ಪ್ರಾತಿನಿಧಿಕ ಚಿತ್ರ
ಹುಬ್ಬಳ್ಳಿ: ‘ರಾಜ್ಯ ಅಂಗನವಾಡಿ ನೌಕರರ ಸಂಘ ಮತ್ತು ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ವತಿಯಿಂದ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ. 1ರಿಂದ ರಾಜ್ಯದಾದ್ಯಂತ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗಿದೆ’ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮಿ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ನಾಲ್ಕು ವಿಭಾಗಗಳಲ್ಲಿ ಹೋರಾಟ ನಡೆಯಲಿದೆ. ಉತ್ತರ ಕರ್ನಾಟಕ ಭಾಗದ ಎಂಟು ಜಿಲ್ಲೆಯ ಕಾರ್ಯಕರ್ತರು ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಕಚೇರಿ ಎದುರು ಹೋರಾಟ ಆರಂಭಿಸಲಿದ್ದಾರೆ. ಈ ತಿಂಗಳ ಕೊನೆಯ ವಾರದಲ್ಲಿ ರಾಜ್ಯದ ಎಲ್ಲ ಸಂಸದರಿಗೆ ಮನವಿ ಪತ್ರ ಸಲ್ಲಿಸುತ್ತೇವೆ’ ಎಂದರು.
‘ಬಿಸಿಯೂಟ ಮತ್ತು ಆಶಾ ಯೋಜನೆ ಸಿಬ್ಬಂದಿ ಸೇವೆಯನ್ನು ಕಾಯಂಗೊಳಿಸಬೇಕು. ಈ ಯೋಜನೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಶಾಸನಾತ್ಮಕ ಸೌಲಭ್ಯ ನೀಡಬೇಕು, 2018ರಿಂದ ಅನ್ವಯವಾಗುವಂತೆ ಅಂಗನವಾಡಿ ನೌಕರರ ವೇತನ ಹೆಚ್ಚಳ ಮಾಡಬೇಕು, ಸ್ಥಳೀಯ ಆಹಾರ ಪದಾರ್ಥಗಳ ಪೂರೈಕೆಗೆ
ಒತ್ತು ನೀಡಬೇಕು, ಹೆಚ್ಚುವರಿ ಕೆಲಸ ನೀಡದೆ, ಆರು ಗಂಟೆ ನಿಗದಿಪಡಿಸಬೇಕು ಸೇರಿದಂತೆ ಹತ್ತು ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಲಾಗುವುದು’ ಎಂದು
ಹೇಳಿದರು.
‘ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಬಂದ ಮೇಲೆ ಈ ಯೋಜನೆಗಳಿಗೆ ನೀಡುವ ಅನುದಾನ ಕಡಿಮೆಯಾಗಿದೆ. ಶೇ 90ರಷ್ಟು ದೊರೆಯುತ್ತಿದ್ದ ಅನುದಾನ ಶೇ 60ಕ್ಕೆ ಇಳಿಕೆಯಾಗಿದೆ. ಬೆಲೆ ಏರಿಕೆ ನೆಪದಲ್ಲಿ ಬಜೆಟ್‌ನಲ್ಲಿಯೂ ಹಣ ಮೀಸಲಿಡುತ್ತಿಲ್ಲ. ಇದರಿಂದ ಗುಣಮಟ್ಟದ ಆಹಾರ ಪೂರೈಸಲು ಸಾಧ್ಯವಾಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖಂಡರಾದ ಮಹೇಶ ಪತ್ತಾರ, ಮಾಲಿನಿ ಮೇಸ್ತಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.