ADVERTISEMENT

60;40ರ ಹಂಚಿಕೆ ಬಗ್ಗೆ ಮತ್ತೊಮ್ಮೆ ಚರ್ಚೆ: ಶೆಟ್ಟರ್‌ ಹೇಳಿಕೆ

ಹುಡಾದಿಂದ ನಿವೇಶನಗಳ ಹಕ್ಕುಪತ್ರ ವಿತರಣೆ; ಶೆಟ್ಟರ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2021, 12:47 IST
Last Updated 6 ನವೆಂಬರ್ 2021, 12:47 IST
ಹುಬ್ಬಳ್ಳಿಯ ನವನಗರ ಹುಡಾ ಕಚೇರಿಯಲ್ಲಿ ಶನಿವಾರ ಫಲಾನುಭವಿಗಳು ನಿವೇಶನಗಳ ಹಕ್ಕು ಪತ್ರ ಪ್ರದರ್ಶಿಸಿದರು
ಹುಬ್ಬಳ್ಳಿಯ ನವನಗರ ಹುಡಾ ಕಚೇರಿಯಲ್ಲಿ ಶನಿವಾರ ಫಲಾನುಭವಿಗಳು ನಿವೇಶನಗಳ ಹಕ್ಕು ಪತ್ರ ಪ್ರದರ್ಶಿಸಿದರು   

ಹುಬ್ಬಳ್ಳಿ: ನಿವೇಶನಕ್ಕೆ ಭೂಮಿ ನೀಡುವ ರೈತರಿಗೆ ಶೇ 60ರಷ್ಟು ಮತ್ತು ಹುಡಾಕ್ಕೆ ಶೇ 40ರಷ್ಟು ಪಾಲು ಹಂಚಿಕೊಳ್ಳುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮತ್ತೊಮ್ಮೆ ಚರ್ಚಿಸಲಾಗುವುದು ಎಂದು ಶಾಸಕ ಜಗದೀಶ ಶೆಟ್ಟರ್ ಶನಿವಾರ ಹೇಳಿದರು.

ನವನಗರದ ಹುಡಾ ಕಚೇರಿ ಆವರಣದಲ್ಲಿ ಲಾಟರಿ ಮೂಲಕ ಹಂಚಿಕೆ ಮಾಡಲಾದ ಧಾರವಾಡ ತಾಲ್ಲೂಕಿನ ತಡಸಿನಕೊಪ್ಪ ಗ್ರಾಮದ 786 ನಿವೇಶನಗಳ ಹಕ್ಕು ಪತ್ರಗಳ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಗರಾಭಿವೃದ್ಧಿ ಇಲಾಖೆಯ ಈಗಿನ ನಿಯಮದ ಪ್ರಕಾರ ಭೂಮಿ ನೀಡುವ ರೈತರು ಹಾಗೂ ಸರ್ಕಾರಕ್ಕೆ ತಲಾ ಶೇ 50ರಷ್ಟು ಭೂಮಿ ಹಂಚಿಕೆಯಾಗಬೇಕು. ಸರ್ಕಾರದವರು ನಿವೇಶನಗಳನ್ನಾಗಿ ಪರಿವರ್ತಿಸಿ ಅಭಿವೃದ್ಧಿಪಡಿಸಿ ರೈತರಿಗೆ ಕೊಡಬೇಕಿದೆ. ಇದನ್ನು ಶೇ 60ಕ್ಕೆ ಹೆಚ್ಚಿಸಬೇಕು ಎನ್ನುವ ಬೇಡಿಕೆ ಬಹಳಷ್ಟು ವರ್ಷಗಳಿಂದ ಇದೆ. ಈ ನಿಯಮ ಜಾರಿಯಾದರೆ ಭೂಮಿ ನೀಡಲು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರುತ್ತಾರೆ. ಇದರ ಬಗ್ಗೆ ಇನ್ನೊಂದು ಬಾರಿ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು’ ಎಂದರು.

ADVERTISEMENT

‘ಕಡಿಮೆ ಹಣದಲ್ಲಿ ಜನರಿಗೆ ವಾರ್ಷಿಕ ಕನಿಷ್ಠ ಐದು ಸಾವಿರ ನಿವೇಶನಗಳನ್ನಾದರೂ ಹಂಚಿದರೆ ಅಕ್ರಮ ಬಡಾವಣೆಗಳಿಗೆ ಕಡಿವಾಣ ಬೀಳಲಿದೆ. ಇನ್ನು ಕೆಲ ವರ್ಷಗಳಲ್ಲಿ ಹಳ್ಳಿಗಳು ಹಾಗೂ ನಗರ ಪ್ರದೇಶಗಳ ಅಂತರ ಜನಸಂಖ್ಯೆ ಆಧಾರದಲ್ಲಿ ಕಡಿಮೆಯಾಗುತ್ತದೆ. ಆದ್ದರಿಂದ ಈಗಿನಿಂದಲೇ ಎರಡೂ ಕಡೆ ಸೌಲಭ್ಯಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಉತ್ತಮವಾಗಿ ನಗರಾಭಿವೃದ್ಧಿ ಯೋಜನೆ ರೂಪಿಸಬೇಕು. ಸ್ಮಾರ್ಟ್‌ ಸಿಟಿ ಕಾಮಗಾರಿಗಳು ವೇಗವಾಗಿ ಮುಗಿಯಬೇಕು’ ಎಂದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ ‘ಭೂ ಸ್ವಾಧೀನ ಮಾಡಿಕೊಂಡ ಬಳಿಕ ಸರ್ಕಾರ ಬೇಗನೆ ಹಣ ಕೊಡುವುದಿಲ್ಲ ಎನ್ನುವ ಬೇಸರ ರೈತರಲ್ಲಿದೆ. ಆದ್ದರಿಂದ ಒಪ್ಪಂದ ಮಾಡಿಕೊಂಡ ಒಂದು ವರ್ಷದಲ್ಲಿ ರೈತರಿಗೆ ಹಣ ಕೊಡಬೇಕು’ ಎಂದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ ‘2047ರ ವೇಳೆಗೆ ಭಾರತ ಹೇಗಿರಬೇಕು ಎನ್ನುವುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಮಗ್ರ ಯೋಜನೆ ರೂಪಿಸಿದ್ದಾರೆ. ಸ್ಥಳೀಯ ಅಧಿಕಾರಿಗಳು ಕೂಡ ಆ ವೇಳೆಗೆ ಧಾರವಾಡ ಜಿಲ್ಲೆ ಹೇಗಿರಬೇಕು ಎನ್ನುವುದರ ಕುರಿತು ಯೋಜನೆ ರೂಪಿಸಬೇಕು’ ಎಂದರು.

ಹುಡಾ ಅಧ್ಯಕ್ಷ ನಾಗೇಶ್ ಕಲಬುರ್ಗಿ, ಆಯುಕ್ತ ಎನ್‌.ಎಚ್‌. ಕುಮಣ್ಣನವರ, ಸಕ್ಕರೆ ಖಾತೆ ಸಚಿವ ಶಂಕರಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಪಾಲಿಕೆ ಸದಸ್ಯರು, ಹುಡಾ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

ಫ್ಲೈ ಓವರ್‌ ಪ್ರತಿಷ್ಠೆಯಲ್ಲ: ಜೋಶಿ

ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಫ್ಲೈ ಓವರ್‌ ನಿರ್ಮಾಣಕ್ಕೆ ಈಗಾಗಲೇ ಕೇಂದ್ರದಿಂದ ಹಣ ಬಂದಿದೆ. ಇದರ ವಿನ್ಯಾಸದ ಬಗ್ಗೆ ಗೊಂದಲಗಳಿದ್ದು, ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಅಶೋಕ ಶೆಟ್ಟರ್‌ ನೇತೃತ್ವದಲ್ಲಿ ತಜ್ಞರ ತಂಡ ಚರ್ಚೆ ನಡೆಸುತ್ತಿದೆ. ಫ್ಲೈ ಓವರ್‌ ನಿರ್ಮಾಣವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಹಿಂದೆ ಸಭೆ ಮಾಡಿದಾಗ ಹತ್ತು ದಿನದಲ್ಲಿ ವರದಿ ಕೊಡುವಂತೆ ಸೂಚಿಸಲಾಗಿತ್ತು. ಹಲವು ಬಾರಿ ಸಭೆಗಳಾದ ಕಾರಣ ವಿಳಂಬವಾಗಿದ್ದು, ಒಂದು ವಾರದಲ್ಲಿ ವರದಿ ಕೊಡುವಂತೆ ತಿಳಿಸಿದ್ದೇನೆ ಎಂದರು.

ಮೋದಿ ಹೆಸರಿಡಲು ಆಗ್ರಹ

ಪ್ರತಿಯೊಬ್ಬರೂ ಮನೆ ಹೊಂದಬೇಕು ಎನ್ನುವ ಆಶಯ ಪ್ರಧಾನಿ ನರೇಂದ್ರ ಮೋದಿ ಅವರದ್ದಾಗಿದ್ದು, ತಡಸಿನಕೊಪ್ಪ ಹಾಗೂ ಲಕಮನಹಳ್ಳಿಯಲ್ಲಿ ಹುಡಾದಿಂದ ಮಾಡಲಾದ ಲೇ ಔಟ್‌ಗಳಿಗೆ ಮೋದಿ ಅವರ ಹೆಸರು ನಾಮಕರಣ ಮಾಡಬೇಕು ಎಂದು ಜಗದೀಶ ಶೆಟ್ಟರ್‌ ಆಗ್ರಹಿಸಿದರು.

ಇದಕ್ಕೆ ದನಿಗೂಡಿಸಿದ ಶಾಸಕ ಅರವಿಂದ ಬೆಲ್ಲದ ‘ಮೋದಿ ಅವರ ಹೆಸರಿಡಬೇಕು ಎನ್ನುವ ಬೇಡಿಕೆ ನನ್ನದೂ ಆಗಿದ್ದು, ಹುಡಾದ ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.