ADVERTISEMENT

ಧಾರವಾಡ: ಬಸವರಾಜ ಕಟ್ಟೀಮನಿ ಪ್ರಶಸ್ತಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 6:55 IST
Last Updated 19 ಜನವರಿ 2026, 6:55 IST
<div class="paragraphs"><p>ಧಾರವಾಡದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಭಾನುವಾರ ನಡೆದ ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ ಸಮಾರಂಭ</p></div>

ಧಾರವಾಡದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಭಾನುವಾರ ನಡೆದ ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ ಸಮಾರಂಭ

   

ಪ್ರಜಾವಾಣಿ ಚಿತ್ರ

ಧಾರವಾಡ: ‘ಆಧುನಿಕ ಕಾಲಘಟ್ಟದಲ್ಲಿ ಹೇಗೆ ಬರೆಯಬೇಕು ಎಂದು ಹೊಸ ತಲೆಮಾರಿನರು ಕ್ರಿಯಾಶೀಲರಾಗಿದ್ದಾರೆ. ಹಿರಿಯುರು ಯುವಜನರನ್ನು ಹೊಸದಾಗಿ ನೋಡಬೇಕಾದ ಅವಶ್ಯಕತೆ ಇದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರಷೋತ್ತಮ ಬಿಳಿಮಲೆ ಹೇಳಿದರು.

ADVERTISEMENT

ಬೆಳಗಾವಿ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಮತ್ತು ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಭಾನುವಾರ ನಡೆದ ಬಸವರಾಜ ಕಟ್ಟೀಮನಿ ಯುವಸಾಹಿತ್ಯ ಪುಸ್ತಕ ಪ್ರಶಸ್ತಿ ಮತ್ತು ಆತ್ಮಕಥಾ ಪುಸ್ತಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

‘ಹೊಸ ತಲೆಮಾರಿನವರು ನಮ್ಮ ಕಾಲದ ನಮ್ಮದೇ ಕತೆಗಳನ್ನು ಬರೆಯುತ್ತಿದ್ದಾರೆ. ಆ ಬರಹಗಳು ಸಮಾಜದ ಕತೆಗಳು ಎಂಬ ತಿಳಿವಳಿಕೆ ಬಂದಾಗ ಓದುವ, ಬರೆಯುವ ಪ್ರಕ್ರಿಯೆಗೆ ಹೊಸ ಆಯಾಮ ಬರುತ್ತದೆ. 1990ರ ದಶಕದ ನಂತರದ ಜಾಗತೀಕರಣದ ಸಂದರ್ಭದಲ್ಲಿ ಬೆಳೆಯುತ್ತಿರುವ ಹೊಸ ಭಾವನೆಗಳನ್ನು ಯುವ ಲೇಖಕರು ಹಿಡಿಯುತ್ತಿರುವುದು ಸಂತಸದ ಸಂಗತಿ’ ಎಂದರು.

‘21ನೇ ಶತಮಾನದ ಮೊದಲ ದಶಕದಲ್ಲಿ ಅನುಭವಿಸುತ್ತಿರುವ ಜಾಗತೀಕರಣ, 1992 ರ ಅನಂತರ ಭಾರತದಲ್ಲಿ ಬೆಳೆದಿರುವ ಹಿಂದುತ್ವದ (ರಾಜಕೀಯ ಅಲ್ಲ, ಹಿಂದೂ ರಾಷ್ಟ್ರದ ಬಗೆಗಿನ ಕಲ್ಪನೆಗಳ ಚರ್ಚೆ...) ಬೆಳವಣಿಗೆ ಈ ಎರಡೂ ಬೆಳವಣಿಗೆಗಳಿಗೆ ತೀಕ್ಷ್ಣವಾಗಿ ಬರೆಯುಂಥ ಲೇಖಕ ವರ್ಗ ಹೊಸತಲೆಮಾರಿನ ರೂಪದಲ್ಲಿ ಈಗ ಉದಯಿಸುತ್ತಿದೆ’ ಎಂದು ಹೇಳಿದರು.

‘ಕರ್ನಾಟಕದಲ್ಲಿ 850 ಮುಸ್ಲಿಂ ಲೇಖಕರು (ಒಂದು ಪುಸ್ತಕವನ್ನಾದರೂ ಪ್ರಕಟಿಸಿರು‌ವವರು) ಇದ್ಧಾರೆ. ಮುಸ್ಲಿಂ ಮಹಿಳೆಯರೂ ತೀಕ್ಷ್ಣವಾಗಿ ಬರೆವಣಿಗೆಯಲ್ಲಿ ತೊಡಗಿಕೊಂಡಿದ್ಧಾರೆ. ‘ಹಿಜಾಬ್‌’ (ಧರಿಸಿದರೆ ಹೊರಗಿನವರ ಗಲಾಟೆ, ಧರಿಸದಿದ್ದರೆ ಮನೆಯವರು ಹೊರಗೋಗಲು ಬಿಡಲ್ಲ..) ತಿಕ್ಕಾಟದ ನಡುವೆ ಬರಹ ರೂಪುಗೊಳ್ಳುವುದೇ ವಿಶಿಷ್ಟ. ಅಸ್ವಸ್ಥ ಮನಸ್ಸುಗಳು ಅತ್ಯುತ್ತಮ ಸಾಹಿತ್ಯವನ್ನು ರಚಿಸುತ್ತವೆ. ಎಲ್ಲರಿಗೂ ಬರೆಯುವ ಹಕ್ಕು ಇದೆ. ಎಲ್ಲರೂ ಬರೆಯಬೇಕು’ ಎಂದರು.

‘1990ರ ನಂತರ ಜಗತ್ತು ತನಗೆ ಬೇಕಾದಂಥ ಹೊಸ ಭಾಷೆಯನ್ನು ಸೃಷ್ಟಿಸಲು ಶುರುಮಾಡಿತು. ಅದೇ ಜಾಹೀರಾತು ಮಾದರಿಯ ಮಾರುಕಟ್ಟೆ ಕೇಂದ್ರಿತ ಭಾಷೆ, ಅದು ಏಕರೂಪಿ. ಅದಕ್ಕೆ ಪೂರಕವಾಗಿ ಭಾಷೆಯನ್ನು ಬೆಳೆಸಲಾಗುತ್ತದೆ. ಮುಂದಿನ 70 ವರ್ಷದಲ್ಲಿ ಜಗತ್ತಿನ ಶೇ 92 ಜನರ ಭಾಷೆ ಹಿಂದಕ್ಕೆ ಹೋಗಿ ಕೇವಲ ಶೇ 8 ಜನರ ಭಾಷೆ ಮುಂದಕ್ಕೆ ಬರಲಿದೆ ( ಶೇ 8 ಜನರ ಆ ಭಾಷೆ ಎಂದರೆ ಜಾಹೀರಾತು ಮಾದರಿಯ ಭಾಷೆ) ಎಂದು ಪೆನ್ಸಿಲ್ವೆನಿಯಾ ವಿ.ವಿ ಈಚೆಗೆ ಬಿಡುಗಡೆಗೊಳಿಸಿರುವ ವರದಿ ಹೇಳಿದೆ’ ಎಂದು ತಿಳಿಸಿದರು.

‘ಹಿಂದಿ ಇರುವ ರಾಜ್ಯಗಳಲ್ಲಿ (ಉತ್ತರ ಭಾರತ) ಕರ್ನಾಟಕದವರು 20 ಸಾವಿರಕ್ಕಿಂತ ಹೆಚ್ಚು ಇಲ್ಲ. ಆ 20 ಸಾವಿರ ಜನರಿಗಾಗಿ ಇಲ್ಲಿ 7.42 ಲಕ್ಷ ಮಕ್ಕಳಿಗೆ ಹಿಂದಿ ಕಲಿಸುತ್ತೇವೆ. ಇದು ಸರಿಯಾದ ಕ್ರಮವಲ್ಲ. 7.42 ಲಕ್ಷ ಮಕ್ಕಳಲ್ಲಿ 1.42 ಲಕ್ಷ (ಶೇ 22) ಮಕ್ಕಳು ಕಳೆದ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ವಿಷಯದಲ್ಲಿ ಅನುತ್ತೀರ್ಣರಾಗಿದ್ಧಾರೆ. ಒಂದು ಭಾಷೆಯನ್ನು ಹೇಗೆ, ಎಲ್ಲಿಯವರೆಗೆ ಕಲಿಸಬೇಕು ಎನ್ನುವ ಕುರಿತು ಪ್ರಾದೇಶಿಕತೆ, ಆ ಭಾಷೆಗಿರುವ ಅಗತ್ಯ, ಭಾಷೆಯಾಗಿ ಚಾಚಿಕೊಳ್ಳುವ ಗುಣದ ಬಗ್ಗೆ ಪ್ರಬುದ್ಧ ತಿಳಿವಳಿಕೆ ಇಲ್ಲದಿದ್ದರೆ ಇಂಥ ಸಮಸ್ಯೆಗಳಾಗುತ್ತವೆ’ ಎಂದರು.

ಪ್ರತಿಷ್ಠಾನದ ಅಧ್ಯಕ್ಷ ಯಲ್ಲಪ್ಪ ಹಿಮ್ಮಡಿ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ವಿದ್ಯಾವತಿ ಭಜಂತ್ರಿ, ಸದಸ್ಯೆ ಮಂಜುಳಾ, ಸಾಹಿತಿ ಮಾಲತಿ ಮುದಕವಿ, ವಿಷ್ಣುಶಿಂಧೆ, ಸಂಘ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಇದ್ದರು.

ಪುಸ್ತಕವನ್ನು ಪ್ರೀತಿಸಿದರೆ ಅದೇ ನಮ್ಮನ್ನು ಕೈಹಿಡಿದು ನಡೆಸುತ್ತದೆ. ಮೊಬೈಲ್‌ ಫೋನ್‌ ಗೀಳು ಬಿಟ್ಟು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು
ಫೌಝಿಯಾ ಸಲೀಂ ಯುವ ಸಾಹಿತ್ಯ ಪ್ರಶಸ್ತಿ ಪುರಸ್ಕೃತೆ
ಆತ್ಮಕತೆಯನ್ನು ಕಾದಂಬರಿ ರೂಪದಲ್ಲಿ ಬರೆದಿದ್ದೇನೆ. ಕಾವ್ಯ ಕಥಾನಕ ಎಲ್ಲವೂ ಅದರಲ್ಲಿ ಇವೆ. ಅನುಭವಗಳನ್ನು ದಾಖಲಿಸಿದ್ದೇನೆ
ಅರುಣಕುಮಾರ ಹಬ್ಬ ಆತ್ಮಕಥಾ ಪುಸ್ತಕ ಪ್ರಶಸ್ತಿ ಪುರಸ್ಕೃತ