ADVERTISEMENT

ರಾಜ್ಯದಲ್ಲಿ ಅಭಿವೃದ್ಧಿ ವಿರೋಧಿ ಸರ್ಕಾರ: ಎನ್.ರವಿಕುಮಾರ್ ಆರೋಪ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 6:50 IST
Last Updated 16 ಅಕ್ಟೋಬರ್ 2025, 6:50 IST
ಎನ್. ರವಿಕುಮಾರ್
ಎನ್. ರವಿಕುಮಾರ್   

ಹುಬ್ಬಳ್ಳಿ: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ. ಇದು ಅಭಿವೃದ್ಧಿಯ ವಿರೋಧಿ ಸರ್ಕಾರ’ ಎಂದು ವಿಧಾನ ಪರಿಷತ್‌ ವಿಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಆರೋಪಿಸಿದರು.

ಇಲ್ಲಿನ ಕಾರವಾರ ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಅನೇಕ ಜಿಲ್ಲೆಗಳಲ್ಲಿ ಹೆಸರು, ಹತ್ತಿ, ಮೆಕ್ಕೆಜೋಳ, ಉದ್ದು, ತೊಗರಿ ಸೇರಿ ಎಲ್ಲ ಬೆಳೆಗಳು ಹಾಳಾಗಿವೆ. ಇದು ರೈತರನ್ನು ಚಿಂತೆಗೀಡು ಮಾಡಿದೆ’ ಎಂದರು.

‘ಕಲ್ಯಾಣ ಕರ್ನಾಟಕ ಭಾಗದಲ್ಲಿ ನೀರು ನಿಂತು ಬೆಳೆ ಕೊಳೆತುಹೋಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಲಿಕ್ಯಾಪ್ಟರ್‌ನಲ್ಲಿ ಒಂದು ದಿನ ಸುತ್ತಾಡಿದರು. ಯಾವ ಸಚಿವರೂ ರೈತರ ಕಷ್ಟ ಆಲಿಸಿಲ್ಲ. ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು, ಮಹಾರಾಷ್ಟ್ರ ಸರ್ಕಾರದ ಮಾದರಿಯಲ್ಲಿ ವಿಶೇಷ ಪ್ಯಾಕೇಜ್ ನೀಡಬೇಕು’ ಎಂದು ಆಗ್ರಹಿಸಿದರು. 

ADVERTISEMENT

‘ಬಯೊಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್ ಷಾ, ಉದ್ಯಮಿ ಟಿ.ವಿ.ಮೋಹನದಾಸ ಪೈ ಅವರು ರಾಜ್ಯದ ರಸ್ತೆಗಳು, ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಅನೇಕ ಕೈಗಾರಿಕೋದ್ಯಮಿಗಳು ರಾಜ್ಯವನ್ನು ತೊರೆಯುತ್ತಿದ್ದಾರೆ. ಇದು ಸಾವಿರಾರು ಯುವಕರ ಭವಿಷ್ಯದ ಪ್ರಶ್ನೆ. ಸರ್ಕಾರ ಕೂಡಲೇ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳ ರಸ್ತೆಗಳನ್ನು ದುರಸ್ತಿ ಪಡಿಸಬೇಕು’ ಎಂದರು.

‘ಕರ್ನಾಟಕ ಗುಂಡಿಗಳ ರಾಜ್ಯವಾಗಿದೆ. ಬೆಂಗಳೂರು ಸಿಲಿಕಾನ್‌, ಗ್ರೀನ್ ಸಿಟಿ ಎಂಬ ಹೆಸರು ಪಡೆದಿತ್ತು. ಈಗ ಗುಂಡಿಗಳ ನಗರ ಎಂದು ಕುಖ್ಯಾತಿ ಪಡೆದಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ದುರಾಡಳಿತ ಕಾರಣ. ರಸ್ತೆ ದುರಸ್ತಿ ಮಾಡದಿದ್ದರೆ ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು. 

ಬಿಜೆಪಿ ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮಾತನಾಡಿ, ‘ಸರ್ಕಾರದಿಂದ ಮಹಾನಗರ ಪಾಲಿಕೆಗೆ ಅನುದಾನ ಬರುವುದ ಬಾಕಿ ಇದೆ. ಲೋಕೋಪಯೋಗಿ ಇಲಾಖೆಯ ಎಲ್ಲ ರಸ್ತೆಗಳು ಹಾಳಾಗಿವೆ. ಪಾಲಿಕೆ ನೌಕರರ ವೇತನವನ್ನು ಪಾಲಿಕೆಯಿಂದಲೇ ನೀಡುವಂತೆ ಹೇಳಿದೆ. ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರೂ ಸರ್ಕಾರ ಬಂಡತನ ಪ್ರದರ್ಶಿಸುತ್ತಿದೆ’ ಎಂದರು.

ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಶಾಸಕ ಎಂ.ಆರ್.ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಮಾಜಿ ಶಾಸಕಿ ಸೀಮಾ ಮಸೂತಿ, ಬಿಜೆಪಿ ಧಾರವಾಡ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ಜಿಲ್ಲಾ ವಕ್ತಾರ ಗುರು ಪಾಟೀಲ ಇದ್ದರು.  

ಅನುದಾನ ನೀಡಲು ಆಗ್ರಹ

‘ಸರ್ಕಾರ ಶಾಸಕರಿಗೆ ಸರಿಯಾಗಿ ಅನುದಾನ ನೀಡುತ್ತಿಲ್ಲ. ಈ ಹಿಂದೆ ಮುಖ್ಯಮಂತ್ರಿ ಅವರು ಕಾಂಗ್ರೆಸ್ ಶಾಸಕರಿಗೆ ₹50 ಕೋಟಿ ವಿಪಕ್ಷಗಳ ಶಾಸಕರಿಗೆ ₹25 ಕೋಟಿ ಅನದಾನ ನೀಡಲಾಗುವುದೆಂದು ಹೇಳಿದ್ದರು. ಆದರೆ ಈಗ 189 ಶಾಸಕರಿಗೆ ಮಾತ್ರ ₹10 ಕೋಟಿ ಅನುದಾನ ನೀಡಿದ್ಧಾರೆ. ಕೂಡಲೇ ಈ ಹಿಂದೆ ಭರವಸೆ ನೀಡಿದಂತೆ ಅನುದಾನ ಬಿಡುಗಡೆ ಮಾಡಬೇಕು’ ಎಂದು ಎನ್‌.ರವಿಕುಮಾರ್‌ ಆಗ್ರಹಿಸಿದರು. ‘ಶಾಸಕರಾದ ಆರ್‌.ವಿ.ದೇಶಪಾಂಡೆ ಬಿ.ಆರ್‌.ಪಾಟೀಲ ಬಸವರಾಜ ರಾಯರಡ್ಡಿ ಭರಮಗೌಡ (ರಾಜು) ಕಾಗೆ ಸೇರಿ ಅನೇಕ ಶಾಸಕರು ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸರ್ಕಾರಕ್ಕೆ ಕಿವಿ ಕಣ್ಣು ಬುದ್ಧಿ ಏನೂ ಇಲ್ಲ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.