ADVERTISEMENT

ಪೈಲ್ವಾನ್‌ ಶಿವಾನಂದ ಶಕ್ತಿ ಪ್ರದರ್ಶನಕ್ಕೆ ಪ್ರೇಕ್ಷಕರು ಫಿದಾ!

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 5:49 IST
Last Updated 11 ಏಪ್ರಿಲ್ 2022, 5:49 IST
ಹುಬ್ಬಳ್ಳಿ ತಾಲ್ಲೂಕಿನ ಬ್ಯಾಹಟ್ಟಿಯಲ್ಲಿ ಶಿವಾನಂದ ಸಿದ್ದಪ್ಪ ನವಲೂರ ಅವರು ತಿರುಗುವ ಚಕ್ಕಡಿ ಮತ್ತು 11 ಸಂಗ್ರಾಣಿ ಕಲ್ಲುಗಳ ಮೇಲೆ ನಿಂತು ಶಕ್ತಿ ಪ್ರದರ್ಶಿಸಿದರು  ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ
ಹುಬ್ಬಳ್ಳಿ ತಾಲ್ಲೂಕಿನ ಬ್ಯಾಹಟ್ಟಿಯಲ್ಲಿ ಶಿವಾನಂದ ಸಿದ್ದಪ್ಪ ನವಲೂರ ಅವರು ತಿರುಗುವ ಚಕ್ಕಡಿ ಮತ್ತು 11 ಸಂಗ್ರಾಣಿ ಕಲ್ಲುಗಳ ಮೇಲೆ ನಿಂತು ಶಕ್ತಿ ಪ್ರದರ್ಶಿಸಿದರು  ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ   

ಹುಬ್ಬಳ್ಳಿ: ಕಿಕ್ಕಿರಿದು ಸೇರಿದ್ದ ಜನ ಸಮೂಹ, ಜೈ ಹನುಮ, ಜೈ ಕೇಸರಿ ನಂದನ, ಬಪ್ಪರೆ ಎನ್ನುವ ಹರ್ಷೋದ್ಘಾರ... ಇದೆಲ್ಲಕ್ಕೂ ಸಾಕ್ಷಿಯಾಗಿದ್ದು ಹುಬ್ಬಳ್ಳಿ ತಾಲ್ಲೂಕಿನ ಬ್ಯಾಹಟ್ಟಿ ಗ್ರಾಮದ ಸರ್ಕಾರಿ ಮಾದರಿ ಕನ್ನಡ ಶಾಲೆ ಮೈದಾನದಲ್ಲಿ ಭಾನುವಾರ ನಡೆದ ಪೈಲ್ವಾನ್‌ ಶಿವಾನಂದ ಸಿದ್ದಪ್ಪ ನವಲೂರ ಅವರ ಶಕ್ತಿ ಪ್ರದರ್ಶನ.

42 ಕೆ.ಜಿಯಿಂದ 78 ಕೆ.ಜಿ ತೂಕದ ಸಂಗ್ರಾಣಿ ಕಲ್ಲುಗಳನ್ನು ಸಿಡಿ ಹೊಡೆಯುವುದು, ಭಾರೀ ತೂಕದ ನಾಲ್ಕು ಸಂಗ್ರಾಣಿ ಕಲ್ಲುಗಳನ್ನು ಭುಜಕ್ಕೆ ಎತ್ತಿಕೊಳ್ಳುವುದು, ಐದು ಕಬ್ಬಿಣದ ಅಚ್ಚುಗಳನ್ನು ಸಿಡಿ ಹೊಡೆಯುವುದು ಹಾಗೂ ನಾಲ್ಕು ಸಂಗ್ರಾಣಿ ಕಲ್ಲುಗಳನ್ನು ಒಂದೇ ಕೈಯಿಂದ ಎತ್ತಿದ ಶಿವಾನಂದ ಅವರ ಸಾಹಸ ಪ್ರದರ್ಶನ ನೆರೆದಿದ್ದ ಪ್ರೇಕ್ಷಕರ ಮೈನವಿರೇಳಿಸಿತು.

ಶಿವಾನಂದ ಅವರು ಮೂರು ಹಂತದಲ್ಲಿ ಸಂಗ್ರಾಣಿ ಕಲ್ಲುಗಳನ್ನು ಎತ್ತಿ ಶಕ್ತಿ ಪ್ರದರ್ಶಿಸುವ ಜೊತೆಗೆ, ತಿರುಗುವ ಚಕ್ಕಡಿ ಗಾಲಿ, ಸಂಗ್ರಾಣಿ ಕಲ್ಲುಗಳ ಮೇಲೆ ನಿಂತು 11 ಸಂಗ್ರಾಣಿ ಕಲ್ಲು, ಕಬ್ಬಿಣದ ಅಚ್ಚು, ಕಲ್ಲಿನ ದುಂಡಿಗಳನ್ನು ಎತ್ತಿದರು. ನಾಜೂಕಿನ ಶಕ್ತಿ ಪ್ರದರ್ಶನವಾದ ತಿರುಗುವ ಚಕ್ಕಡಿಯಿಂದ 11 ಸಂಗ್ರಾಣಿ ಕಲ್ಲುಗಳನ್ನು ಸಿಡಿ ಹೊಡೆಯುವುದನ್ನು ಜನ ತುದಿಗಾಲಲ್ಲಿ ನಿಂತು ನೋಡಿದರು.

ADVERTISEMENT

ಲೀಲಾಜಾಲವಾಗಿ ಕಲ್ಲುಗಳನ್ನು ಸಿಡಿ ಹೊಡೆದಾಗ ಬಪ್ಪರೆ ಎಂಬ ಹರ್ಷೋದ್ಘಾರ, ಜೈಕಾರ ಮತ್ತು ಬ್ಯಾಂಡ್‌ಸೆಟ್‌ ಸದ್ದು ಕೇಳಿಬಂತು.ಅಖಾಡದಲ್ಲಿ ಸಣ್ಣ ಪೈಲ್ವಾನರು, ಹಾಲಿ ಮತ್ತು ಮಾಜಿ ಪೈಲ್ವಾನರು ಅಖಾಂಡದ ಮೆರಗು ಹೆಚ್ಚಿಸಿದರು. ಶಕ್ತಿ ಪ್ರದರ್ಶನದ ಉದ್ದಕ್ಕೂ ಶಿವಾನಂದ ಅವರ ಸಹಾಯಕರು ಹಾಗೂ ತರಬೇತಿದಾರರು ಬೆಂಬಲಕ್ಕೆ ನಿಂತರು. ಪ್ರತಿ ಶಕ್ತಿ ಪ್ರದರ್ಶನಕ್ಕು ಕೇಕೆ ಹಾಕಿ ಹುರಿದುಂಬಿಸಿದರು.

ಮರುಳಸಿದ್ದ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಚಿವ ಶಂಕರಪಾಟೀಲ ಮುನೇನಕೊಪ್ಪ, ಶಿವಾನಂದ ಅವರ ತರಬೇತುದಾರ ಮಾಜಿ ಪೈಲ್ವಾನ್‌ ರೈಮನಸಾಬ ಜೊರಮ್ಮನವರ, ಕಾಂಗ್ರೆಸ್ ಮುಖಂಡ ಎನ್.ಎಚ್. ಕೋನರಡ್ಡಿ, ಸುರೇಶ ಗೋಕಾಕ,ರೈತ ಸೇನೆ ಅಧ್ಯಕ್ಷ ವೀರೇಶ ಸೊಬರದಮಠ, ಬ್ಯಾಹಟ್ಟಿಯ ಹಿರೇಮಠ ಸ್ವಾಮೀಜಿ, ಶಿವಾನಂದ ಕರಿಗಾರ, ಸಂತೋಷ ಜೀವಣ್ಣವರ, ಸೋಮಶೇಖರ ಪಟ್ಟಣಶೆಟ್ಟಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಯಡ್ರಾವಿ, ಗುರು ರಾಯನಗೌಡ್ರ, ಪ್ರೀತಂ ಅರಿಕೇರಿ, ಗ್ರಾಮ ಪಂಚಾಯ್ತಿ ಸದಸ್ಯ ಸಂತೋಷ ಜೀವನಗೌಡರ ಇದ್ದರು.

ಮಳೆಯಲ್ಲೂ ಕುಗ್ಗದ ಉತ್ಸಾಹ

ಪ್ರದರ್ಶನ ನಡೆಯುವಾಗ ಸಣ್ಣದಾಗಿ ಮಳೆ ಬೀಳತೊಡಗಿತು. ಶಿವಾನಂದ ಅವರು ಸಂಗ್ರಾಣಿ ಕಲ್ಲುಗಳನ್ನು ಎತ್ತಿ ನೆಲಕ್ಕೆ (ಸಿಡಿ ಹೊಡೆದಾಗ) ಬೀಳಿಸಿದಾಗ ಎದ್ದೇಳುತ್ತಿದ್ದ ದೂಳನ್ನು ಮಳೆಯ ಹನಿಗಳು ತಣಿಸುತ್ತಿತ್ತು. ಮಳೆ ಜೋರಾದರೂ ಪ್ರದರ್ಶನ ಮಾತ್ರ ನಿಲ್ಲಲಿಲ್ಲ. ಜನರೂ ಜಾಗ ಬಿಟ್ಟು ಕದಲದೆ ವೀಕ್ಷಿಸಿದರು. ‌

ಶಕ್ತಿ ಪ್ರದರ್ಶನ ವೀಕ್ಷಿಸಲು ಬ್ಯಾಹಟ್ಟಿ ಸುತ್ತಮುತ್ತಲಿನ ಹಳ್ಳಿಗಳ ಜನ ಸೇರಿದ್ದರು. ಟ್ರ್ಯಾಕ್ಟರ್‌, ಮರ ಮತ್ತು ಮನೆಗಳ ಮಹಡಿಯ ಮೇಲೆ ನಿಂತು ಶಿವಾನಂದ ಅವರ ಶಕ್ತಿ ಪ್ರದರ್ಶನವನ್ನು ಕಣ್ತುಂಬಿಕೊಂಡರು.

ಪ್ರೋತ್ಸಾಹಕ್ಕೆ ಸಿದ್ಧ: ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ‘ಶಿವಾನಂದ ನವಲೂರ ಅವರ ಪ್ರತಿಭೆ ಮೆಚ್ಚುವಂತಹದ್ದು. ಅವರು ಇ‌ಚ್ಛಿಸಿದರೆ ಅವರಿಗೆ ತರಬೇತಿ ನೀಡಿ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.