ADVERTISEMENT

ಮಂಟೂರ ರಸ್ತೆಗೆ ಬೀದಿ ದೀಪಗಳ ವ್ಯವಸ್ಥೆ: ಶಾಸಕ ಪ್ರಸಾದ ಅಬ್ಬಯ್ಯ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 14:29 IST
Last Updated 19 ಜೂನ್ 2025, 14:29 IST
ಹುಬ್ಬಳ್ಳಿಯ ಹಳೆ ಮಂಟೂರ ರಸ್ತೆಯಲ್ಲಿ ನಡೆದ ವಿದ್ಯುತ್‌ ದೀಪಗಳ ಉದ್ಘಾಟನೆ ಕಾರ್ಯಕ್ರಮದ ವೇಳೆ ಶಾಸಕ ಪ್ರಸಾದ ಅಬ್ಬಯ್ಯ ಅವರು ಸ್ಥಳೀಯ ಮುಖಂಡರನ್ನು ಸನ್ಮಾನಿಸಿದರು
ಹುಬ್ಬಳ್ಳಿಯ ಹಳೆ ಮಂಟೂರ ರಸ್ತೆಯಲ್ಲಿ ನಡೆದ ವಿದ್ಯುತ್‌ ದೀಪಗಳ ಉದ್ಘಾಟನೆ ಕಾರ್ಯಕ್ರಮದ ವೇಳೆ ಶಾಸಕ ಪ್ರಸಾದ ಅಬ್ಬಯ್ಯ ಅವರು ಸ್ಥಳೀಯ ಮುಖಂಡರನ್ನು ಸನ್ಮಾನಿಸಿದರು   

ಹುಬ್ಬಳ್ಳಿ: ಹಳೆ ಮಂಟೂರ ರಸ್ತೆಯ ಸನಾದಿ ಅಪ್ಪಣ್ಣ ವೃತ್ತದಿಂದ ರೈಲ್ವೆ ಕ್ರಾಸಿಂಗ್ ವರೆಗೆ ₹10 ಕೋಟಿ ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಾಣ. ₹44ಲಕ್ಷ ಅನುದಾನದಲ್ಲಿ ವಿದ್ಯುತ್ ಬೀದಿ ದೀಪ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದ್ದು, ಶಾಸಕ ಪ್ರಸಾದ ಅಬ್ಬಯ್ಯ ಬುಧವಾರ ಲೋಕಾರ್ಪಣೆ ಮಾಡಿದರು. 

ಈ ವೇಳೆ ಮಾತನಾಡಿ ಶಾಸಕರು, ‘ಪೂರ್ವ ಕ್ಷೇತ್ರದ ಮಂಟೂರ ರಸ್ತೆ ಭಾಗವು ವೇಗವಾಗಿ ಬೆಳೆಯುತ್ತಿದ್ದು, ಹೊಸ ಬಡಾವಣೆಗಳು ನಿರ್ಮಾಣವಾಗಿವೆ. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 2600 ಮನೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಮೊದಲ ಹಂತದಲ್ಲಿ 1 ಸಾವಿರಕ್ಕೂ ಅಧಿಕ ಮನೆಗಳು ಹಂಚಿಕೆಗೆ ಸಿದ್ಧಗೊಂಡಿವೆ. ಶೀಘ್ರದಲ್ಲೇ ಲೋಕಾರ್ಪಣೆ ಮಾಡಲಾಗುವುದು’ ಎಂದು ಹೇಳಿದರು.

‘ಮಂಟೂರ ರಸ್ತೆ ಭಾಗದಲ್ಲಿ ಇದುವರೆಗೆ ಅಂದಾಜು ₹150 ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಹೊಸ ಮಂಟೂರು ರಸ್ತೆ ಮಾರ್ಗದಲ್ಲಿ ವಿದ್ಯುತ್‌ ಸಮಸ್ಯೆಯಿತ್ತು. ಹೈಟೆಕ್‌ ರಸ್ತೆ ನಿರ್ಮಿಸಿ, ವಿದ್ಯುತ್‌ ದೀಪಗಳ ವ್ಯವಸ್ಥೆ ಮಾಡಲಾಗಿದೆ’ ಎಂದರು. 

ADVERTISEMENT

ಕಳೆದ ವರ್ಷ ಹಳೆ ಮಂಟೂರ ರಸ್ತೆ ತಬೀಬ್ ಲ್ಯಾಂಡ್‌ನಿಂದ ಸುಣ್ಣದ ಭಟ್ಟಿವರೆಗೆ ₹90 ಲಕ್ಷ ವೆಚ್ಚದಲ್ಲಿ ಕ್ರಾನಿಕಲ್‌ ವಿದ್ಯುತ್ ಬೀದಿದೀಪ ಅಳವಡಿಸಲಾಗಿತ್ತು ಎಂದರು. 

ಪ್ರಮುಖರಾದ ಶಾಮ‌ ಜಾಧವ, ಮೋಹನ್ ಅಸುಂಡಿ, ಶರೀಫ್ ಅದ್ವಾನಿ, ಸೈಯದ್ ಸಲೀಂ ಮುಲ್ಲಾ, ಅಲ್ತಾಫ್ ಮುಲ್ಲಾ, ಮೆಹಬೂಬ್ ನಾಲಬಂದ್, ಅಪ್ರೊಜ್ ಮಂಚಿನಕೊಪ್ಪ, ಜಾಫರ್ ಶಾಬ್ದಿ, ಅಕ್ಬರ್ ಅಂಗಡಿ, ಶಕೀಲ್ ಅಹ್ಮದ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.