
ಧಾರವಾಡ: ‘ಬನ್ನಂಜೆ ಗೋವಿಂದಾಚಾರ್ಯ ಅವರ ಅನುವಾದದ ಶೈಲಿ ಮನಸ್ಸಿಗೆ ತಟ್ಟುತ್ತದೆ. ಸಂಸ್ಕೃತಿಯನ್ನು ಜನರಿಗೆ ತಿಳಿಸುವ ಆಶಯದಿಂದ ಭಗವದ್ಗೀತೆ ಮೊದಲಾದ ಶಾಸ್ತ್ರ ಗ್ರಂಥಗಳನ್ನು ಸರಳವಾಗಿ ಅನುವಾದಿಸಿದ್ದಾರೆ’ ಎಂದು ವಿದ್ವಾಂಸ ವಿಜಯಸಿಂಹ ಆಚಾರ್ಯ ಹೇಳಿದರು.
ಬೆಂಗಳೂರಿನ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಮತ್ತು ನಗರದ ಸ್ನೇಹ ಪ್ರತಿಷ್ಠಾನದ ವತಿಯಿಂದ ಆಲೂರು ವೆಂಕಟರಾವ ಭವನದಲ್ಲಿ ಶನಿವಾರ ನಡೆದ ‘ಬನ್ನಂಜೆ 90ರ ವಿಶ್ವನಮನ’ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಗೋವಿಂದಾಚಾರ್ಯ ಅವರ ಸಾಹಿತ್ಯವು ಕನ್ನಡಮ್ಮನ ಒಡವೆ. ಅವರ ಕೃತಿಗಳನ್ನು ಎಲ್ಲರೂ ಓದಬೇಕು’ ಎಂದು ಹೇಳಿದರು.
ಸಾಹಿತಿ ಹರ್ಷ ಡಂಬಳ ಮಾತನಾಡಿ, ‘ಗೋವಿಂದಾಚಾರ್ಯ ಅವರು 155 ಕೃತಿಗಳನ್ನು ಬರೆದಿದ್ದಾರೆ. ಅವರು ವೇದಾಂತದ ಬಹು ಆಯಾಮದಲ್ಲಿ ಮಾನ್ಯತೆ ಪಡೆದಿದ್ದರು. ಧಾರವಾಡದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು’ ಎಂದರು.
ಅಥಣಿಯ ವಿಮೋಚನಾ ಸಂಸ್ಥೆಯ ಬಿ.ಎಲ್.ಪಾಟೀಲ ಮಾತನಾಡಿ, ‘ಗೋವಿಂದಾಚಾರ್ಯ ಅವರು ಎಲ್ಲರೊಂದಿಗೆ ಬೆರೆಯತ್ತಿದ್ದರು. ಗುಣ ಸಂಪನ್ನರಾಗಿದ್ದರು’ ಎಂದು ಬಣ್ಣಿಸಿದರು.
ಸಾಹಿತಿ ಎಚ್.ವಿ.ಕಾಖಂಡಿಕಿ ಮಾತನಾಡಿ, ‘ಗೋವಿಂದಾಚಾರ್ಯ ಅವರು ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಅವರ ಎಲ್ಲ ಕೃತಿಗಳನ್ನು ಓದಬೇಕು. ಅರ್ಥ ಮಾಡಿಕೊಳ್ಳಬೇಕು’ ಎಂದರು.
ಸಂಸ್ಕೃತ ವಿ.ವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ವಾಂಸ ಶ್ರೀರಾಮ ಭಟ್, ವಿಜ್ಞಾನಿ ರಮೇಶ ವಾಸುದೇವ ಆಚಾರ್ಯ, ರಾಧಿಕಾ ಖಾಕಂಡಿಕಿ ಮಾತನಾಡಿದರು. ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ಟ್ರಸ್ಟಿ ವೀಣಾ ಬನ್ನಂಜೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.