ADVERTISEMENT

ಹುಬ್ಬಳ್ಳಿ: ಸಿದ್ಧಾರೂಢ ಸಾನ್ನಿಧ್ಯದ ಆರೂಢ ಗೋಶಾಲೆ

ವಿವಿಧ ದೇಸಿ, ವಿದೇಶಯ ತಳಿಗಳ ಸಾಕಣೆ

ಪ್ರಜಾವಾಣಿ ವಿಶೇಷ
Published 15 ಜೂನ್ 2023, 1:02 IST
Last Updated 15 ಜೂನ್ 2023, 1:02 IST
ಹುಬ್ಬಳ್ಳಿಯ ಸಿದ್ಧಾರೂಢ ಮಠದ ಆರೂಢ ಗೋಶಾಲೆಯಲ್ಲಿರುವ ಹಸುಗಳು
ಹುಬ್ಬಳ್ಳಿಯ ಸಿದ್ಧಾರೂಢ ಮಠದ ಆರೂಢ ಗೋಶಾಲೆಯಲ್ಲಿರುವ ಹಸುಗಳು   

ಸುಷ್ಮಾ ಸವಸುದ್ದಿ

ಹುಬ್ಬಳ್ಳಿ: ಇಲ್ಲಿನ ಸಿದ್ಧರೂಢ ಮಠದ ಆವರಣದಲ್ಲಿ ಇರುವ ಆರೂಢ ಗೋಶಾಲೆಯು ವಿಭಿನ್ನ ಮತ್ತು ವಿಶಿಷ್ಟವಾದದ್ದು. ಮಠದ ಆವರಣದಲ್ಲಿರುವ ಈ ಗೋಶಾಲೆಯಲ್ಲಿ ವಿವಿಧ ಬಗೆಯ ತಳಿಯ ಗೋವುಗಳಿದ್ದು, ವೈವಿಧ್ಯತೆ ಕಾಣಬಹುದು. ಇಡೀ ಗೋಶಾಲೆ ನೋಡುವುದು ಅಲ್ಲದೇ, ಅಲ್ಲಿ ಕಾಲ ಕಳೆಯುವುದೇ ಖುಷಿಯ ಸಂಗತಿ.

ಮಠಕ್ಕೆ ಭೇಟಿ ನೀಡುವ ಬಹುತೇಕ ಭಕ್ತಾದಿಗಳು ಗೋಶಾಲೆಗೆ ಭೇಟಿ ನೀಡುತ್ತಾರೆ. ಗೋವುಗಳ ಕುರಿತು ವಿಚಾರ ತಿಳಿಯುವುದರ ಜೊತೆಗೆ ಒಟ್ಟಾರೆ ಗೋಶಾಲೆಯ ಕಾರ್ಯನಿರ್ವಹಣೆ ಬಗ್ಗೆ ಆಸಕ್ತಿಯಿಂದ ಅರಿಯುತ್ತಾರೆ.

ADVERTISEMENT

ಮಠದಲ್ಲಿ ಭಕ್ತರಿಗಾಗಿ ನಿತ್ಯವೂ ಅನ್ನದಾಸೋಹ ವ್ಯವಸ್ಥೆ ಇದೆ. ಈ ಅನ್ನದಾಸೋಹಕ್ಕೆ, ದೇವರ ಅಭಿಷೇಕಕ್ಕೆ ಗೋಶಾಲೆಯ ಹಾಲು ಪೂರೈಕೆಯಾಗುತ್ತದೆ.

‘10 ವರ್ಷ ಪೂರೈಸಿರುವ ಈ ಗೋಶಾಲೆಯಲ್ಲಿ ವಿವಿಧ ದೇಸಿ ಮತ್ತು ವಿದೇಶಿ ತಳಿಯ ಒಟ್ಟು 75 ಹಸುಗಳಿವೆ. ಜರ್ಸಿ, ಘೀರ್, ಕಿಲಾರಿ, ಸಾಯಿವಾಲ್, ರಾಟಿ, ಮಲ್ನಾಡ್ ಗಿಡ್, ರೆಡ್ ಸಿಂದಿ, ದೇವನಿ ಹೀಗೆ ವಿವಿಧ ತಳಿಗಳ ಹಸುಗಳಿವೆ.  ದಿನಕ್ಕೆ 40 ರಿಂದ 50 ಲೀಟರ್ ಹಾಲು ನೀಡುತ್ತವೆ. ಆಂಧ್ರ ಪ್ರದೇಶದ ಪುಂಗನುರು ತಳಿ ಇದರಲ್ಲಿ ವಿಶೇಷ. ಇದರ  ಎತ್ತರ 4 ಅಡಿ. ಇದು ಜೀವಿತಾವಧಿವರೆಗೂ ಇದೇ ಗಾತ್ರದಲ್ಲಿ ಇರುತ್ತದೆ’ ಎಂದು ಗೋಶಾಲೆ ಸಿಬ್ಬಂದಿ ಹೇಳುತ್ತಾರೆ.

ಈ ಹಸುಗಳಿಗೆ ಜೋಳದ ನುಚ್ಚು, ಹಿಂಡಿ, ಒಣ ಮೇವು ನೀಡಲಾಗುತ್ತದೆ. ಕುದಿಸಿದ ಹಿಂಡಿ ಹಸುಗಳಿಗೆ ಕೊಡಲಾಗುತ್ತದೆ. ಗೋಶಾಲೆಯಲ್ಲಿ ನೀರಿನ ಕೊಳವೆಬಾವಿಯಿದ್ದು, ಹಸುಗಳಿಗೆ ನೀರುಣಿಸಲು, ಮೈ ತೊಳೆಯಲು ವ್ಯವಸ್ಥೆ ಇದೆ.

ಗೋಶಾಲೆ ಆವರಣದಲ್ಲೆ ತೋಟವಿದ್ದು, ತೆಂಗಿನಕಾಯಿ, ಪೇರು, ಜೋಳ, ಮಾವಿನ ಮರಗಳನ್ನು ಬೆಳೆಸಲಾಗಿದೆ. ಮೇವಿನ ಬೀಜ ಹಾಕಿ, ಬಹುವರ್ಷಿಯ ಮೇವನ್ನು ಬೆಳೆಯಲಾಗಿದ್ದು, ಇದರಿಂದ 3 ವರ್ಷಗಳವರೆಗೆ ಫಲ ಪಡೆಯಬಹುದು. ಮೇವು ಸಂಗ್ರಹಣೆಗೆಂದು ದೊಡ್ಡ ದಾಸ್ತಾನು ಕೂಡ ಇದೆ. ವರ್ಷಗಟ್ಟಲೆ ಒಣ ಮೇವನ್ನು ಅದರಲ್ಲಿ ಸಂಗ್ರಹಿಸಿ ಇಡುವ ವ್ಯವಸ್ಥೆಯಿದೆ. ಕೃಷ್ಣಮೃಗ, ನಾಯಿ ಮತ್ತು ಮೊಲಗಳಿಗೂ ಗೋಶಾಲೆಯಲ್ಲಿ ಆಶ್ರಯ ನೀಡಲಾಗಿದೆ.

ಈ ಗೋಶಾಲೆಯಲ್ಲಿ ವಿವಿಧ ದೇಶಿ ವಿದೇಶಿ ತಳಿಗಳಿವೆ. ಮಠದ ಭಕ್ತರು ಮೇವು ಹಸುಗಳನ್ನು ದೇಣಿಗೆಯಾಗಿ ನೀಡುತ್ತಾರೆ. ಮೇವು ಇರುವುದಾಗಿ ತಿಳಿಸಿದರೇ ನಾವೇ ಹೋಗಿ ತರುತ್ತೇವೆ.

-ಸುನೀಲ್ ಮೇಲ್ವಿಚಾರಕ ಆರೂಢ ಗೋಶಾಲೆ

‘ತ್ಯಾಜ್ಯದ ಸದ್ಬಳಕೆಗೆ ಆದ್ಯತೆ’

‘ಹಸುಗಳನ್ನು ಕಟ್ಟಲು ಸುಸಜ್ಜಿತ ಕೊಠಡಿ ಇದೆ. ಬೆಳಿಗ್ಗೆ ಹಸುಗಳನ್ನು ಮೈದಾನದಲ್ಲಿ ಬಿಡಲಾಗುತ್ತದೆ. ಹಸುಗಳ ಮೂತ್ರ ಕೊಠಡಿಯ ಹಿಂಬದಿಯಲ್ಲಿರುವ ಗುಂಡಿಯೊಳಗೆ ಸಂಗ್ರಹವಾಗುವಂತೆ ಕಾಲುವೆ ಮಾಡಲಾಗಿದೆ. ಇದನ್ನು ತೋಟಕ್ಕೆ ಗೊಬ್ಬರವಾಗಿ ಬಳಸಲಾಗುತ್ತದೆ’ ಎಂದು ಆರೂಢ ಗೋಶಾಲೆಯ ಮೇಲ್ವಿಚಾರಕ ಸುನೀಲ್ ತಿಳಿಸಿದರು. ‘ಹಸುಗಳ ಸಗಣಿ ಕುಳ್ಳು ತಟ್ಟಿ ಇಡಲಾಗುತ್ತದೆ. ಇದೇ ಕುಳ್ಳನ್ನು ಬಳಸಿ ಹಿಂಡಿ ಕುದಿಸಲಾಗುತ್ತದೆ. ಸುಟ್ಟ ಕುಳ್ಳು ದೇವರ ಅಂಗಾರವಾಗಿ ತಯಾರಾಗುತ್ತದೆ. ಹಸುವಿನ ತ್ಯಾಜ್ಯ ವ್ಯರ್ಥ ಮಾಡದೇ ಸದ್ಬಳಕೆ ಮಾಡಲಾಗುತ್ತದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.