ADVERTISEMENT

ಹುಬ್ಬಳ್ಳಿ | ಸೌಕರ್ಯವಿಲ್ಲದ ಭೀಮಾಶ್ರಯ: ಸೌಲಭ್ಯ ವಂಚಿತ ಪೌರಕಾರ್ಮಿಕರು

ಇದ್ದೂ ಇಲ್ಲದಂತಾದ ವಿಶ್ರಾಂತಿ ಕೊಠಡಿ

ಗಣೇಶ ವೈದ್ಯ
Published 26 ಜನವರಿ 2025, 4:38 IST
Last Updated 26 ಜನವರಿ 2025, 4:38 IST
ಹುಬ್ಬಳ್ಳಿಯ ಕಲ್ಲೂರ್ ಲೇಔಟ್‌ನಲ್ಲಿ ಇರುವ ಭೀಮಾಶ್ರಯ ವಿಶ್ರಾಂತಿ ಕೊಠಡಿ ಸುತ್ತ ಬಳ್ಳಿ ಹಬ್ಬಿದೆ
ಹುಬ್ಬಳ್ಳಿಯ ಕಲ್ಲೂರ್ ಲೇಔಟ್‌ನಲ್ಲಿ ಇರುವ ಭೀಮಾಶ್ರಯ ವಿಶ್ರಾಂತಿ ಕೊಠಡಿ ಸುತ್ತ ಬಳ್ಳಿ ಹಬ್ಬಿದೆ   

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಅವಳಿ ನಗರವನ್ನು ಸ್ವಚ್ಛವಾಗಿಡುವ ಪೌರಕಾರ್ಮಿಕರ ವಿಶ್ರಾಂತಿಗಾಗಿ ನಿರ್ಮಿಸಲಾಗಿರುವ ಕೊಠಡಿಗಳು ನಿಷ್ಪ್ರಯೋಜಕವಾಗಿವೆ. ಪೌರಕಾರ್ಮಿಕರೆಡೆಗಿನ ಮಹಾನಗರ ಪಾಲಿಕೆಯ ನಿರ್ಲಕ್ಷ್ಯ ಧೋರಣೆಗೆ ಇವು ಸಾಕ್ಷಿಯಾಗಿ ನಿಂತಿವೆ.

ಕೆಲಸದ ನಡುವೆ ಪೌರಕಾರ್ಮಿಕರು ವಿಶ್ರಾಂತಿ ಪಡೆಯಲು ಅನುಕೂಲವಾಗಲೆಂದು ಅವಳಿ ನಗರದ 12 ವಲಯಗಳಲ್ಲಿ ಒಟ್ಟು 24 ‘ಭೀಮಾಶ್ರಯ’ ಕೊಠಡಿಗಳನ್ನು ನಿರ್ಮಿಸಲಾಗಿದೆ. ಮೂಲ ಸೌಕರ್ಯಗಳ ಕೊರತೆ ಕಾರಣಕ್ಕೆ ಇವು ಪೌರಕಾರ್ಮಿಕರ ಸಮರ್ಪಕ ಬಳಕೆಗೆ ದೊರಕುತ್ತಿಲ್ಲ.

‘2023ರಲ್ಲಿ ಪೌರಕಾರ್ಮಿಕರ ದಿನಾಚರಣೆಯಂದು (ಸೆ.23) ‘ಭೀಮಾಶ್ರಯ’ ಉದ್ಘಾಟಿಸಲಾಗಿದೆ. ಹುಬ್ಬಳ್ಳಿ ಭಾಗದಲ್ಲಿ 16, ಧಾರವಾಡ ಭಾಗದಲ್ಲಿ ಎಂಟು ವಿಶ್ರಾಂತಿ ಕೊಠಡಿಗಳಿವೆ. ಆದರೆ ಉದ್ಘಾಟನೆಯಾದ ದಿನದಿಂದಲೂ ಇವುಗಳಲ್ಲಿ ಸರಿಯಾದ ಮೂಲಸೌಕರ್ಯ ಇಲ್ಲ’ ಎಂದು ಧಾರವಾಡ ಜಿಲ್ಲಾ ಎಸ್ಸಿ, ಎಸ್ಟಿ ಪೌರಕಾರ್ಮಿಕರ ಹಾಗೂ ನೌಕರರ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ಆರೋಪಿಸಿದರು.

ADVERTISEMENT

ಪೌರಕಾರ್ಮಿಕರು ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರ ಗಂಟೆಯ ವರೆಗೆ ಕೆಲಸ ಮಾಡುತ್ತಾರೆ. ಈ ನಡುವೆ ಅವರು ಸಮುದಾಯ ಭವನ, ಉದ್ಯಾನಗಳಲ್ಲಿ ಉಪಾಹಾರ, ಊಟ ಸೇವಿಸುತ್ತಾರೆ. ಅಲ್ಲೇ ವಿಶ್ರಾಂತಿ ಪಡೆಯುತ್ತಾರೆ. ಶೌಚಕ್ಕೆ ಹೋಗಲು ಜಾಗವಿಲ್ಲದೇ ಪರದಾಡುತ್ತಾರೆ. ಈ ಎಲ್ಲ ಸಮಸ್ಯೆಗೆ ಪರಿಹಾರವಾಗಿ ಭೀಮಾಶ್ರಯ ಕೊಠಡಿ ನಿರ್ಮಿಸಲಾಗಿದೆ.

‘ಭೀಮಾಶ್ರಯದ ಚಾವಿಯನ್ನು ನಮ್ಮ ಕೈಗೆ ಕೊಟ್ಟಿಲ್ಲ. ಎಸ್.ಎಂ. ಕೃಷ್ಣ ನಗರದಲ್ಲಿ ಇರುವ ಕೊಠಡಿಯಲ್ಲಿ ಮಾತ್ರ ಸೌಕರ್ಯಗಳಿದ್ದು, ಬಳಕೆಯಲ್ಲಿದೆ. ಉಳಿದ ಕಡೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲಾಗಿಲ್ಲ’ ಎಂದು ವಾರ್ಡ್ 77ರಲ್ಲಿ ಪೌರಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರು ಗಾಳೆಪ್ಪ ಅವರು ಹೇಳಿದರು.

‘ನಮ್ಮ ಭೀಮಾಶ್ರಯ ನಿರ್ಮಿಸಲಾಗಿದೆ. ಅಲ್ಲಿ ವಿಶ್ರಾಂತಿ ಪಡೆಯುತ್ತೇವೆ. ಆದರೆ ಅದಕ್ಕೆ ನೀರಿನ ವ್ಯವಸ್ಥೆ ಇಲ್ಲ. ಇದರಿಂದಾಗಿ ಶೌಚಾಲಯ ಬಳಕೆಗೆ ಸಾಧ್ಯವಾಗುತ್ತಿಲ್ಲ’ ಎಂದು ಮಧುರಾ ಕಾಲೊನಿ ಪ್ರದೇಶದಲ್ಲಿ ಪೌರಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಗಂಗಮ್ಮ ಅವರು ತಿಳಿಸಿದರು.

10 ಅಡಿ ಉದ್ದ, 8 ಅಡಿ ಅಗಲ ಮತ್ತು 8 ಅಡಿ ಎತ್ತರದ ವಿಶ್ರಾಂತಿಗೃಹದಲ್ಲಿ ಪೌರಕಾರ್ಮಿಕರು ತಮ್ಮ ವಸ್ತುಗಳನ್ನು ಇಟ್ಟುಕೊಳ್ಳಲು ಲಾಕರ್‌ ವ್ಯವಸ್ಥೆ ಇದೆ. ಕೂರಲು ಆಸನ, ಫ್ಯಾನ್‌, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಸ್ನಾನಗೃಹ ಸೌಲಭ್ಯಗಳಿವೆ. ಒಂದು ಸಾವಿರ ಲೀಟರ್ ಸಾಮರ್ಥ್ಯದ ನೀರಿನ‌ ಟ್ಯಾಂಕ್ ಕೂಡ ಅಳವಡಿಸಲಾಗಿದೆ. ಆದರೆ ಇವು ಕೆಲಸಕ್ಕೆ ಬಾರದೆ ಸರ್ಕಾರದ ಹಣ ವ್ಯರ್ಥವಾದಂತಾಗಿದೆ.

‘ಎಲ್ಲವೂ ಬಳಕೆಯಲ್ಲಿವೆ’

ಯಾವ ಭೀಮಾಶ್ರಯ ಕೊಠಡಿಯನ್ನೂ ಮುಚ್ಚಿಲ್ಲ ಎಲ್ಲವೂ ಬಳಕೆಯಲ್ಲಿವೆ. ಕೆಲವು ಸೌಲಭ್ಯಗಳನ್ನು ಒದಗಿಸುವಂತೆ ಕೇಳಿದ್ದರು ಅದನ್ನೂ ಮಾಡಿಕೊಟ್ಟಿದ್ದೇವೆ. ಇನ್ನೂ ಹೆಚ್ಚಿನ ಸೌಕರ್ಯಗಳು ಬೇಕಿದ್ದರೆ ಮಾಡಿಕೊಡುವುದಾಗಿ ತಿಳಿಸಿದ್ದೇವೆ. ಅದನ್ನು ಬಿಟ್ಟು ಸುಳ್ಳು ಆರೋಪ ಮಾಡಬಾರದು ವಿಜಯಕುಮಾರ್ ಕಾರ್ಯನಿರ್ವಾಹಕ ಅಧಿಕಾರಿ ಹು–ಧಾ ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.