ADVERTISEMENT

ರೊಟ್ಟಿ ಊಟ ಮೆಚ್ಚಿಕೊಂಡಿದ್ದ ಅರುಣ್‌ ಜೇಟ್ಲಿ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2019, 20:17 IST
Last Updated 25 ಆಗಸ್ಟ್ 2019, 20:17 IST
2004ರಲ್ಲಿ ಹುಬ್ಬಳ್ಳಿಗೆ ಬಂದಿದ್ದ ಅರುಣ್‌ ಜೇಟ್ಲಿ ಜೊತೆ ಬಿಜೆಪಿ ಮುಖಂಡರಾದ ಪ್ರಹ್ಲಾದ ಜೋಶಿ, ಅನಂತ ಕುಮಾರ್‌, ಸುರೇಶ ಕುಮಾರ್, ಅಶೋಕ ಕಾಟವೆ ಇದ್ದ ಕ್ಷಣ
2004ರಲ್ಲಿ ಹುಬ್ಬಳ್ಳಿಗೆ ಬಂದಿದ್ದ ಅರುಣ್‌ ಜೇಟ್ಲಿ ಜೊತೆ ಬಿಜೆಪಿ ಮುಖಂಡರಾದ ಪ್ರಹ್ಲಾದ ಜೋಶಿ, ಅನಂತ ಕುಮಾರ್‌, ಸುರೇಶ ಕುಮಾರ್, ಅಶೋಕ ಕಾಟವೆ ಇದ್ದ ಕ್ಷಣ   

ಹುಬ್ಬಳ್ಳಿ: ’ಚುನಾವಣೆ ಮತ್ತು ರಾಜಕೀಯ ಕಾರಣಕ್ಕೆ ಅರುಣ್‌ ಜೇಟ್ಲಿ ಕರ್ನಾಟಕದಲ್ಲಿ ಬೆಂಗಳೂರನ್ನು ಹೊರತುಪಡಿಸಿದರೆ, ಹುಬ್ಬಳ್ಳಿಯನ್ನೇ ಪ್ರಮುಖ ಕೇಂದ್ರ ಮಾಡಿಕೊಂಡಿದ್ದರು. ಈ ಭಾಗದ ರೊಟ್ಟಿ ಊಟವನ್ನು ಬಹುವಾಗಿ ಮೆಚ್ಚಿಕೊಂಡಿದ್ದರು...’

ಶನಿವಾರ ನಿಧನರಾದ ಬಿಜೆಪಿಯ ಹಿರಿಯ ನಾಯಕ ಅರುಣ್‌ ಜೇಟ್ಲಿ ಅವರು ವಾಣಿಜ್ಯನಗರಿಯೊಂದಿಗೆ ಹೊಂದಿದ್ದ ನಂಟನ್ನು ಸ್ಥಳೀಯ ಬಿಜೆಪಿ ನಾಯಕ ಮಲ್ಲಿಕಾರ್ಜುನ ಸಾಹುಕಾರ ‘ಪ್ರಜಾವಾಣಿ’ ಜೊತೆ ಹೀಗೆ ಹಂಚಿಕೊಂಡರು.

2004ರ ವಿಧಾನಸಭಾ ಚುನಾವಣೆಗೆ ಜೇಟ್ಲಿ ಉತ್ತರಕರ್ನಾಟಕದ ಉಸ್ತುವಾರಿಯಾಗಿದ್ದರು. ಲೋಕಸಭಾ ಚುನಾವಣೆ ವೇಳೆಯೂ ಪ್ರಚಾರಕ್ಕೆ ಬಂದಿದ್ದರು.

ADVERTISEMENT

‘ಜೇಟ್ಲಿ ಅವರು ಹುಬ್ಬಳ್ಳಿಯನ್ನು ಕೇಂದ್ರ ಮಾಡಿಕೊಂಡು ಉತ್ತರ ಕರ್ನಾಟಕದ ಊರುಗಳಿಗೆ ಹೋಗುತ್ತಿದ್ದರು. ಚುನಾವಣಾ ಪ್ರಚಾರಕ್ಕೆ ಬಂದಾಗ ಅವರ ನಾಯಕತ್ವದಲ್ಲಿ ಪಕ್ಷ ಸಾಕಷ್ಟು ಬೆಳೆಯಿತು. ಜಗದೀಶ ಶೆಟ್ಟರ್ ಹಾಗೂ ಎಲ್ಲ ಕಾರ್ಯಕರ್ತರ ಜೊತೆ ಆತ್ಮೀಯ ಒಡನಾಟ ಹೊಂದಿದ್ದರು. ಉತ್ತರ ಕರ್ನಾಟಕದ ಜೋಳದ ರೊಟ್ಟಿ ಊಟ ಇಷ್ಟಪಡುತ್ತಿದ್ದರು. ನಮ್ಮ ಜೊತೆ ರೊಟ್ಟಿ ಊಟವನ್ನೇ ಮಾಡುತ್ತಿದ್ದರು’ ಎಂದು ಮಲ್ಲಿಕಾರ್ಜುನ ನೆನಪಿಸಿಕೊಂಡರು.

‘ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಯಾರೇ ಇರಲಿ; ಎಲ್ಲರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳುತ್ತಿದ್ದರು. ಸಚಿವ, ಶಾಸಕ ಒಂದಲ್ಲ ಒಂದು ದಿನ ಮಾಜಿ ಆಗುತ್ತಾರೆ. ಕಾರ್ಯಕರ್ತ ಯಾವತ್ತೂ ಮಾಜಿ ಆಗುವುದಿಲ್ಲ. ಆದ್ದರಿಂದ ಈ ಪದಕ್ಕೆ ದೊಡ್ಡ ಬೆಲೆಯಿದೆ ಎನ್ನುತ್ತಿದ್ದರು. ತಳಮಟ್ಟದಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದರಿಂದ ಬಿಜೆಪಿ ಈ ಭಾಗದಲ್ಲಿ ಗಟ್ಟಿಯಾಗಿ ನೆಲೆಯೂರಲು ಸಾಧ್ಯವಾಯಿತು’ ಎಂದು ಚೆದುರಿ ಹೋಗಿದ್ದ ನೆನಪುಗಳನ್ನು ಅವರು ಒಂದುಗೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.