ADVERTISEMENT

ಧಾರವಾಡ | ಸಾಮಾಜಿಕ ಕ್ರಾಂತಿಯ ಹರಿಹಾರನಿಗೆ ಎಲ್ಲೆಡೆ ನಮನ

ಜಿಲ್ಲೆಯಾದ್ಯಂತ ಸಂಭ್ರಮದ ಬಸವೇಶ್ವರ ಜಯಂತಿ

​ಪ್ರಜಾವಾಣಿ ವಾರ್ತೆ
Published 3 ಮೇ 2022, 15:56 IST
Last Updated 3 ಮೇ 2022, 15:56 IST
ಧಾರವಾಡದ ಉಳವಿ ಚನ್ನಬಸವೇಶ್ವರರ ಗುಡಿಯಲ್ಲಿ ಬಸವ ಜಯಂತಿ ಅಂಗವಾಗಿ ಮಂಗಳವಾರ ವಿಶೇಷ ಅಲಂಕಾರ ಮಾಡಲಾಗಿತ್ತು
ಧಾರವಾಡದ ಉಳವಿ ಚನ್ನಬಸವೇಶ್ವರರ ಗುಡಿಯಲ್ಲಿ ಬಸವ ಜಯಂತಿ ಅಂಗವಾಗಿ ಮಂಗಳವಾರ ವಿಶೇಷ ಅಲಂಕಾರ ಮಾಡಲಾಗಿತ್ತು   

ಧಾರವಾಡ: ಸಮ ಸಮಾಜದ ಹರಿಕಾರ, ಮಹಾನ್ ಮಾನವತಾವಾದಿ, ಕಾಯಕವೇ ಕೈಲಾಸವೆಂಬ ಮಂತ್ರವನ್ನು ಜಗತ್ತಿಗೆ ಸಾರಿದ ವಿಶ್ವಗುರು ಬಸವೇಶ್ವರರ ಜಯಂತಿಯನ್ನು ಮಂಗಳವಾರ ಜಿಲ್ಲೆಯಾದ್ಯಂತ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಬಸವ ಜಯಂತಿಯೊಂದಿಗೆ ರಂಜಾನ್ ಹಾಗೂ ಅಕ್ಷಯ ತೃತೀಯ ಹಬ್ಬಗಳೂ ಸೇರಿದ್ದರಿಂದ ಸಡಗರ ಇಮ್ಮಡಿಯಾಗಿತ್ತು. ನಗರದ ದೇವಾಲಯಗಳಲ್ಲಿ ಮಂಗಳವಾರ ವಿಶೇಷ ಪೂಜೆಗಳು ಜರುಗಿದವು.

ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಗಣ್ಯರು ಕಲಾಭವನ ಆವರಣದಲ್ಲಿರುವ ಅಶ್ವಾರೂಢ ಬಸವೇಶ್ವರರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಅರ್ಪಿಸಿದರು. ಅಲ್ಲಲ್ಲಿ ವಚನ ಗಾಯನಗಳು ನಡೆದವು. ಯುವಕರು ವಾಹನಗಳಿಗೆ ಬಸವೇಶ್ವರರ ಭಾವಚಿತ್ರ ಇರುವ ಕೇಸರಿ ಧ್ವಜ ಕಟ್ಟಿಕೊಂಡು ನಗರದಾದ್ಯಂತ ಸಂಚರಿಸಿದರು.

ADVERTISEMENT

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬಸವ ಜಯಂತಿ ಅಂಗವಾಗಿ ಇಂದು ಬೆಳಿಗ್ಗೆ ಕಲಾಭವನ ಆವರಣದ ಮಹಾತ್ಮ ಬಸವೇಶ್ವರರ ಮೂರ್ತಿಗೆ ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.ನಂತರ ಉಳವಿ ಚನ್ನಬಸವೇಶ್ವರ ದೇವಸ್ಥಾನದಿಂದ ಹಮ್ಮಿಕೊಂಡಿದ್ದ ಮೆರವಣಿಗೆಗೆ ಚಾಲನೆ ನೀಡಿದರು.

ಮುರುಘಾಮಠ ಮಲ್ಲಿಕಾರ್ಜುನ ಸ್ವಾಮೀಜಿ, ಶಾಸಕ ಅಮೃತ ದೇಸಾಯಿ, ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ, ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಸುರೇಶ ಇಟ್ನಾಳ್‌, ಉಳವಿ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಟಿ.ಎಸ್. ಪಾಟೀಲ, ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷ ಗುರುರಾಜ ಹುಣಸಿಮರದ ಇದ್ದರು.

ಬಸವೇಶ್ವರರ ಪ್ರತಿಮೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಮಾಲಾರ್ಪಣೆ ಮಾಡಿ ಭಕ್ತಿಯ ನಮನ ಸಲ್ಲಿಸಿದರು.

ವೀರಶೈವ ಮಹಾಸಭಾ: ‘ಬಸವೇಶ್ವರರ ತತ್ವ ಸಿದ್ಧಾಂತಗಳು ವಿಶ್ವಮಾನ್ಯವಾಗಿವೆ ವಚನಗಳ ಒಂದು ಸಾಲನ್ನಾದರೂ ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ’ ಎಂದು ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷ ಗುರುರಾಜ ಹುಣಸಿಮರದ ಹೇಳಿದರು.

ಉಪಾಧ್ಯಕ್ಷ ಬಸನಗೌಡ ಪಾಟೀಲ, ಡಾ. ಸುವರ್ಣಾ ಬಿರಾದಾರ, ಶಿವಶರಣ ಕಲಬಶೆಟ್ಟರ, ಬಿ.ಎಸ್. ಗೋಲಪ್ಪನವರ, ಶಂಕರ ಕುಂಬಿ, ಮಲ್ಲನಗೌಡ ಪಾಟೀಲ ಇದ್ದರು. ಬಾಲ ಬಸವ ಸೇನೆಯ ಮಕ್ಕಳು ವಚನ ಪ್ರಾರ್ಥನೆ ಸಲ್ಲಿಸಿದರು.

ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ: ನಗರದ ಟೌನ್‌ಹಾಲ್‌ ಎದುರು ಇರುವ ಬಸವೇಶ್ವರ ವೃತ್ತದಲ್ಲಿ ಸಂಸ್ಥೆ ವತಿಯಿಂದ ಬಸವೇಶ್ವರರ ಜಯಂತಿ ಆಚರಿಸಲಾಯಿತು. ಬಸವೇಶ್ವರರ ಹತ್ತು ಅಡಿ ಎತ್ತದ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಸಂಸ್ಥೆಯ ಕಾರ್ಯಾಧ್ಯಕ್ಷ ಆರ್.ಯು. ಬೆಳ್ಳಕ್ಕಿ, ಜಂಟಿ ಕಾರ್ಯದರ್ಶಿ ಎಸ್.ಎಂ. ಅಗಡಿ, ಬಸವರಾಜ ತಾಳಿಕೋಟಿ, ಶಿವಲಿಂಗ ನೀಲಗುಂದ,ವಿಶ್ವನಾಥ ದೇಶಪಾಂಡೆ, ಬಸವರಾಜ ಕೊಣ್ಣೂರ, ಸೋಮಶೇಖರ ಕರಡಿಗುಡ್ಡ, ಸಿದ್ದನಗೌಡ ಪಾಟೀಲ, ಮಹಾದೇವ ಹೊಸಮನಿ, ದೇವೇಂದ್ರ ಹೊಂಬಳ, ಜೆ.ಕೆ. ಲಮಾಣಿ, ಮುತ್ತು ಅಮರಗೋಳ, ಎಸ್.ಡಿ. ವಾಲಗಳ್ಳಿ ಮತ್ತು ಎಸ್.ಬಿ. ಮಗದುಮ್ಮ ಇದ್ದರು.

ಕರ್ನಾಟಕ ವಿದ್ಯಾವರ್ಧಕ ಸಂಘ: ಬಸವೇಶ್ವರರ ಭಾವಚಿತ್ರಕ್ಕೆ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅವರು ಗೌರವ ಸಮರ್ಪಿಸಿ ಮಾತನಾಡಿ, ‘ಜಗತ್ತಿನ ಪ್ರಪಥಮ ಸಮತಾವಾದಿ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ್ದ ಬಸವಣ್ಣನವರು ಮಹಾಮಾನ್‌ ಮಾನವತಾವಾದಿಯಾಗಿದ್ದರು. ಜಾತಿ, ಮತ, ಪಂಥವಿಲ್ಲದೆ ಸರ್ವರನ್ನು ಇವ ನಮ್ಮವ, ಇವ ನಮ್ಮವ ಎಂದು ಅಪ್ಪಿಕೊಂಡ ಮಹಾನ್ ಚೇತನ. ಕಾಯಕ ಮತ್ತು ದಾಸೋಹ ಕಡ್ಡಾಯ ಮಾಡಿದ ಶರಣರು ಕಾಯಕದಲ್ಲಿ ನಿಷ್ಠೆ, ದಾಸೋಹದಲ್ಲಿ ನಿರಹಂಕಾರ ಭಾವ ತುಂಬಿರಬೇಕು’ ಎಂದು ಹೇಳಿದರು.

ಉಪಾಧ್ಯಕ್ಷ ಪ್ರೊ. ಮಾಲತಿ ಪಟ್ಟಣಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಬಸವಪ್ರಭು ಹೊಸಕೇರಿ, ಶಂಕರ ಕುಂಬಿ,ವೀರಣ್ಣ ಒಡ್ಡೀನ, ಗುರು ಹಿರೇಮಠ, ಡಾ. ಮಹೇಶ ಹೊರಕೇರಿ, ಡಾ. ಜಿತನದತ್ತ ಹಡಗಲಿ, ವಿಶ್ವೇಶ್ವರಿ ಬ. ಹಿರೇಮಠ, ಡಾ. ಧನವಂತ ಹಾಜವಗೋಳ, ಸದಾಶಿವ ಜನಗೌಡರ, ಡಾ. ರಾಜಕುಮಾರ ಪಾಟೀಲ, ಡಾ. ದೀಪಾ ಪಾಟೀಲ, ಕಚೇರಿ ಅಧೀಕ್ಷಕ ನಿಂ.ಶಿ. ಕಾಶಪ್ಪನವರ ಇದ್ದರು. ಶಿ.ಮ. ರಾಚಯ್ಯನವರ ಅವರು ಬಸವೇಶ್ವರರ ವಚನಗಳನ್ನು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.