ADVERTISEMENT

ಧಾರವಾಡ: ಕೋವಿಡ್‌ ಸಮಯದಲ್ಲರಳಿದ ನಿಸರ್ಗ ಸಿರಿ

ಕಲಾರಸಿಕರ ಕಣ್ಮನ ಸೆಳೆದ ಚಿತ್ರಕಲಾವಿದ‌ ಬಿ.ಮಾರುತಿ ಅವರ ಚಿತ್ರಕಲೆಗಳ ಪ್ರದರ್ಶನ

ಕಲಾವತಿ ಬೈಚಬಾಳ
Published 9 ಜನವರಿ 2022, 7:41 IST
Last Updated 9 ಜನವರಿ 2022, 7:41 IST
ಬಿ.ಮಾರುತಿ ರಚಿಸಿದ ಚಿತ್ರಕಲೆ –ಪ್ರಜಾವಾಣಿ ಚಿತ್ರಗಳು/ ಬಿ.ಎಂ ಕೇದಾರನಾಥ್‌
ಬಿ.ಮಾರುತಿ ರಚಿಸಿದ ಚಿತ್ರಕಲೆ –ಪ್ರಜಾವಾಣಿ ಚಿತ್ರಗಳು/ ಬಿ.ಎಂ ಕೇದಾರನಾಥ್‌   

ಹುಬ್ಬಳ್ಳಿ: ಧಾರವಾಡದ ಸರ್ಕಾರಿ ಆರ್ಟ್‌ ಗ್ಯಾಲರಿಯ ಆವರಣದೊಳಗಿನ ಸಿಮೆಂಟ್ ಕಲಾಕೃತಿಗಳತ್ತ ಕಣ್ಣು ಹಾಯಿಸುತ್ತಲೇ ಹೆಜ್ಜೆ ಮುಂದಿಟ್ಟರೆ ಅಲ್ಲಿ ವಿವಿಧ ಬಣ್ಣಗಳಲ್ಲಿ ಮೈದಳೆದ ಪ್ರಕೃತಿಯ ಭಿನ್ನ ಭಿನ್ನವಾದ ಚಿತ್ರಕಲೆಗಳು ನೋಡುಗರನ್ನು ಕೈ ಬೀಸಿ ಕರೆಯುತ್ತವೆ.

ಬೆಟ್ಟ, ಜಲಪಾತ, ಕಾಡು, ಸಮುದ್ರ, ಬಯಲು ಹೀಗೆ.. ಒಂದೇ, ಎರಡೇ., ಹತ್ತಾರು ಚಿತ್ರಗಳು ಚಿತ್ರಕಲಾ ರಸಿಕರನ್ನು ಮಂತ್ರಮುಗ್ಧಗೊಳಿಸುತ್ತವೆ.

ಅಂದ ಹಾಗೆ, ಇವು ಚಿತ್ರ ಕಲಾವಿದ‌ ಬಿ.ಮಾರುತಿ ಅವರ ಕುಂಚದಲ್ಲಿಕೋವಿಡ್‌ ಸಮಯದಲ್ಲರಳಿದ ಚಿತ್ರಗಳು. ಇದು ಅವರ 15ನೇ ಚಿತ್ರಕಲಾ ಪ್ರದರ್ಶನ. ಈ ಪ್ರದರ್ಶನದಲ್ಲಿ ನಿಸರ್ಗ ಸಿರಿಯ ಕುರಿತ ಚಿತ್ರಗಳೇ ಮೇಳೈಸಿವೆ.

ADVERTISEMENT

ವಿಜಯನಗರ ಜಿಲ್ಲೆಯ ಹೊಸಪೇಟೆಯವರಾದ ಮಾರುತಿ ಅವರು, ಕರ್ನಾಟಕ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಮ್ಮ ಸುದೀರ್ಘ 50 ವರ್ಷಗಳ ಕಲಾಜೀವನದಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಹಲವಾರು ನಗರಗಳಲ್ಲಿ ಸಮೂಹ ಹಾಗೂ ಏಕವ್ಯಕ್ತಿ ಕಲಾಪ್ರದರ್ಶನ ನೀಡಿದ್ದಾರೆ.

25 ವರ್ಷಗಳಿಂದ ಧಾರವಾಡದಲ್ಲಿ ನೆಲೆಸಿರುವ ಅವರು, ಚಿತ್ತಾರ ಕಲಾ ಬಳಗ ಸ್ಥಾಪಿಸಿ ಕಲಾಕೃತಿಗಳ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಿಯಲಿಸ್ಟಿಕ್, ಅಬ್‌ಸ್ಟ್ರ್ಯಾಕ್ಟ್, ಸೆಮಿ ರಿಯಲಿಸ್ಟಿಕ್, ಪೊರ್ಟ್ರೇಟ್ ಚಿತ್ರಗಳನ್ನು ಬಿಡಿಸುತ್ತಾರೆ. ಅವರ ಕಲಾ ಸಾಧನೆಯನ್ನು ಗುರುತಿಸಿ ಲಲಿತಕಲಾ ಅಕಾಡೆಮಿಯು ಗೌರವ ಪ್ರಶಸ್ತಿಯನ್ನೂ ನೀಡಿದೆ.

ಆರಂಭದಲ್ಲಿ ಪೊರ್ಟ್ರೇಟ್ ಚಿತ್ರಗಳನ್ನೇ ಬಿಡಿಸುತ್ತಿದ್ದ ಅವರು, ನಂತರದ ದಿನಗಳಲ್ಲಿ ರಿಯಲಿಸ್ಟಿಕ್, ಅಬ್‌ಸ್ಟ್ರ್ಯಾಕ್ಟ್, ಸೆಮಿ ರಿಯಲಿಸ್ಟಿಕ್ ಮಾದರಿಯಲ್ಲಿ ಹಳ್ಳಿಗರ ಜೀವನ ಶೈಲಿ, ಅಲ್ಲಿನ ವಾತಾವರಣ, ಹಂಪಿ ಕುರಿತು ‘ಹಾಡುವ ಕಲ್ಲುಗಳು’, ಜನಪದ ಕಲೆಯನ್ನು ಪರಿಚಯಿಸುವ ಮತ್ತು ‘ಚೌಕಟ್ಟಿಲ್ಲದ ಬಣ್ಣಗಳು’ ಚಿತ್ರಗಳನ್ನು ನೋಡುಗರ ಮುಂದಿಟ್ಟರು.

ಬಹುಮುಖ ಪ್ರತಿಭೆ: ಚಿತ್ರಕಲೆಗಷ್ಟೇ ಸೀಮಿತವಾಗದೆ, ಸಿಮೆಂಟ್‌, ಫೈಬರ್‌ ಕಲಾಕೃತಿಗಳನ್ನು ರಚಿಸುತ್ತಾರೆ. ಸಾಹಿತ್ಯ ಸಮ್ಮೇಳನ, ಸಭೆ–ಸಮಾರಂಭಗಳಿಗೆ ಕಲಾತ್ಮಕವಾಗಿ ವೇದಿಕೆ ಸಿದ್ಧಪಡಿಸುತ್ತಾರೆ. ಸ್ತಬ್ಧಚಿತ್ರಗಳನ್ನು ನಿರ್ಮಿಸುವಲ್ಲೂ ಇವರು ನೈಪುಣ್ಯ ಪಡೆದಿದ್ದಾರೆ. ಈವರೆಗೆ ಅಂದಾಜು 300–400 ಸಿಮೆಂಟ್‌ ಕಲಾಕೃತಿ, 200 ಫೈಬರ್‌ ಕಲಾಕೃತಿಗಳನ್ನು ನಿರ್ಮಿಸಿದ್ದಾರೆ.

‘ಹಲವು ಶೈಲಿಗಳಲ್ಲಿ ಚಿತ್ರಕಲೆಗಳನ್ನು ಚಿಡಿಸುತ್ತೇನೆ. ಯಾವುದೋ ಒಂದು ಶೈಲಿಗೆ ಸೀಮಿತವಾಗಿಲ್ಲ’ ಎಂದು ಕಲಾವಿದ‌ ಬಿ.ಮಾರುತಿ ತಿಳಿಸಿದರು.

‘ಮನುಷ್ಯನ ಮನದೊಳಗಿನ ಭಾವನೆಗಳನ್ನು ಚಿತ್ರಗಳ ಮೂಲಕ ವ್ಯಕ್ತಪಡಿಸುವ ಕಲೆ ಕಲಾವಿದನಿಗೆ ಗೊತ್ತಿರಬೇಕು. ಬಣ್ಣಗಳ ಬಳಕೆ ಅತಿ ಮುಖ್ಯ. ಅಮೂರ್ತ ಚಿತ್ರಕಲೆಗಳ ಮೂಲಕ ಈ ಪ್ರದರ್ಶನದಲ್ಲಿ ಅನಾವರಣಗೊಳಿಸಿರುವೆ’ ಎಂದರು.

ಧಾರವಾಡದ ಕಾಲೇಜು ರಸ್ತೆಯಲ್ಲಿರುವ ಸರ್ಕಾರಿ ಆರ್ಟ್‌ ಗ್ಯಾಲರಿಯಲ್ಲಿ ಜ.16ರ ವರೆಗೂ ಪ್ರದರ್ಶನ ಇರಲಿದೆ.

*

ಯುವ ಕಲಾವಿದರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಕಲಿಕೆಗೆ, ಕಲಾ ಪ್ರದರ್ಶನಕ್ಕೆ ಹೇರಳ ವೇದಿಕೆಗಳಿವೆ. ಅದರ ಸದುಪಯೋಗವಾಗಬೇಕು.
-ಬಿ.ಮಾರುತಿ, ಚಿತ್ರಕಲಾವಿದ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.