ADVERTISEMENT

ಅಹಿಂದ ಸಮುದಾಯಕ್ಕೆ ಆದ್ಯತೆ ಇರಲಿ: ಸಿದ್ದಣ್ಣ ತೇಜಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 3:03 IST
Last Updated 22 ಜನವರಿ 2026, 3:03 IST
ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆ ಆವರಣದಲ್ಲಿ ಬುಧವಾರ ಅಹಿಂದ ಕರ್ನಾಟಕ ರಾಜ್ಯ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಅಹಿಂದ ಜಾಗೃತಿ ಸಮಾವೇಶವನ್ನು ಮುಖಂಡರು ಅಂಬಿಗರ ಚೌಡಯ್ಯ ಹಾಗೂ ಸಿದ್ದರಾಮಾನಂದಪುರಿ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿದರು 
ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆ ಆವರಣದಲ್ಲಿ ಬುಧವಾರ ಅಹಿಂದ ಕರ್ನಾಟಕ ರಾಜ್ಯ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಅಹಿಂದ ಜಾಗೃತಿ ಸಮಾವೇಶವನ್ನು ಮುಖಂಡರು ಅಂಬಿಗರ ಚೌಡಯ್ಯ ಹಾಗೂ ಸಿದ್ದರಾಮಾನಂದಪುರಿ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿದರು    

ಹುಬ್ಬಳ್ಳಿ: ‘ಸಿದ್ದರಾಮಯ್ಯ ಅವರು 2028ರವರೆಗೆ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು. ಒಂದು ವೇಳೆ ಒತ್ತಾಯದಿಂದ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೆ, ರಾಜ್ಯದಾದ್ಯಂತ ಕಾಂಗ್ರೆಸ್‌ ಪಕ್ಷದ ವಿರುದ್ಧವೇ ಹೋರಾಟ ಮಾಡಲಾಗುವುದು’ ಎಂದು ಅಹಿಂದ ಕರ್ನಾಟಕ ರಾಜ್ಯ ಒಕ್ಕೂಟದ ಗೌರವಾಧ್ಯಕ್ಷ ಸಿದ್ದಣ್ಣ ತೇಜಿ ಹೇಳಿದರು. 

ನಗರದ ಇಂದಿರಾ ಗಾಜಿನ ಮನೆ ಆವರಣದಲ್ಲಿ ಬುಧವಾರ ಅಹಿಂದ ಕರ್ನಾಟಕ ರಾಜ್ಯ ಒಕ್ಕೂಟದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಹಿಂದ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಹುನ್ನಾರ ನಡೆದಿದೆ. ಸರ್ಕಾರದ ಐದು ವರ್ಷ ಅವಧಿ ಮುಗಿಯುವವರೆಗೂ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ಹೈಕಮಾಂಡ್‌ ನಿರ್ಣಯಿಸಬೇಕು’ ಎಂದರು. 

‘ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಹಿಂದ ಸಮುದಾಯದ ಮುಖಂಡರಿಗೆ ಆದ್ಯತೆ ನೀಡಬೇಕು. ವಿಧಾನ ಪರಿಷತ್ತಿನ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಎಸ್‌ಸಿ., ಎಸ್‌ಟಿ., ಒಬಿಸಿ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು‘ ಎಂದು ಒತ್ತಾಯಿಸಿದರು. 

ADVERTISEMENT

ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಬೀರಲಿಂಗೇಶ್ವರ ಪೂಜಾರಿ ಅವರು, ‘ಅಹಿಂದ ಸಂಘಟನೆ ತಾಲ್ಲೂಕು ಹಾಗೂ ಗ್ರಾಮ ಮಟ್ಟದಲ್ಲಿಯೂ ಇನ್ನೂ ಹೆಚ್ಚು ಬಲಗೊಳ್ಳಬೇಕಿದೆ. ಇದು ಅನಿವಾರ್ಯವೂ ಆಗಿದೆ. ಅಹಿಂದ ಚಿಂತನ–ಮಂಥನ ಕಾರ್ಯಕ್ರಮಗಳು ನಡೆಯಬೇಕಿದೆ. ಇದರಿಂದ ಸಮುದಾಯದ ಜನರಲ್ಲಿ ಸಂಘಟನಾತ್ಮಕ ಮನೋಭಾವ ಹೆಚ್ಚಾಗಲಿದೆ’ ಎಂದರು. 

‘ಅಹಿಂದ ರತ್ನ’ ಪ್ರಶಸ್ತಿ ಪ್ರಧಾನ:  ಇದೇ ವೇಳೆ ಒಕ್ಕೂಟದ ವತಿಯಿಂದ ವಿವಿಧ ಜಿಲ್ಲೆಗಳ ಅಹಿಂದ ಮುಖಂಡರಿಗೆ ‘ಅಹಿಂದ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಒಕ್ಕೂಟದ ಪ್ರಮುಖರಾದ ಶಂಕರ್‌, ವಾಸಪ್ಪ ಎನ್‌. ಹೇಮಂತ್, ವಿಠ್ಠಲ ಗೌಡ ಬಿರಾದಾರ್, ರಾಜು, ಮಹಾಂತೇಶ ಸೇರಿದಂತೆ ವಿವಿಧ ಜಿಲ್ಲೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.