ADVERTISEMENT

ಹುಬ್ಬಳ್ಳಿ: ಭಿಕ್ಷುಕಿ ಸಾವು, ಮರುಗಿದ ಜನತೆ

ತಾಯಿ ಶವದ ಎದುರು ಅರಿವಿಲ್ಲದೆ ಆಟವಾಡುತ್ತಿದ್ದ ಮಕ್ಕಳು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 6:52 IST
Last Updated 8 ಅಕ್ಟೋಬರ್ 2025, 6:52 IST
   

ಹುಬ್ಬಳ್ಳಿ: ನಗರದ ಕೇಶ್ವಾಪುರ ಬಸ್‌ ನಿಲ್ದಾಣದಲ್ಲಿ ಇಬ್ಬರು ಮಕ್ಕಳೊಂದಿಗೆ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಮಹಿಳೆ, ಮಂಗಳವಾರ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಏನೂ ಅರಿವಿಲ್ಲದಂತೆ ತಾಯಿಯ ಶವದ ಬಳಿ ಆಡುತ್ತಿದ್ದ ಮಕ್ಕಳನ್ನು ಕಂಡು ಸಾರ್ವಜನಿಕರು ಮಮ್ಮಲ ಮರುಗಿದರು.

ಮೃತಪಟ್ಟ ಮಹಿಳೆ ರುಕ್ಮಿಣಿ (48) ಎಂದು ಗುರುತಿಸಲಾಗಿದೆ. ಕೇಶ್ವಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಯಿಯ ಶವದ ಎದುರು ಹತ್ತು ಮತ್ತು ಎಂಟು ವರ್ಷದ ಇಬ್ಬರು ಗಂಡು ಮಕ್ಕಳು ಓಡಾಡುತ್ತಿದ್ದರು. ಚಿಕ್ಕ ಮಗ ಬಟ್ಟೆಯಿಲ್ಲದೆ ಆಟವಾಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು, ಬಟ್ಟೆ ತಂದು ತೊಡಿಸಿ, ತಿಂಡಿ ತಂದು ಕೊಟ್ಟರು. ಮಕ್ಕಳ ಅನಾಥ ಸ್ಥಿತಿ ಕಂಡು ಕೆಲವರು ಕಣ್ಣೀರು ಸುರಿಸಿದರು.

ADVERTISEMENT

ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಮಾಹಿತಿ ಸಂಗ್ರಹಿಸಿ ಶವವನ್ನು ಕೆಎಂಸಿ–ಆರ್‌ಐ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು.  

‘ಕೆಲವು ವರ್ಷಗಳಿಂದ ಇಬ್ಬರು ಗಂಡು ಮಕ್ಕಳೊಂದಿಗೆ ಮಹಿಳೆ, ಭಿಕ್ಷೆ ಬೇಡುತ್ತ ಬಸ್‌ ತಂಗುದಾಣದಲ್ಲಿ ವಾಸುತ್ತಿದ್ದಳು. ಪ್ರತಿದಿನ ಸಾರ್ವಜನಿಕರು ಊಟ, ತಿಂಡಿ ನೀಡುತ್ತಿದ್ದರು. ಇತ್ತೀಚಿಗೆ ಮಹಿಳೆ ಅನಾರೋಗ್ಯದಿಂದ ಬಳಲುತ್ತಿದ್ದರಿಂದ, ದೊಡ್ಡ ಮಗನೇ ಭಿಕ್ಷೆ ಬೇಡಿ ಸಲುಹುತ್ತಿದ್ದ’ ಎಂದು ಸ್ಥಳೀಯ ನಿವಾಸಿಗಳು ಹೇಳಿದರು.

‘ಮಹಿಳೆಯ ಸಂಬಂಧಿಕರು ಶಬರಿನಗರದಲ್ಲಿರುವ ಮಾಹಿತಿ ತಿಳಿದು, ಮಕ್ಕಳನ್ನು ಅವರಿಗೆ ಒಪ್ಪಿಸಿದ್ದೇವೆ’ ಎಂದು ಇನ್‌ಸ್ಪೆಕ್ಟರ್‌ ಕೆ.ಎಸ್‌. ಹಟ್ಟಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.