ADVERTISEMENT

ಧಾರವಾಡ | ಬೆಳಿಗ್ಗೆ ಪರಾರಿ, ಸಂಜೆ ಬಂಧನ

ಪರಾರಿಯಾಗಿ ಆತಂಕ ಸೃಷ್ಟಿಸಿದ್ದ ಸೋಂಕಿತ ಕಳ್ಳತನ ಆರೋಪಿ ಗದಗ ಬೆಟಗೇರಿಯಲ್ಲಿ ಪತ್ತೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 16:37 IST
Last Updated 3 ಜುಲೈ 2020, 16:37 IST

ಹುಬ್ಬಳ್ಳಿ: ಕೋವಿಡ್‌–19 ಇರುವುದುದೃಢಪಟ್ಟಿದ್ದ ಕಳ್ಳತನದ ಆರೋಪಿ ಶುಕ್ರವಾರ ಬೆಳಗಿನ ಜಾವ ಇಲ್ಲಿನ ಕಿಮ್ಸ್‌ ಆಸ್ಪತ್ರೆಯಿಂದ ಪರಾರಿಯಾಗಿದ್ದ. ಸಂಜೆ ಆತನನ್ನು ಗದಗ ಬೆಟಗೇರಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಳಿಗ್ಗೆ 5.30ರ ಸುಮಾರಿಗೆ ಕೋವಿಡ್‌ ಚಿಕಿತ್ಸಾ ವಾರ್ಡ್‌ನಿಂದ ಹೊರಗಡೆ ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇಬ್ಬರು ಪೊಲೀಸರು ಕಾವಲಿದ್ದರೂ, ಅವರ ಕಣ್ತಪ್ಪಿಸಿ ಪರಾರಿಯಾಗಿದ್ದ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸ್ ತಂಡ, ಚಿಕಿತ್ಸೆಗಾಗಿ ಮತ್ತೆ ಕಿಮ್ಸ್‌ಗೆ ಕರೆ ತಂದಿದೆ.

ಹೀಗಿತ್ತು ಕಾರ್ಯಾಚರಣೆ:ಸೋಂಕಿತ ಆರೋಪಿ ತಪ್ಪಿಸಿಕೊಳ್ಳುತ್ತಿದ್ದಂತೆಯೇ ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರ್‌ ಜಿ. ದಿಲೀಪ್‌ ಆರೋಪಿಯ ಪತ್ತೆಗೆ ಮೂವರು ಪೊಲೀಸರ ಎರಡು ಪ್ರತ್ಯೇಕ ವಿಶೇಷ ತಂಡಗಳನ್ನು ರಚಿಸಿದ್ದರು.

ADVERTISEMENT

ಗದಗ ಬೆಟಗೇರಿಯ ಮಿಷನ್ ಕಾಂಪೌಂಡ್ ಚರ್ಚ್‌ ಹತ್ತಿರದ ಮನೆಯಿಂದಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಕಿಮ್ಸ್‌ ಆಸ್ಪತ್ರೆಯಿಂದ ಮತ್ತೆ ಅಲ್ಲಿಗೆ ಹೋಗಿರಬಹುದು ಎನ್ನುವ ಶಂಕೆಯಿಂದ ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆರೋಪಿ ಮನೆಯಲ್ಲೇ ಇರುವ ವಿಚಾರವನ್ನು ಗದಗ ಬೆಟಗೇರಿ ಪೊಲೀಸರು ಖಚಿತಪಡಿಸಿಕೊಂಡ ಬಳಿಕ ವಿಶೇಷ ತಂಡದಲ್ಲಿದ್ದ ಹುಬ್ಬಳ್ಳಿ ಉಪನಗರ ಠಾಣೆಯ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಗದಗ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ್ದ ಆಂಬುಲೆನ್ಸ್‌ನಲ್ಲಿ ಆರೋಪಿಯನ್ನು ಕರೆ ತರಲಾಗಿದೆ. ಆರೋಪಿ ವಿರುದ್ಧ ವಿದ್ಯಾನಗರ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಕಳ್ಳತನಕ್ಕೆ ಸಂಬಂಧಿಸಿದಂತೆ ಉಪನಗರ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಇತ ಮೂಲತ: ಬಾದಾಮಿ ತಾಲ್ಲೂಕಿನ ಮುಷ್ಟಗಿರಿ ಗ್ರಾಮದವನಾಗಿದ್ದಾನೆ.

ನಿಟ್ಟುಸಿರು: ಸೋಂಕಿತ ಆರೋಪಿ ಪರಾರಿಯಾದ ಸುದ್ದಿ ಸಾಮಾಜಿಕ ತಾಣಗಳಲ್ಲಿ ಜೋರು ಸುದ್ದಿಯಾಗುತ್ತಿದ್ದಂತೆಯೇ ಜನ ಸೋಂಕು ತಗುಲುವ ಭೀತಿಯಿಂದ ಆತಂಕಕ್ಕೆ ಒಳಗಾಗಿದ್ದರು. ಈಗ ಪುನಃ ಬಂಧಿಸಿರುವ ಕಾರಣ ಜನ ನಿಟ್ಟುಸಿರು ಬಿಡುವಂತಾಗಿದೆ.

ತನಿಖೆಗೆ ಸೂಚನೆ: ಕಿಮ್ಸ್‌ನಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸ್‌ ಸಿಬ್ಬಂದಿ ಕರ್ತವ್ಯ ಲೋಪ ಎಸಗಿದ್ದು ಮೇಲ್ನೊಟಕ್ಕೆ ಕಂಡು ಬಂದಿದೆ. ಅವರ ವಿರುದ್ಧ ವಿಚಾರಣೆ ನಡೆಯಲಿದೆ. ಈ ಕುರಿತು ತನಿಖೆಗೆ ಸೂಚಿಸಿದ್ದೇನೆ ಎಂದು ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರ್‌ ಆರ್‌. ದಿಲೀಪ್‌ ತಿಳಿಸಿದರು.

ಅಗತ್ಯಬಿದ್ದರೆ ಕಿಮ್ಸ್‌ನ ಕೋವಿಡ್‌ ವಾರ್ಡ್‌ ಉಸ್ತುವಾರಿಗೆ ಇನ್ನಷ್ಟು ಪೊಲೀಸರನ್ನು ನಿಯೋಜಿಸಲಾಗುವುದು. ಸೋಂಕಿತರು ವಾರ್ಡ್‌ನಿಂದ ಹೊರಹೋಗದಂತೆ ಎಚ್ಚರ ವಹಿಸಲು ಕಟ್ಟುನಿಟ್ಟಾಗಿ ಕರ್ತವ್ಯ ನಿಭಾಯಿಸಬೇಕು ಎಂದು ಸಿಬ್ಬಂದಿಗೆ ಸೂಚಿಸಲಾಗಿದೆ ಎಂದರು.

‘ವಕೀಲರನ್ನು ಭೇಟಿಯಾಗಬೇಕು ಎನ್ನುತ್ತಿದ್ದ’: ಕಳ್ಳತನದ ಆರೋಪವಿರುವ ಕಾರಣ ಜಾಮೀನು ಪಡೆಯುವ ಸಲುವಾಗಿ ವಕೀಲರನ್ನು ಭೇಟಿಯಾಗಲು ಬಂದಿದ್ದೇನೆ; ನನ್ನನ್ನು ಬಿಟ್ಟುಬಿಡಿ ಎನ್ನುತ್ತಿದ್ದ. ಆತನ ಮನವೊಲಿಸಿ ಸೋಂಕಿನ ಅಪಾಯದ ಬಗ್ಗೆ ತಿಳಿ ಹೇಳಲಾಯಿತು. ಕೆಲ ಹೊತ್ತಿನ ಬಳಿಕ ಆತನೂ ಒಪ್ಪಿಕೊಂಡ ಎಂದು ಕಾರ್ಯಾಚರಣೆಗೆ ತೆರಳಿದ್ದ ತಂಡದಲ್ಲಿದ್ದ ಉಪನಗರ ಠಾಣೆಯ ಪೊಲೀಸರೊಬ್ಬರು ತಿಳಿಸಿದರು.

ಹುಬ್ಬಳ್ಳಿಯಿಂದ ಗದಗ ಬೇಟಗೇರಿಗೆ ಹೇಗೆ ಹೋಗಿದ್ದ? ಎನ್ನುವುದರ ಬಗ್ಗೆ ಆರೋಪಿ ಸ್ಪಷ್ಟವಾಗಿ ಏನನ್ನೂ ಹೇಳುತ್ತಿಲ್ಲ. ಒಂದು ಸಲ ಲಾರಿ, ಇನ್ನೊಂದು ಸಲ ಬಸ್‌ನಲ್ಲಿ ಹೋಗಿದ್ದೆ ಎಂದು ಬೇರೆ ಬೇರೆ ಹೇಳಿಕೆ ನೀಡುತ್ತಿದ್ದಾನೆ. ಮನೆಗೆ ಬಂದ ಕೆಲ ಹೊತ್ತಿನಲ್ಲಿಯೇ ಅಕ್ಕಪಕ್ಕದ ಮನೆಯವರು ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆತ ಮನೆಯಲ್ಲಿ ಒಬ್ಬನೇ ಇದ್ದ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.