷಿ ಪದವಿಯಲ್ಲಿ 9.17 ಸಿಜಿಪಿಎ ಗಳಿಸಿ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದು ಎರಡು ಚಿನ್ನದ ಪದಕ ಪಡೆದಿದ್ದಾರೆ.ಹನುಮನಮಟ್ಟಿಯ ಕೃಷಿ ಮಹಾವಿದ್ಯಾಲಯದ ಬಿಎಸ್‌ಸಿ ಕೃಷಿ ವಿದ್ಯಾರ್ಥಿ ಎಚ್‌. ಅಜಯಕುಮಾರ ಎರಡು ಚಿನ್ನದ ಪದಕ ಹಾಗೂ ಒಂದು ನಗದು ಬಹುಮಾನ ಪಡೆದಿದ್ದಾರೆ’ ಎಂದರು.

‘ಧಾರವಾಡದ ಕೃಷಿ ಮಹಾವಿದ್ಯಾಲಯದ ನಿಖಿತಾ ಭೋವಿ (ಕೃಷಿ ಮಾರುಕಟ್ಟೆ ಹಾಗೂ ಸಹಕಾರ), ವಿಜಯಪುರದ ಕೃಷಿ ಮಹಾವಿದ್ಯಾಲಯದ ಟಿ. ಹರೀಶ (ಬಿಎಸ್‌ಸಿ-ಕೃಷಿ), ಶಿರಸಿಯ ಅರಣ್ಯ ಮಹಾವಿದ್ಯಾಲಯದ ವರುಣ ಅರಸ್ (ಬಿಎಸ್‌ಸಿ-ಅರಣ್ಯ), ಧಾರವಾಡದ ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ಕೆ.ಜಿ. ಅನುಷಾ (ಬಿ.ಟೆಕ್-ಆಹಾರ ತಾಂತ್ರಿಕತೆ) ಅವರು ತಲಾ ಒಂದು ಬಂಗಾರ ಪದಕವನ್ನು ಸ್ವೀಕರಿಸಲಿದ್ದಾರೆ’ ಎಂದು ಪ್ರೊ. ಚೆಟ್ಟಿ ಹೇಳಿದರು.

‘ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯವು ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ರ‍್ಯಾಂಕಿಂಗ್ ಫ್ರೆಮ್‌ವರ್ಕ್ ಸಂಸ್ಥೆಯ ಮೂಲಕ ಕೈಗೊಂಡ ಸಮೀಕ್ಷೆಯಲ್ಲಿ ರಾಷ್ಟ್ರದ 83ನೇ ಅತ್ಯುತ್ತಮ ವಿಶ್ವವಿದ್ಯಾಲಯವಾಗಿಧಾರವಾಡ ಕೃಷಿ ವಿವಿ ಆಯ್ಕೆಯಾಗಿದೆ’ ಎಂದರು.

ಈಶ್ವರಚಂದ್ರ ಹೊಸಮನಿ, ಡಾ. ಎಚ್‌. ವೆಂಕಟೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.