ADVERTISEMENT

ಬಿಯರ್‌ ಮಾರಾಟ ಶೇ 60ರಷ್ಟು ಕುಸಿತ, ಖರೀದಿಯತ್ತ ಒಲವು ತೋರಿಸದ ಮದ್ಯಪ್ರಿಯರು

ಕಲಾವತಿ ಬೈಚಬಾಳ
Published 11 ಜೂನ್ 2021, 3:29 IST
Last Updated 11 ಜೂನ್ 2021, 3:29 IST
ಗ್ರಾಹಕರು ಇಲ್ಲದಿದ್ದರಿಂದಾಗಿ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ಮದ್ಯ ಮಾರಾಟದ ಅಂಗಡಿಯಲ್ಲಿ, ಮದ್ಯದ ಬಾಟಲಿಗಳನ್ನು ಜೋಡಿಸುವುದರಲ್ಲಿ ತೊಡಗಿದ್ದ ಸಿಬ್ಬಂದಿ ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಗ್ರಾಹಕರು ಇಲ್ಲದಿದ್ದರಿಂದಾಗಿ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ಮದ್ಯ ಮಾರಾಟದ ಅಂಗಡಿಯಲ್ಲಿ, ಮದ್ಯದ ಬಾಟಲಿಗಳನ್ನು ಜೋಡಿಸುವುದರಲ್ಲಿ ತೊಡಗಿದ್ದ ಸಿಬ್ಬಂದಿ ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್   

ಹುಬ್ಬಳ್ಳಿ: ಲಾಕ್‌ಡೌನ್‌ ಕಾರಣದಿಂದ ಸದ್ಯ ಮದ್ಯದ ಅಂಗಡಿಗಳನ್ನು ತೆರೆಯಲು ದಿನದ 4 ಗಂಟೆ ಮಾತ್ರ ಅವಕಾಶ ಇದ್ದರೂ ಮದ್ಯ, ಬಿಯರ್‌ ಮಾರಾಟ ಕುಸಿದಿದೆ.

ಕಳೆದ ಬಾರಿಯ ಲಾಕ್‌ಡೌನ್‌ನಲ್ಲಿ ಮದ್ಯದ ಪಾರ್ಸಲ್ ಸೇವೆಗೆ ಅವಕಾಶ ಇರಲಿಲ್ಲ. ಈ ಬಾರಿ ಅಗತ್ಯ ವಸ್ತುಗಳಿಗೆ ನೀಡಿದ ವಿನಾಯಿತಿ ಪಟ್ಟಿಯಲ್ಲಿ ಮದ್ಯ ಸ್ಥಾನ ಪಡೆದಿದೆ. ಬೆಳಿಗ್ಗೆ 6 ರಿಂದ 10 ಗಂಟೆ ತನಕ ಪಾರ್ಸಲ್‌ ಒಯ್ಯಲು ಅವಕಾಶವಿದೆ.

ಲಾಕ್‌ಡೌನ್‌ ಅವಧಿಯಲ್ಲಿ ವಿಸ್ಕಿ, ಬ್ರಾಂಡಿ, ರಮ್ ಸೇರಿದಂತೆ ಐಎಂಎಲ್‌ (ಮದ್ಯ) ಮಾರಾಟದಲ್ಲಿ ಶೇ 50ರಷ್ಟು ಕುಸಿದಿದೆ. ಆದರೆ, ಬಿಯರ್‌ ಮಾರಾಟದಲ್ಲಿ ಶೇ 60ರಷ್ಟು ಕಡಿಮೆಯಾಗಿದೆ ಎಂದು ಅಬಕಾರಿ ಇಲಾಖೆ ಆಯುಕ್ತ ಕೆ. ಪ್ರಶಾಂತಕುಮಾರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

2021ರ ಮೇ ತಿಂಗಳಿನಲ್ಲಿ 73,971 ಪೆಟ್ಟಿಗೆಗಳಷ್ಟು ಮದ್ಯ ಮಾರಾಟವಾಗಿದ್ದು, 8,357 ಪೆಟ್ಟಿಗೆಗಳಷ್ಟು ಬಿಯರ್ ಮಾರಾಟವಾಗಿದೆ. 2020ರ ಮೇ ತಿಂಗಳಿನಲ್ಲಿ 1,00897 ಪೆಟ್ಟಿಗೆ ಮದ್ಯ, 26,085 ಪೆಟ್ಟಿಗೆ ಬಿಯರ್‌ ಮಾರಾಟವಾಗಿತ್ತು.

‘ಪಬ್, ಬಾರ್ ಆ್ಯಂಡ್ ರೆಸ್ಟೋರಂಟ್‌ಗಳಲ್ಲಿ ಬಿಯರ್ ಹೆಚ್ಚು ಮಾರಾಟವಾಗುತ್ತಿತ್ತು. ಅವುಗಳನ್ನು ತೆರೆಯಲು ಅವಕಾಶವಿಲ್ಲದ ಕಾರಣ ಬಿಯರ್ ಮಾರಾಟ ಕುಸಿದಿರಬಹುದು’ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಸಾಮಾನ್ಯ ದಿನಗಳಲ್ಲಿ ದಿನಕ್ಕೆ ₹1.5 ಲಕ್ಷದಷ್ಟು ಮದ್ಯ ವ್ಯಾಪಾರವಾಗುತ್ತಿತ್ತು. ಈಗ ₹30ರಿಂದ ₹40 ಸಾವಿರದಷ್ಟು ಮಾರಾಟವಾಗುತ್ತಿದೆ. ಮದ್ಯ ಖರೀದಿಗಿರುವ ಸಮಯವನ್ನು ಇನ್ನಷ್ಟು ವಿಸ್ತರಿಸಿದರೆ ಅನುಕೂಲ
ಪ್ರದೀಪ್‌ ಶೆಟ್ಟಿ, ಪಿಕೊಲೊ ಬಾರ್‌ ಮತ್ತು ರೆಸ್ಟೋರೆಂಟ್‌

ಅಕ್ರಮ ಮದ್ಯ ಮಾರಾಟ ಪ್ರಕರಣ ಇಳಿಕೆ

‘ಕಳೆದ ವರ್ಷದ ಲಾಕ್‌ಡೌನ್‌ ಅವಧಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕಳ್ಳಬಟ್ಟಿ, ಅಕ್ರಮ ಮದ್ಯ ಮಾರಾಟ ಪ್ರಕರಣಗಳು ಕಂಡು ಬಂದಿದ್ದವು. ಆದರೆ, ಈ ವರ್ಷ ಬೆರೆಳೆಣಿಕೆಯಷ್ಟು ಪ್ರಕರಣಗಳು ಮಾತ್ರ ಕಂಡು ಬಂದಿವೆ’ ಎಂದು ಅಬಕಾರಿ ಇಲಾಖೆ ಆಯುಕ್ತ ಕೆ. ಪ್ರಶಾಂತಕುಮಾರ ತಿಳಿಸಿದರು.

‘2021ರ ಏಪ್ರಿಲ್‌ 23ರಿಂದ ಮೇ 31ರ ಅವಧಿಯಲ್ಲಿ 18 ಅಕ್ರಮ ಮದ್ಯ ಸಾಗಾಟ, 2 ಕಳ್ಳಬಟ್ಟಿ ಪ್ರಕರಣಗಳು ಕಂಡು ಬಂದಿವೆ. ಅಂದಾಜು ₹7 ಲಕ್ಷ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ರಾಜಸ್ವ ಸಂಗ್ರಹಣೆ ಅಂಕಿ–ಅಂಶ

ವರ್ಷ;ಏಪ್ರಿಲ್‌; ಮೇ (ಕೋಟಿ ₹ಗಳಲ್ಲಿ)

2020;0;75.86

2021;114.60;64.76

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.