ಹುಬ್ಬಳ್ಳಿ: ಶಿವಮೊಗ್ಗದಿಂದ ಮಂಗಳೂರು ಮತ್ತು ಹುಬ್ಬಳ್ಳಿಗೆ ನೇರ ಸಂಪರ್ಕ ಕಲ್ಪಿಸುವ ನೂತನ ರೈಲು ಮಾರ್ಗದ ಸಮೀಕ್ಷೆ ನಡೆಸುವಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥೂರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಸೋಮವಾರ ಗದಗ ರಸ್ತೆಯ ರೈಲ್ವೆ ಸೌಧದಲ್ಲಿ ಅವರನ್ನು ಭೇಟಿಯಾದ ಸಂಸದರು, ಶಿವಮೊಗ್ಗ ಜಿಲ್ಲೆಯ ರೈಲ್ವೆ ಯೋಜನೆಗಳ ಕುರಿತು ಚರ್ಚಿಸಿದರು. ಶಿವಮೊಗ್ಗ, ಉತ್ತರಕನ್ನಡ ಹಾಗೂ ಧಾರವಾಡ ಜಿಲ್ಲೆಗಳಿಗೆ ಸಂಬಂಧಿಸಿ ಹೊಸ ಮಾರ್ಗಗಳ ಕಾಮಗಾರಿ ಹಾಗೂ ಹೊಸ ರೈಲುಗಳ ಸಂಚಾರದ ಕುರಿತು ವಿನಂತಿಸಿದರು.
ಶಿವಮೊಗ್ಗದಿಂದ ಶೃಂಗೇರಿ ಮಾರ್ಗವಾಗಿ ಮಂಗಳೂರಿಗೆ, ತಾಳಗುಪ್ಪ–ಸಿದ್ಧಾಪುರ–ಶಿರಸಿ ಮಾರ್ಗವಾಗಿ ಹುಬ್ಬಳ್ಳಿಗೆ ಹಾಗೂ ಭದ್ರಾವತಿಯಿಂದ ಚಿಕ್ಕಜಾಜೂರಿಗೆ ನೂತನ ರೈಲ್ವೆ ಮಾರ್ಗ ಪ್ರಾರಂಭಿಸಲು ಸಮೀಕ್ಷೆ ಕಾರ್ಯ ತ್ವರಿತವಾಗಿ ಆರಂಭಿಸಬೇಕು. ಮಧ್ಯ ಕರ್ನಾಟಕದಿಂದ ಕರಾವಳಿ ಪ್ರದೇಶಕ್ಕೆ ತಾಳಗುಪ್ಪದಿಂದ ಹೊನ್ನಾವರಕ್ಕೆ ಈ ಹಿಂದೆ ಹಳೆ ಮಾರ್ಗದ ಸಮೀಕ್ಷೆಯಾಗಿದ್ದು, ಕೊಂಕಣ ರೈಲ್ವೆ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ಮುಖ್ಯ ಪ್ರಧಾನ ಎಂಜಿನಿಯರ್ ಸಿ.ಎಂ ಗುಪ್ತಾ, ಮುಖ್ಯ ಕಾರ್ಯಾಚರಣೆ ಅಧಿಕಾರಿ ಪ್ರಶಾಂತ್, ಕುಲದೀಪ್, ಪೀರ್ ಪಾಷಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.