
ಧಾರವಾಡ: ‘ಜಾತಿ ಪದ್ಧತಿಯ ನಿರ್ಮೂಲನೆಗಾಗಿ ಬುದ್ಧ, ಬಸವಣ್ಣ, ಅಂಬೇಡ್ಕರ್ ಮೊದಲಾದ ಮಹನೀಯರು ಶ್ರಮಿಸಿದರು. ವಿಶ್ವವಿದ್ಯಾಲಯಗಳಲ್ಲಿನ ಅಧ್ಯಯನ ಕೇಂದ್ರಗಳು ಮಹನೀಯರ ವಿಚಾರಧಾರೆಗಳು, ಆದರ್ಶಗಳನ್ನು ಜನರಿಗೆ ತಲುಪಿಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಕರ್ನಾಟಕ ವಿಶ್ವವಿದ್ಯಾಲಯದ ಬಿ.ಆರ್. ಅಂಬೇಡ್ಕರ್ ಅಧ್ಯಯನ ವಿಭಾಗ, ಬೆಂಗಳೂರಿನ ಅಂಬೇಡ್ಕರ ತರಬೇತಿ ಸಂಶೋಧನಾ ವಿಸ್ತರಣಾ ಕೇಂದ್ರ ಹಾಗೂ ಸಮಾಜಕಲ್ಯಾಣ ಇಲಾಖೆ ವತಿಯಿಂದ ವಿ.ವಿಯ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಶನಿವಾರ ನಡೆದ ‘ವಿಶ್ವನಾಯಕ ಬಿ.ಆರ್. ಅಂಬೇಡ್ಕರ್ ಅವರ ಪರಂಪರೆ ಮತ್ತು ಪ್ರಸ್ತುತತೆ’ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.
‘ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಎಲ್ಲರಿಗೂ ಸಮಾನ ಹಕ್ಕುಗಳು ಹಾಗೂ ಅವಕಾಶ ಕಲ್ಪಿಸಿದ್ದಾರೆ. ಅವರ ವಿಚಾರಧಾರೆಗಳನ್ನು ಎಲ್ಲರೂ ಪಾಲಿಸಬೇಕು’ ಎಂದು ತಿಳಿಸಿದರು.
‘ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಮಹಿಳಾ ಸಮಾನತೆ, ಸಬಲೀಕರಣಕ್ಕೆ ಅವಕಾಶ ನೀಡಿದರು. ಸಾಮಾಜಿಕ, ಆರ್ಥಿಕ ಸೇರಿದಂತೆ ಎಲ್ಲ ಕ್ಷೇತ್ರಗಳ ಸುಧಾರಣೆಗೆ ಶ್ರಮಿಸಿದರು. ಅವರ ವಿಚಾರಧಾರೆಗಳು ಅಧ್ಯಯನಕ್ಕೆ ಸೀಮಿತವಾಗಬಾರದು, ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.
ಸಹಾಯಕ ಪ್ರಾಧ್ಯಾಪಕ ಸುರೇಶ ಗೌತಮ, ಅಂಬೇಡ್ಕರ್ ಅಧ್ಯಯನ ವಿಭಾಗದ ಸಂಯೋಜಕ ಸುಭಾಷಚಂದ್ರ ನಾಟೀಕಾರ ಮಾತನಾಡಿದರು. ವಿ.ವಿ ಕುಲಸಚಿವ ಶಂಕರ ವಣಿಕ್ಯಾಳ, ಪರೀಕ್ಷಾಂಗ ಕುಲಸಚಿವ ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ, ಹಣಕಾಸು ಅಧಿಕಾರಿ ಪ್ರದೀಪಕುಮಾರ, ಸಿಂಡಿಕೇಟ್ ಸದಸ್ಯರಾದ ರಾಬರ್ಟ್ ದದ್ದಾಪುರಿ, ಶ್ಯಾಮ ಮಲ್ಲನಗೌಡರ, ಮಹೇಶ ಹುಲ್ಲೆಪ್ಪನವರ, ರವೀಂದ್ರ ಕಾಂಬಳೆ ಇದ್ದರು.
ಅಂಬೇಡ್ಕರ್ ವಾದ ಭಾಷಣದ ವಿಚಾರವಷ್ಟೇ ಅಲ್ಲ; ಅದು ಜೀವನ ಕ್ರಮ. ಅವರ ವಿಚಾರಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕುಎಫ್.ಎಚ್.ಜಕ್ಕಪ್ಪನವರ ವಿಧಾನ ಪರಿಷತ್ ಸದಸ್ಯ
ಅಂಬೇಡ್ಕರ್ ಅವರು ಬಹುಮುಖಿ ವ್ಯಕ್ತಿತ್ವವನ್ನು ಹೊಂದಿದ್ದರು. ವಿದ್ಯಾರ್ಥಿಗಳು ಅವರ ಜೀವನದಿಂದ ಪ್ರೇರಣೆ ಪಡೆಯಬೇಕುಪ್ರೊ.ಎ.ಎಂ.ಖಾನ್ ಕುಲಪತಿ ಕರ್ನಾಟಕ ವಿಶ್ವವಿದ್ಯಾಲಯ
‘ಜನರ ಹಿತ ಕಾಪಾಡುವ ಸಂವಿಧಾನ’
‘ಅಂಬೇಡ್ಕರ್ ಅವರು ಪರಿಶಿಷ್ಟ ಜಾತಿಯವರಿಗೆ ಮಾತ್ರ ಮೀಸಲಾತಿ ನೀಡಿದ್ದಾರೆ ಎಂಬುದು ತಪ್ಪುಕಲ್ಪನೆ. ಅವರು ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದ್ದಾರೆ. ಸಂವಿಧಾನದ ಮೂಲಕ ದೇಶದ ಆಡಳಿತ ಹೇಗೆ ನಡೆಯಬೇಕು ಎಂಬುದನ್ನು ಸೂಚಿಸಿದ್ದಾರೆ’ ಎಂದು ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದರು. ‘ಸಂವಿಧಾನವು ದೇಶದ ಜನರ ಸಮಗ್ರ ಹಿತ ಕಾಪಾಡುತ್ತದೆ. ಯಾವುದೇ ಸಮಸ್ಯೆಗೆ ಸಂವಿಧಾನದ ಮೂಲಕ ಪರಿಹಾರ ಕಂಡುಕೊಳ್ಳಬಹುದು’ ಎಂದರು.