ADVERTISEMENT

ಬೆಣ್ಣೆಹಳ್ಳ: ಕಾಮಗಾರಿಗಳಿಗೆ ಚಾಲನೆ ಇಂದು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 3:59 IST
Last Updated 8 ಫೆಬ್ರುವರಿ 2026, 3:59 IST
ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮದ ಬಳಿ ವೇದಿಕೆ ನಿರ್ಮಾಣದ ಅಂತಿಮ ಸಿದ್ಧತೆಯನ್ನು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌, ಶಾಸಕ ಎನ್‌.ಎಚ್‌.ಕೋನರಡ್ಡಿ, ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮ್ಮದ್ ವೀಕ್ಷಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು
ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮದ ಬಳಿ ವೇದಿಕೆ ನಿರ್ಮಾಣದ ಅಂತಿಮ ಸಿದ್ಧತೆಯನ್ನು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌, ಶಾಸಕ ಎನ್‌.ಎಚ್‌.ಕೋನರಡ್ಡಿ, ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮ್ಮದ್ ವೀಕ್ಷಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು   

ಹುಬ್ಬಳ್ಳಿ: ತಾಲ್ಲೂಕಿನ ಶಿರಗುಪ್ಪಿ ಗ್ರಾಮದ ಬಳಿ ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿ ಹಾಗೂ ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ ಮಧ್ಯಾಹ್ನ 3ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ಕಾರ್ಯ ನೆರವೇರಿಸಲಿದ್ದಾರೆ. 

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶಿರಗುಪ್ಪಿ ಗ್ರಾಮದ ಬಳಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹಾಗೂ ನವಲಗುಂದ ಶಾಸಕ ಎನ್‌.ಎಚ್‌.ಕೋನರಡ್ಡಿ ಅವರು ವೇದಿಕೆ ನಿರ್ಮಾಣದ ಅಂತಿಮ ಸಿದ್ಧತೆ ಪರಿಶೀಲಿಸಿದರು. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸಂತೋಷ ಲಾಡ್‌, ‘ಉತ್ತರ ಕರ್ನಾಟಕದ ರೈತರ ಪ್ರಮುಖ ಬೇಡಿಕೆಯಾದ ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ, ತಡೆಗೋಡೆ ನಿರ್ಮಾಣ ಹಾಗೂ ಶಾಶ್ವತ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ’ ಎಂದರು. 

ADVERTISEMENT

‘ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ವರದಿ ಅನ್ವಯ ಬೆಣ್ಣೆಹಳ್ಳ ಯೋಜನೆಯ ವಿವಿಧ ಕಾಮಗಾರಿಗಳಿಗಾಗಿ ಒಟ್ಟು ₹1,610 ಕೋಟಿ ಯೋಜನಾ ವರದಿ ತಯಾರಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹200 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. 2–3 ಹಂತಗಳಲ್ಲಿ ಯೋಜನೆಯ ಕಾಮಗಾರಿ ಮುಗಿಸಲಾಗುವುದು’ ಎಂದು ಹೇಳಿದರು.

ವಿದೇಶಿ ತಂತ್ರಜ್ಞಾನ ಬಳಕೆ: ‘ವಿದೇಶಿ ತಂತ್ರಜ್ಞಾನ ಬಳಸಿಕೊಂಡು ವೈಜ್ಞಾನಿಕವಾಗಿ ಬೆಣ್ಣೆಹಳ್ಳ ಯೋಜನೆಯ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಏಕಕಾಲದಲ್ಲಿಯೇ 50 ರಿಂದ 60 ಹಿಟಾಚಿ ಯಂತ್ರಗಳ ಮೂಲಕ ಹೂಳೆತ್ತುವ ಕಾರ್ಯ ಮಾಡಲಾಗುತ್ತಿದೆ. ಜೊತೆಗೆ ನಾಲೆ, ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಸಲಾಗುತ್ತದೆ’ ಎಂದು ಶಾಸಕ ಎನ್‌.ಎಚ್‌.ಕೋನರಡ್ಡಿ ತಿಳಿಸಿದರು. 

‘ಕಾಮಗಾರಿ ಮುಕ್ತಾಯಕ್ಕೆ 18 ತಿಂಗಳ ಕಾಲಾವಕಾಶ ನೀಡಲಾಗಿದೆ. ಹಳ್ಳ ಪಾತ್ರದ ಗ್ರಾಮಸ್ಥರು ಹಾಗೂ ರೈತರನ್ನು ಗಮನದಲ್ಲಿಟ್ಟುಕೊಂಡು 6–7 ತಿಂಗಳೊಳಗೆ ಎಲ್ಲಾ ಕಾಮಗಾರಿಗಳನ್ನು ಮುಗಿಸುವ ಚಿಂತನೆಯಿದೆ. ನಂತರ ಗುತ್ತಿಗೆದಾರರಿಗೆ 2 ವರ್ಷ ನಿರ್ವಹಣೆ ಹೊಣೆಗಾರಿಕೆ ಸಹ ವಹಿಸಲಾಗಿದೆ’ ಎಂದರು. 

‘ಕಾಮಗಾರಿಗಾಗಿ ರೈತರ ಜಮೀನುಗಳನ್ನು ಒತ್ತುವರಿ ಮಾಡಿಕೊಳ್ಳುವುದಿಲ್ಲ. ಸ್ವತಃ ರೈತರೇ ಕಾಮಗಾರಿಗೆ ಸಹಕಾರ ನೀಡುತ್ತಿದ್ದಾರೆ‘ ಎಂದರು.

‘ಪ್ರವಾಹ ನಿರ್ವಹಣೆ ಮತ್ತು ಗಡಿ ಪ್ರದೇಶಗಳ ಕಾರ್ಯಕ್ರಮ‘ (ಎಫ್‌ಎಂಬಿಎಬಿ) ಯೋಜನೆಯಡಿ ಯೋಜನೆಯ ಉಳಿದ ಹಣ ಬಿಡುಗಡೆಗಾಗಿ ಕೇಂದ್ರ ಜಲಶಕ್ತಿ ಮಂತ್ರಾಲಯ ಹಾಗೂ ಕೇಂದ್ರ ಜಲ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ತಿಳಿಸಿದರು. 

ಇದೇ ವೇಳೆ ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಅವರು, ‘ಕಾರ್ಯಕ್ರಮದ ವ್ಯವಸ್ಥಿತ ನಿರ್ವಹಣೆಗಾಗಿ ರಚಿಸಿರುವ ಅಧಿಕಾರಿಗಳ ತಂಡದ ಸಮಿತಿಯ ಹೊಣೆಗಾರಿಕೆಯನ್ನು ಸಚಿವ ಸಂತೋಷ ಲಾಡ್‌ ಅವರಿಗೆ ಮಾಹಿತಿ ನೀಡಿದರು.

ರಾಜ್ಯ ಸಚಿವ ಸಂಪುಟದ ಸಚಿವರು ಉತ್ತರ ಕರ್ನಾಟಕ ಭಾಗದ ಶಾಸಕರು ಭಾಗವಹಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಂಸದ ಜಗದೀಶ ಶೆಟ್ಟರ್‌ ಅವರನ್ನೂ ಆಹ್ವಾನಿಸಲಾಗಿದೆ
ಸಂತೋಷ ಲಾಡ್‌ ಜಿಲ್ಲಾ ಉಸ್ತುವಾರಿ ಸಚಿವ 
ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖೆಗಳ ಅಂದಾಜು ₹150 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಚಾಲನೆ ನೀಡಲಾಗುತ್ತದೆ
ಎನ್‌.ಎಚ್‌.ಕೋನರಡ್ಡಿ ಶಾಸಕ

20 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ

‘ಧಾರವಾಡ ಗದಗ ಹಾವೇರಿ ಜಿಲ್ಲೆಗಳಿಂದ 20 ಸಾವಿರಕ್ಕೂ ಅಧಿಕ ಜನರು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ‌. ಕಾರ್ಯಕ್ರಮಕ್ಕೆ ಬರುವವರಿಗಾಗಿ 200ಕ್ಕೂ ಹೆಚ್ಚು ಸಾರಿಗೆ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ವಾಹನಗಳ ಮೂಲಕವೂ ರೈತರು ರೈತ ಮುಖಂಡರು ಭಾಗವಹಿಸಲಿದ್ದಾರೆ‘  ಎಂದು ಶಾಸಕ ಎನ್‌.ಎಚ್‌.ಕೋನರೆಡ್ಡಿ ಹೇಳಿದರು. 

ಪುಲಾವ್‌ ಗೋದಿ ಹುಗ್ಗಿ ಊಟ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ‍ಪುಲಾವ್‌ ಗೋಧಿ ಹುಗ್ಗಿ ಊಟದ ವ್ಯವಸ್ಥೆ ಮಾಡಲಾಗಿದೆ. 30 ಸಾವಿರ ಲೀಟರ್‌ ಕುಡಿಯುವ ನೀರು ಹಾಗೂ ಹೆಚ್ಚುವರಿಯಾಗಿ ನೀರಿನ ಟ್ಯಾಂಕ್‌ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.  ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ವೇದಿಕೆಯ ಬಳಿ ಆಂಬುಲೆನ್ಸ್‌ ತುರ್ತು ಚಿಕಿತ್ಸಾ ಕೇಂದ್ರ ಅಗ್ನಿಶಾಮಕ ದಳ ಅಗತ್ಯ ಪೊಲೀಸ್‌ ಬಂದೋ ಬಸ್ತ್‌ ವ್ಯವಸ್ಥೆಯನ್ನೂ ಮಾಡಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.