ADVERTISEMENT

18 ತಿಂಗಳಲ್ಲಿ ಕಾರ್ಖಾನೆ ಸ್ಥಾಪನೆಗೆ ಪ್ರಯತ್ನ: ನಿರಾಣಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 5:22 IST
Last Updated 14 ಜೂನ್ 2021, 5:22 IST
ಕಲಘಟಗಿಯ ಹನ್ನೆರಡು ಮಠದಲ್ಲಿ ಭಾನುವಾರ ನಡೆದ ಕಾರ್ಖಾನೆ ಸ್ಥಾಪಿಸುವ ಕುರಿತು ರೈತರ ಅಭಿಪ್ರಾಯ ಸಂಗ್ರಹ ಕಾರ್ಯಕ್ರಮದಲ್ಲಿ ಗಣಿ, ಭೂ ವಿಜ್ಞಾನ ಹಾಗೂ ಸಣ್ಣ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಮಾತನಾಡಿದರು
ಕಲಘಟಗಿಯ ಹನ್ನೆರಡು ಮಠದಲ್ಲಿ ಭಾನುವಾರ ನಡೆದ ಕಾರ್ಖಾನೆ ಸ್ಥಾಪಿಸುವ ಕುರಿತು ರೈತರ ಅಭಿಪ್ರಾಯ ಸಂಗ್ರಹ ಕಾರ್ಯಕ್ರಮದಲ್ಲಿ ಗಣಿ, ಭೂ ವಿಜ್ಞಾನ ಹಾಗೂ ಸಣ್ಣ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಮಾತನಾಡಿದರು   

ಕಲಘಟಗಿ: ಅನ್ನದಾತರಆರ್ಥಿಕ ಪರಿಸ್ಥಿತಿಸುಧಾರಿಸಲು ಸಕ್ಕರೆ ಕಾರ್ಖಾನೆ ಅವಶ್ಯವಿದ್ದು,ಎಲ್ಲ ರೈತರು ಸಹಕಾರ ನೀಡಿದರೆ 18 ತಿಂಗಳಲ್ಲಿ ಕಾರ್ಖಾನೆ ಸ್ಥಾಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಗಣಿ, ಭೂ ವಿಜ್ಞಾನ ಹಾಗೂ ಸಣ್ಣ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಭರವಸೆ ನೀಡಿದರು.

ಪಟ್ಟಣದ ಹನ್ನೆರಡು ಮಠದಲ್ಲಿ ಶಾಸಕ ನಿಂಬಣ್ಣವರ ನೇತೃತ್ವದಲ್ಲಿ ಕಾರ್ಖಾನೆ ಸ್ಥಾಪಿಸುವ ಕುರಿತು ರೈತರ ಅಭಿಪ್ರಾಯ ಸಂಗ್ರಹ ಕಾರ್ಯಕ್ರಮದಲ್ಲಿ ಮಾತನಾಡಿ ’ದೇಶದ 12 ಕೋಟಿ ರೈತರು ಕಬ್ಬಿನ ಬೆಳೆ ಮೇಲೆ ಅವಲಂಬಿತರಾಗಿದ್ದಾರೆ. ರೈತರು ಆದಷ್ಟು ಷೇರು ಸಂಗ್ರಹಣೆ ಮಾಡಿದರೆ, ಇನ್ನುಳಿದ ಹಣ ನಾನು ಹಾಕಿ ಕಾರ್ಖಾನೆ ಆರಂಭಿಸುತ್ತೇನೆ’ ಎಂದರು.

’ವೈಯಕ್ತಿಕ ಹಿತಾಸಕ್ತಿಗೆ ಕಾರ್ಖಾನೆ ಸ್ಥಾಪಿಸಲು ನನಗೆ ಆಸಕ್ತಿ ಇಲ್ಲ. ನಿಂಬಣ್ಣವರ ಆಸಕ್ತಿ ಮೇರೆಗೆ ಹಾಗೂ ಈ ಭಾಗದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಿ, ನಿರುದ್ಯೋಗ ಹೋಗಲಾಡಿಸಲು ಅನುಕೂಲವಾಗುತ್ತದೆ.ಈಗಾಗಲೇ ನನ್ನ ಒಡೆತನದಲ್ಲಿರುವ ಕಾರ್ಖಾನೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇಥೆನಾಲ್‌ ಉತ್ಪತ್ತಿ ಮಾಡಲಾಗುತ್ತಿದೆ’ ಎಂದರು.

ADVERTISEMENT

ಶಾಸಕ ಸಿ. ಎಂ ನಿಂಬಣ್ಣವರ ಮಾತನಾಡಿ ‘ನಂಜುಂಡಪ್ಪ ವರದಿಯಲ್ಲಿ ಕಲಘಟಗಿ ತಾಲ್ಲೂಕು ಹಿಂದುಳಿದಿದೆ ಎಂದು ಹೇಳಲಾಗಿದೆ. ಈ ಭಾಗದ ರೈತರಿಗೆ ಹಾಗೂ ನಿರುದ್ಯೋಗಿಗಳಿಗೆ ಅನುಕೂಲ ಕಲ್ಪಿಸಲು ಕೈಗಾರಿಕೆ ಆರಂಭವಾಗುವುದು ಅಗತ್ಯವಿದೆ. ಪಕ್ಷಾತೀತವಾಗಿ ಎಲ್ಲರೂ ಸೇರಿ ಈ ಪ್ರಯತ್ನಕ್ಕೆ ಕೈ ಜೋಡಿಸೋಣ’ ಎಂದರು.

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ್ ಲಿಂಬಿಕಾಯಿ, ಹನ್ನೆರಡು ಮಠದ ರೇವಣಸಿದ್ದೇಶ್ವರ ಶಿವಾಚಾರ್ಯರು, ಕೆಎಂಎಫ್ ನಿರ್ದೇಶಕಿ ಗೀತಾ ಮರಲಿಂಗಣ್ಣವರ, ನರೇಶ ಮಲೆನಾಡು, ಬಸವರಾಜ ಶೇರೆವಾಡ, ವಿ.ಎಸ್ ಪಾಟೀಲ, ನಿಂಗಪ್ಪ ಸುತಗಟ್ಟಿ, ಸೋಮು ಕೊಪ್ಪದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.