
ಅಳ್ನಾವರ: ‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ವಿಜ್ಞಾನ ಮತ್ತು ಗಣಿತ ವಿಷಯದ ಜ್ಞಾನ ಮುಖ್ಯ. ಗ್ರಾಮೀಣ ಭಾಗದ ಮಕ್ಕಳಿಗೆ ಈ ವಿಷಯಗಳ ಕಲಿಕೆಯಲ್ಲಿ ವಿಶೇಷ ಆಸಕ್ತಿ ಮೂಡಿಸಲು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆ (ಎಸ್‍ವಿವೈಎಂ) ನಿರಂತರವಾಗಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ’ ಎಂದು ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥ ಕೆ.ಎಸ್. ಜಯಂತ ಹೇಳಿದರು.
ಸಮೀಪದ ಬೆಣಚಿ ಗ್ರಾಮದ ಸರ್ಕಾರಿ ಕನ್ನಡ ಶಾಲೆಯಲ್ಲಿ ಸೋಮವಾರ ಎಸ್‍ವಿವೈಎಂ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಗಣಿತ ಮತ್ತು ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಹಿತದೃಷ್ಟಿಯಿಂದ ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದ ಚಟುವಟಿಕೆ ಪುಸ್ತಕ ವಿತರಿಸಲಾಗುತ್ತಿದ್ದು, ಇದರ ಲಾಭ ಪಡೆದುಕೊಳ್ಳಬೇಕು’ ಎಂದರು.
ಮುಖ್ಯಶಿಕ್ಷಕ ಎಸ್.ಎಸ್. ಬೆನಕನಾಳ ಹಾಗೂ ಹೂಲಿಕೇರಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಏಕನಾಥ ಹೊನಗೇಕರ ಮಾತನಾಡಿ, ಮಕ್ಕಳ ಕಲಿಕಾ ಪ್ರಗತಿಗೆ ಸಂಸ್ಥೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕಾಶೇನಟ್ಟಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಕೆ. ಬಿ. ತಾಯನ್ನವರ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಸಂದೀಪ ಪಾಟೀಲ ಮಾತನಾಡಿದರು.
ಗ್ರಾಮಿಣ ಸಮುದಾಯಗಳಿಗೆ ಸಮಾನ ಶಿಕ್ಷಣ ಪ್ರಕಲ್ಪದ ಯೋಜನಾ ನಿರ್ದೇಶಕ ಚಂದ್ರಶೇಖರಯ್ಯ ಸೊಪ್ಪಿಮಠ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಎಂ. ಡಿ. ಹೊಸಮನಿ ಹಾಗೂ ಶಿಕ್ಷಣ ಸಂಯೋಜಕ ಕುಕಡೊಳ್ಳಿ, ಶಿವಾಜಿ ಪಾಟೀಲ, ಸಂದೀಪ ಗುಂಡೂಪಕರ, ಅಶ್ವಿನಿ ಕೊಂಡೆ, ಗೋಪಾಲಕೃಷ್ಣ ಕಮಲಾಪುರ ಹಾಗೂ ವಿವಿಧ ಶಾಲೆಗಳ ಶಿಕ್ಷಕರು ಇದ್ದರು.
ಪ್ರಕಲ್ಪದ ಸಂಯೋಜಕ ರಘೋತ್ತಮ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ವಸ್ತ್ರದಮಠ ನಿರೂಪಿಸಿ, ಅನ್ನಪೂರ್ಣೇಶ್ವರಿ ಕಲ್ಯಾಣಕರ ಸ್ವಾಗತಿಸಿದರು. ಮಧು ದಬಾಲಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.