ADVERTISEMENT

ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಹಾರದಲ್ಲಿ ವಿಷ ಶಂಕೆ: ಬೆಲ್ಲದ

ಕೂಡಲ ಸಂಗಮದ ಪಂಚಮಸಾಲಿ ಮಠದ ವಿವಾದ * ತೀವ್ರಗೊಂಡ ಪರ–ವಿರೋಧ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 19:13 IST
Last Updated 21 ಜುಲೈ 2025, 19:13 IST
ಅರವಿಂದ ಬೆಲ್ಲದ
ಅರವಿಂದ ಬೆಲ್ಲದ   

ಹುಬ್ಬಳ್ಳಿ: ‘ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ‘ಮುಗಿಸಿ’ದರೆ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಬೇಡಿಕೆ ಹೋರಾಟ ಅಂತ್ಯವಾಗಲಿದೆ ಎಂದು ಕಾಂಗ್ರೆಸ್ ಸರ್ಕಾರ ಭಾವಿಸಿದಂತಿದೆ’ ಎಂದು ವಿಧಾನಸಭೆ ವಿರೋಧಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆರೋಪಿಸಿದರು.

‘ವಿಷಪೂರಿತ ಆಹಾರ ಸೇವನೆಯಿಂದ ಸ್ವಾಮೀಜಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ತಿನ್ನುವ ಆಹಾರದಲ್ಲಿ ವಿಷ ಬೆರೆಸಲಾಗಿದೆ ಎಂದು ಸ್ವಾಮೀಜಿಯವರೇ ಶಂಕೆ ವ್ಯಕ್ತಪಡಿಸಿದ್ದಾರೆ. ಸತ್ಯವಾಗಿದ್ದರೆ ದೊಡ್ಡ ದುಷ್ಕೃತ್ಯ’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

‘ಕೆಲ ದಿನದ ಹಿಂದೆ ಪಂಚಮಸಾಲಿ ಮಠಕ್ಕೆ ಬೀಗ ಹಾಕಲಾಗಿತ್ತು. ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದ ಸ್ವಾಮೀಜಿ ಮಠಕ್ಕೆ ಮರಳಿದ್ದರು. ಅಲ್ಲಿ ನಡೆಯುವ ಬೆಳವಣಿಗೆ ಗಮನಿಸಲು ಕೆಲ ಮುಸ್ಲಿಂ ಯುವಕರನ್ನು ಬಿಟ್ಟಿದ್ದರು. ಅವರು ಅಡುಗೆ ಮನೆಗೆ ಹೋಗಿದ್ದ ದಿನವೇ, ಸ್ವಾಮೀಜಿ ಅವರ ಆರೋಗ್ಯ ಹದಗೆಟ್ಟಿತು’ ಎಂದು ಆರೋಪಿಸಿದರು.

ADVERTISEMENT

‘2ಎ ಮೀಸಲಾತಿಗಾಗಿ ಸ್ವಾಮೀಜಿ ನಿರಂತರ ಹೋರಾಟ ನಡೆಸಿದ್ದಾರೆ. ಇತ್ತೀಚಿನ ಎಲ್ಲ ಬೆಳವಣಿಗೆಗಳನ್ನು ಲಿಂಗಾಯತ ಪಂಚಮಸಾಲಿ ಸಮಾಜ ಸೂಕ್ಷ್ಮವಾಗಿ ಗಮನಿಸುತ್ತಿದೆ. ಸ್ವಾಮೀಜಿಗೆ ತೊಂದರೆ ಕೊಟ್ಟು, ಹೋರಾಟ ಹತ್ತಿಕ್ಕುವ ಷಡ್ಯಂತ್ರ ನಡೆದಿದೆ. ಅದು ಅಸಾಧ್ಯ. ಸೂಕ್ತ ಸಮಯದಲ್ಲಿ ಸಮಾಜ ತಕ್ಕ ಉತ್ತರ ನೀಡಲಿದೆ’ ಎಂದರು.

‘ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಯಾವ ಪಕ್ಷ, ಮಠಕ್ಕೂ ಸೀಮಿತವಾಗಿಲ್ಲ. ಅವರು ಸಮಾಜದ ಅಭ್ಯುದಯಕ್ಕೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಹಿಂದೆ ನಮ್ಮ ಬಿಜೆಪಿ ಸರ್ಕಾರ 2ಎ ಮೀಸಲಾತಿ ನೀಡುವುದಾಗಿ ಘೋಷಿಸಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಅದನ್ನು ಜಾರಿಗೆ ತರುತ್ತಿಲ್ಲ’ ಎಂದು ಬೆಲ್ಲದ ಆರೋಪಿಸಿದರು.

ಸಿ.ಸಿ.ಪಾಟೀಲ
ಬಸನಗೌಡ ಪಾಟೀಲ ಯತ್ನಾಳ

ಇಬ್ಬರೂ ಸಮಾಜದ ಹಿತ ಕಾಯಲಿ: ಸಿ.ಸಿ.ಪಾಟೀಲ

ನರಗುಂದ (ಗದಗ ಜಿಲ್ಲೆ): ‘ಶಾಸಕ ವಿಜಯಾನಂದ ಕಾಶಪ್ಪನವರ ಅಥವಾ ಬಸವಜಯ ಮೃತ್ಯುಂಜಯ ಶ್ರೀಗಳ ನಡುವೆ ಮುನಿಸು ಏಕಿದೆಯೊ ಗೊತ್ತಾಗುತ್ತಿಲ್ಲ. ಇಬ್ಬರು ಪಂಚಮಸಾಲಿ ಸಮಾಜದ ಹಿತ ಕಾಯಬೇಕು’ ಎಂದು ಶಾಸಕ ಸಿ.ಸಿ.ಪಾಟೀಲ ಅಭಿಪ್ರಾಯಪಟ್ಟರು.  ‘ಈಗಿನ ಘಟನೆಗಳಿಂದ ಶ್ರೀಗಳಿಗೆ ಸ್ವಲ್ಪ ಹಿಂಸೆಯಾಗಿದೆ. ಸಂಧಾನದಲ್ಲಿ ಪರಿಹಾರ ಸಿಗದಿದ್ದರೆ ಅಥವಾ ಮೂಲಪೀಠದಲ್ಲಿ ತೊಂದರೆಯಾದರೆ ಶ್ರೀಗಳು ಬಯಸಿದ ಸ್ಥಳದಲ್ಲೇ ಶಾಖಾ ಪೀಠ ನಿರ್ಮಿಸಲಾಗುವುದು. ಅವರಿಗೆ ನಮ್ಮ ಸಮಾಜದ ಎಲ್ಲ ಶಾಸಕರು ಹಿರಿಯರು ಬೆಂಗಾವಲಾಗಿ ನಿಲ್ಲುತ್ತೇವೆ’ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ‘ಹಿಂದೆ ನಮ್ಮ ಪಕ್ಷದ ಸರ್ಕಾರವಿದ್ದಾಗ ಕಾಶಪ್ಪನವರ ಮತ್ತು ಶ್ರೀಗಳು ಜೊತೆಗೂಡಿ 750 ಕಿ.ಮೀ. ಪಾದಯಾತ್ರೆ ಮಾಡಿದ್ದರು. ನಾನು ಸರ್ಕಾರ ಹಾಗೂ ಸಮಾಜದ ಕೊಂಡಿಯಾಗಿ ಕೆಲಸ ಮಾಡಿದ್ದೆ. ನಮ್ಮ ಸರ್ಕಾರ ಬಂದರೆ 24 ಗಂಟೆಯಲ್ಲಿ 2ಎ ಮೀಸಲಾತಿ ಮಾಡುವುದಾಗಿ ಆಗ ಕಾಶಪ್ಪನವರ ಹೇಳಿದ್ದರು. ಈಗ ಆ ಮಾತು ಮರೆತಿದ್ದಾರೆ’ ಎಂದರು.

ವಿಜಯಾನಂದನೇ ಸ್ವಾಮೀಜಿ ಆಗಲಿ: ಯತ್ನಾಳ 

ವಿಜಯಪುರ: ‘ಬಸವಜಯ ಮೃತ್ಯುಂಜಯ ಸ್ವಾಮೀಜಿ ಸ್ಥಾನಕ್ಕೆ ಪರ್ಯಾಯ ಸ್ವಾಮೀಜಿ ನೇಮಿಸುವ ಬದಲು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರೇ ಸ್ವಾಮೀಜಿಯಾಗಲಿ’ ಎಂದು ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ‘ಪರ್ಯಾಯ ಪೀಠ ಮಠಗಳು ಮಾಡುವುದರಿಂದ ಭಕ್ತರಿಗೆ ಮತ್ತು ಸಮಾಜಕ್ಕೆ ತೊಂದರೆ ಹೆಚ್ಚಾಗಲಿದೆ. ಆ ಮಠಕ್ಕೆ ಹೋದರೆ ಈ ಮಠದವರು ಮುನಿಸಿಕೊಳ್ಳುತ್ತಾರೆ’ ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.  ‘ಈ ಹಿಂದೆ ಒಬ್ಬರು ಕೂಡಲಸಂಗಮ ಪೀಠಕ್ಕೆ ಪರ್ಯಾಯವಾಗಿ ಜಮಖಂಡಿ ತಾಲ್ಲೂಕಿನಲ್ಲಿ ಪಂಚಮಸಾಲಿ ಸಮಾಜದ ಮೂರನೇ ಪೀಠ ಸ್ಥಾಪಿಸಿ ಮಾಡಿ ಅಲ್ಲೊಂದು ಸ್ವಾಮೀಜಿಯನ್ನು ಕೂರಿಸಿದ್ದಾರೆ. ಇದರಿಂದ ಏನಾದರೂ ಸಮಾಜದಲ್ಲಿ ರಕ್ತಕ್ರಾಂತಿ ಆಗಿದೆಯಾ? ಏನೂ ಆಗಿಲ್ಲ’ ಎಂದರು. ‘ಆಹಾರದಲ್ಲಿ ವಿಷ ಮಿಶ್ರಣ ಕುರಿತ ಆರೋಪಕ್ಕೆ ಪ್ರತಿಕ್ರಿಯಿಸಿ ‘ಬೆಲ್ಲದ ಅವರು ವಿಧಾನಸಭೆಯಲ್ಲಿ ಉಪ ನಾಯಕರು. ಅವರ ಬಳಿ ಬಹಳ ಮಾಹಿತಿ ಇರುತ್ತದೆ. ನನಗೆ ಮಾಹಿತಿ ಇಲ್ಲ. ಸುಮ್ಮನೇ ಆರೋಪ ಮಾಡಲ್ಲ’ ಎಂದರು. ಉಪಯೋಗ ಪಡೆದಿಲ್ಲ: ‘ನಾನು ಯಾವುದೇ ಸ್ವಾಮೀಜಿ ಜಗದ್ಗುರುಗಳಿಂದ ಉಪಯೋಗ ಪಡೆದಿಲ್ಲ. ನನ್ನ ಮಂತ್ರಿ ಮಾಡಿಸಿಯೆಂದು ₹11 ಲಕ್ಷ ಕಾಣಿಕೆ ಇಟ್ಟು ಪಾದಪೂಜೆ ಮಾಡಲು ಹೋಗಿಲ್ಲ. ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಹೊರತುಪಡಿಸಿ ಮತ್ತ್ಯಾವ ಸ್ವಾಮೀಜಿಗಳ ಕಾಲಿಗೂ ಇನ್ನೂ ಬಿದ್ದಿಲ್ಲ’ ಎಂದು ಹೇಳಿದರು. ‘ಬಸವ ತತ್ವ ಹೇಳುವ ಕೆಲ ಲಪೂಟರಿದ್ದಾರೆ. ಬಸವಣ್ಣನನ್ನು ಪೇಟೆಂಟ್‌ ಮಾಡಿಕೊಂಡವರಂತೆ ಮಾತನಾಡುತ್ತಾರೆ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.