ADVERTISEMENT

ಬೇಲೂರಲ್ಲಿ ಜಕಣಾಚಾರಿ ಪ್ರತಿಮೆ ಸ್ಥಾಪಿಸಿ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ರಾಮಪ್ಪ ಬಡಿಗೇರ ಮನವಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2025, 16:21 IST
Last Updated 8 ಜನವರಿ 2025, 16:21 IST
ಧಾರವಾಡದ ಆಲೂರು ವೆಂಕಟರಾವ್ ಭವನದಲ್ಲಿ ಏರ್ಪಡಿಸಿದ್ದ ಅಮರಶಿಲ್ಪಿ ಜಕಣಾಚಾರಿ ಜಯಂತ್ಯುತ್ಸವವನ್ನು  ಮೇಯರ್ ರಾಮಪ್ಪ ಬಡಿಗೇರ ಉದ್ಘಾಟಿಸಿದರು
ಧಾರವಾಡದ ಆಲೂರು ವೆಂಕಟರಾವ್ ಭವನದಲ್ಲಿ ಏರ್ಪಡಿಸಿದ್ದ ಅಮರಶಿಲ್ಪಿ ಜಕಣಾಚಾರಿ ಜಯಂತ್ಯುತ್ಸವವನ್ನು  ಮೇಯರ್ ರಾಮಪ್ಪ ಬಡಿಗೇರ ಉದ್ಘಾಟಿಸಿದರು   

ಧಾರವಾಡ: ‘ಅಮರಶಿಲ್ಪಿ ಜಕಣಾಚಾರಿ, ಬೇಲೂರು–ಹಳೇಬೀಡಿನಲ್ಲಿ ಕೆತ್ತಿರುವ ಶಿಲ್ಪಕಲೆಯ ದೇಶದ ವಾಸ್ತುಶಿಲ್ಪ ವೈಭವಕ್ಕೆ ಸಾಕ್ಷಿಯಾಗಿದೆ. ಬೇಲೂರಿನ ಚನ್ನಕೇಶವ ದೇಗುಲದ ಮುಂದೆ ಅವರ ಪ್ರತಿಮೆ ಸ್ಥಾಪಿಸಲು ರಾಜ್ಯ ಸರ್ಕಾರ ಕ್ರಮವಹಿಸಬೇಕು' ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ರಾಮಪ್ಪ ಬಡಿಗೇರ ಹೇಳಿದರು.

ನಗರದ ಆಲೂರು ವೆಂಕಟರಾವ್ ಸಾಂಸ್ಖೃತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬುಧವಾರ ಏರ್ಪಡಿಸಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಮಾತನಾಡಿದರು.

‘ಜಕಣಾಚಾರಿ ಅವರು ತಮ್ಮ ಜೀವನವನ್ನು ಕಲೆಗಾಗಿ ಮುಡಿಪಿಟ್ಟಿದ್ದರು. ನಾಡಿನ ಹಲವು ದೇವಾಲಯಗಳನ್ನು ನಿರ್ಮಿಸಿದ್ದಾರೆ. ಈ ಕಲೆ, ವಾಸ್ತುಶಿಲ್ಪ ವೈಭವವನ್ನು ಸ್ಮರಿಸುವ ಮೂಲಕ ಶಿಲ್ಪಕಲೆಗಳನ್ನು ಪೋಷಿಸಬೇಕು’ ಎಂದು ಹೇಳಿದರು.

ADVERTISEMENT

ವಿರೂಪಾಕ್ಷ ಬಿ. ಬಡಿಗೇರ ಅವರು ಜಕಣಾಚಾರಿಜೀವನದ ಕುರಿತು ಉಪನ್ಯಾಸ ನೀಡಿದರು. ಕಲಾವಿದರಾದ ರವೀಂದ್ರಾಚಾರ್ಯ ಮತ್ತು ಕೃಷ್ಣಾ ಹಿತ್ತಾಳೆ ಅವರನ್ನು ಸನ್ಮಾಸಲಾಯಿತು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಮೌನೇಶ್ವರ ಧರ್ಮನಿಧಿ ಸಂಸ್ಥೆಯ ಅಧ್ಯಕ್ಷ ಮಹಾರುದ್ರಪ್ಪ ಬಡಿಗೇರ, ವಿಶ್ವಕರ್ಮ ಜಿಲ್ಲಾ ಮಹಾಸಭಾ ಅಧ್ಯಕ್ಷ ಕಾಳಪ್ಪ ಬಡಿಗೇರ, ವಸಂತ ಅರ್ಕಾಚಾರ್‌, ನಿರಂಜನ ಬಡಿಗೇರ, ವಿಠ್ಠಲ ಕಮ್ಮಾರ, ಸಂತೋಷ ಬಡಿಗೇರ, ಲಕ್ಷ್ಮೀ ಬಡಿಗೇರ ಇದ್ದರು.

‘ಕಲೆ ರಕ್ಷಣೆಗೆ ಯೋಜನೆ’

‘ನಮ್ಮ ನಾಡಿನಲ್ಲಿರುವ ಕಸೂತಿ ಕುಂಬಾರಿಕೆ ಬಟ್ಟೆ ಬುಟ್ಟಿ ಹಾಸಿಗೆ ನೇಯುವುದು ಮೊದಲಾದ ಕಲೆಗಳು ನಶಿಸುತ್ತಿವೆ. ಇವುಗಳ ಸಂರಕ್ಷಣೆ ಮತ್ತು ಮುಂದುವರಿಕೆಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.