ADVERTISEMENT

ವಿಟಿಯು ಆನ್‌ಲೈನ್ ತರಗತಿಗೆ ವಿದ್ಯಾರ್ಥಿ ಸಂಘಟನೆ ವಿರೋಧ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 13:58 IST
Last Updated 9 ಜೂನ್ 2020, 13:58 IST

ಧಾರವಾಡ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಒತ್ತಾಯದಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಆರಂಭಿಸಿರುವ ಆನ್‌ಲೈನ್ ತರಗತಿಗಳು ಬಹುತೇಕ ವಿದ್ಯಾರ್ಥಿಗಳಿಗೆ ಅರ್ಥವಾಗದೆ ಪರಿತಪಿಸುವಂತಾಗಿದೆ. ತರಗತಿ ಜತೆಗೆ ಆನ್‌ಲೈನ್ ಮೂಲಕವೇ ಪರೀಕ್ಷೆ ನಡೆಸಲು ಹೊರಟಿರುವುದು ಕಳವಳಕಾರಿ ಎಂದು ಎಐಡಿಎಸ್‌ಒ ಕಳವಳ ವ್ಯಕ್ತಪಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ರಣಜೀತ್ ಧೂಪದ, ‘ಆನ್‌ಲೈನ್ ಮೂಲಕ ನಗರ ಪ್ರದೇಶದ ಶೇ 36 ಜನರಿಗೆ ಮಾತ್ರ ಇಂಟರ್‌ನೆಟ್ ಸಂಪರ್ಕ ಲಭಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ಇಂದಿಗೂ ಇದೆ. ರೈತ ಹಾಗೂ ಬಡ ಕುಟುಂಬಗಳು ಮೂಲಸೌಕರ್ಯ ಪಡೆಯಲು ಪರದಾಡುತ್ತಿರುವ ಸಂದರ್ಭದಲ್ಲಿ ಆನ್‌ಲೈನ್ ತರಗತಿಗಳಿಗೆ ದುಬಾರಿ ಗ್ಯಾಜೆಟ್‌ಗಳಿಗೆ ಹಣ ಭರಿಸುವುದು ಕಷ್ಟಸಾಧ್ಯವಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಮನೆ ಸೇರಿದ ಬಹಳಷ್ಟು ವಿದ್ಯಾರ್ಥಿಗಳ ಬಳಿ ಪುಸ್ತಕಗಳು ಇಲ್ಲ. ಹೀಗಾಗಿ ಪಾಠಗಳಿಂದ ವಂಚಿತರಾಗುವ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಬಾರದು’ ಎಂದು ಒತ್ತಾಯಿಸಿದ್ದಾರೆ.

‘ಎಐಡಿಎಸ್‌ಒ ಮತ್ತು ವಿಟಿಯು ವಿದ್ಯಾರ್ಥಿಗಳ ಹೋರಾಟ ಸಮಿತಿಯು ಸಮೀಕ್ಷೆ ನಡೆಸಿದ್ದು, ಕರ್ನಾಟಕದಲ್ಲಿರುವ 210 ಎಂಜಿನಿಯರಿಂಗ್ ಕಾಲೇಜುಗಳಲ್ಲಿನ ನಾಲ್ಕು ಸಾವಿರ ವಿದ್ಯಾರ್ಥಿಗಳನ್ನು ಒಳಗೊಂಡ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ. ಇದರ ಪ್ರಕಾರ ಶೇ 77.3ರಷ್ಟು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿಲ್ಲ. ಶೇ 91.1 ವಿದ್ಯಾರ್ಥಿಗಳಿಗೆ ಮಾಡಿದ ಪಾಠ ಅರ್ಥವಾಗಿಲ್ಲ. ಶೇ 97.1ರಷ್ಟು ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ನಡೆಸಲು ಉದ್ದೇಶಿಸಿರುವ ಪರೀಕ್ಷೆಗೆ ಹಾಜರಾಗಲು ಸಿದ್ಧರಿಲ್ಲ ಎಂಬುದು ದೃಢಪಟ್ಟಿದೆ’ ಎಂದಿದ್ದಾರೆ.

ADVERTISEMENT

‘ಹೀಗಾಗಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯವು ಆದ್ಯತೆಯ ಮೇರೆಗೆ ಆಫ್‌ಲೈನ್ ತರಗತಿಗಳನ್ನು ನಡೆಸಿ ಈ ಆಧಾರದ ಮೇಲೆ ಪರೀಕ್ಷೆಗಳನ್ನು ನಡೆಸಲು ಕ್ರಮ ಕೈಗೊಳ್ಳಬೇಕು. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಅವರ ತಕ್ಷಣದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಅವರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಬೇಕು. ಇಂಥ ಕಷ್ಟದ ಸಮಯದಲ್ಲಿ ವಿದ್ಯಾರ್ಥಿಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಸರ್ಕಾರವು ಅವರ ಎಲ್ಲಾ ಶೈಕ್ಷಣಿಕ ಸಾಲವನ್ನು ಸಂಪೂರ್ಣವಾಗಿ ಮನ್ನಾಮಾಡಬೇಕು’ ಎಂದು ಧೂಪದ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.