ಅಳ್ನಾವರ: ಪ್ರಸ್ತುತ ಸಮಾಜದಲ್ಲಿ ಶಿಕ್ಷಕ ವೃತ್ತಿ ಅಪಾರವಾದ ಗೌರವ ಹೊಂದಿದೆ. ಸ್ಪರ್ಧಾತ್ಮಕ ಪ್ರಪಂಚ ಎದುರಿಸುವ ಜ್ಞಾನ, ಕಲೆ ಮತ್ತು ಕೌಶಲ ಬಿಂಬಿಸುವ ಮೌಲ್ಯ ನೀಡುವುದರ ಜೊತೆಗೆ ವಿದ್ಯಾರ್ಥಿ ಬದುಕಲ್ಲಿ ನೈತಿಕತೆ ತುಂಬಲು ಶಿಕ್ಷಕರು ಶ್ರಮಿಸಬೇಕು ಎಂದು ಲೈಟ್ ಹೌಸ್ ಚರ್ಚನ ಧರ್ಮಗುರು ಚಂದ್ರಶೇಖರ ಸದಮಲ ಹೇಳಿದರು.
ಇಲ್ಲಿನ ತೆಲುಗು ಸಮಾಜದವರು ಕಾಳೆ ಪ್ಲಾಟ್‍ನ ಲೈಟ್‍ಹೌಸ್ ಚರ್ಚನ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೀತಿ ಕಥೆ ಹೇಳುವ ಮೂಲಕ ಮಕ್ಕಳಲ್ಲಿ ಮಾನವೀಯ ಮೌಲ್ಯ ತುಂಬಬೇಕು. ಸಮಾಜದ ಉನ್ನತಿಗೆ ಶಿಕ್ಷಕರ ಕೊಡುಗೆ ವಿಶಿಷ್ಟ ಎಂದರು.
ಶಿಕ್ಷಕರ ನಡೆ ಸದಾ ಉತ್ತಮವಾಗಿರಬೇಕು. ಮಕ್ಕಳು ಶಿಕ್ಷಕರನ್ನು ಸದಾ ಹಿಂಬಾಲಿಸುತ್ತಾರೆ ಎಂಬುದನ್ನು ಮರೆಯಬಾರದು. ಸಮಾಜಕ್ಕೆ ಮಾದರಿ ವ್ಯಕ್ತಿಯನ್ನಾಗಿ ರೂಪಿಸುವ ಗುರುತರ ಜವಾಬ್ದಾರಿ ಹೊತ್ತ ಗುರು ಮಕ್ಕಳಲ್ಲಿ ಸಾತ್ವಿಕತೆಯ ಬೀಜ ಬಿತ್ತಿ ಶಿಕ್ಷಣದ ದೀಪದಿಂದ ಸಮಾಜವನ್ನು ಸದಾ ಪ್ರಜ್ವಲಿಸುವಂತೆ ಮಾಡಬೇಕು ಎಂದರು.
ಉಪನ್ಯಾಸಕರಾಗಿ ಆಗಮಿಸಿದ ಸರ್ಕಾರಿ ಉರ್ದು ಶಾಲೆಯ ಶಿಕ್ಷಕ ಏಕನಾಥ ಶಿಂಪಿ ಮಾತನಾಡಿ, ಗುರು ಶಿಷ್ಯರ ಪರಂಪರೆ ಶ್ರೇಷ್ಠವಾದದ್ದು, ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಬದುಕಿನ ಬದ್ದತೆ ಉಣ ಬಡಿಸಬೇಕು. ಸಾಧನೆ ಮಾಡಲು ಸದಾ ಪ್ರೋತ್ಸಾಹಿಸಬೇಕು. ಬಿಕ್ಕಟ್ಟಿನ ಸಮಯದಲ್ಲಿ ಸೂಕ್ತ ಸಲಹೆ ನೀಡಬೇಕು. ಸಮಾಜದಲ್ಲಿ ಸಾಮರಸ್ಯ ಕಾಪಾಡಲು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.
ಬಡವರಿಗೆ ಉನ್ನತ ಶಿಕ್ಷಣ ದೊರೆಯುವ ವ್ಯವಸ್ಥೆ ಆಗಬೇಕು. ಪಾಲಕರು ಕಷ್ಟಪಟ್ಟು ಮಕ್ಕಳನ್ನು ಓದಿಸಬೇಕು. ಒಳ್ಳೇಯ ಗುರು, ಸ್ನೇಹಿತ ಸಂಪಾದಿಸಲು ವಿದ್ಯಾರ್ಥಿ ಹಾತೊರೆಯಬೇಕು. ಶಿಕ್ಷಕರು ಮುಂದಿನ ಉತ್ತಮ ರಾಷ್ಟ್ರ ನಿರ್ಮಾಣದ ಜವಾಬ್ದಾರಿಯನ್ನು ಸರಿಯಾಗಿ ನಿಬಾಯಿಸಬೇಕು ಎಂದು ಒತ್ತಿ ಹೇಳಿದರು.
ಶಿಕ್ಷಕಿಯರಾದ ಸುಜಾತಾ ದಮ್ಮು, ಎಸ್ಟರ್ ನಾರ್ವಾ, ಶಶಿ ಪಾಟೀಲ, ಮೋನಿಕಾ, ಪದ್ಮಾ ಸಾತೇರಿ, ವಿಜಯ ಜಂಗಮ್, ಶಿಲ್ವಿ , ಪ್ರಿಯಾಂಕ ಕೊಕಾಣಿ, ದಿವ್ಯಾ ದೇವರಕೊಂಡ, ಸುಮಲತಾ, ಶಾಂತಿಪ್ರಿಯಾ ಅವರನ್ನು ಶಾಲು, ಫಲಪುಷ್ಪ ನೀಡಿ ಸತ್ಕರಿಸಲಾಯಿತು.
ತೆಲುಗು ಸಮಾಜದ ಅಧ್ಯಕ್ಷ ಬಿ.ಸಿ. ದಮ್ಮು ಕಾರ್ಯಕ್ರಮ ಉದ್ಘಾಟಿಸಿದರು. ಸಮಾಜದ ಹಿರಿಯರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯೆ ಸುನಂದಾ ಕಲ್ಲು, ಬ್ಲೇಸಿಂಗ್ ಯೂತ್ ಮಿಷನ್ ಚರ್ಚನ ಸಭಾ ಪಾಲಕ ಜಾನ ಮಿಲ್ಟನ್, ಎಸ್. ರಘುನಾದನ್, ಜಾಕೋಬ ಖನ್ನಾ, ಲಕ್ಷ್ಮಿ ಶಿಂಪಿ ,
ಡೆವಿಡ್ ಸಿಂಗೆನಮು ಇದ್ದರು.
ಶಶಿಕಲಾ ಪೀಟರ ಅತಿಥಿಗಳನ್ನು ಪರಿಚಯಿಸಿದರು. ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರು ಹಾಗೂ ತೆಲುಗು ಸಮಾಜದ ಹಿರಿಯ ಯುಹಾನ ಸಿಂಗೆನಮು ವಂದಿಸಿದರು. ಪ್ರಿಯಾಂಕ ಹಾಗೂ ಸಂಗಡಿಗರು ಪ್ರಾರ್ಥಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.