ADVERTISEMENT

ಜ್ಯೋತಿ ಪಾತ್ರ ದೊಡ್ಡದು; ಪ್ರಹ್ಲಾದ ಜೋಶಿ ಶ್ಲಾಘನೆ

ಲೋಕಸಭಾ ಚುನಾವಣೆಯಲ್ಲಿ ಪತಿ ಪರ ಅವಿರತ ಪ್ರಚಾರ ನಡೆಸಿದ್ದ ಪತ್ನಿ

​ಪ್ರಜಾವಾಣಿ ವಾರ್ತೆ
Published 24 ಮೇ 2019, 20:10 IST
Last Updated 24 ಮೇ 2019, 20:10 IST
ನಾಲ್ಕನೇ ಬಾರಿ ಸಂಸದರಾಗಿ ಆಯ್ಕೆಯಾದ ಪ್ರಹ್ಲಾದ ಜೋಶಿ ಅವರನ್ನು ಪತ್ನಿ ಜ್ಯೋತಿ ಶುಕ್ರವಾರ ಅಭಿನಂದಿಸಿದರು. ಪಕ್ಷದ ಮಹಿಳಾ ಕಾರ್ಯಕರ್ತೆಯರು ಇದ್ದಾರೆ –ಪ್ರಜಾವಾಣಿ ಚಿತ್ರ
ನಾಲ್ಕನೇ ಬಾರಿ ಸಂಸದರಾಗಿ ಆಯ್ಕೆಯಾದ ಪ್ರಹ್ಲಾದ ಜೋಶಿ ಅವರನ್ನು ಪತ್ನಿ ಜ್ಯೋತಿ ಶುಕ್ರವಾರ ಅಭಿನಂದಿಸಿದರು. ಪಕ್ಷದ ಮಹಿಳಾ ಕಾರ್ಯಕರ್ತೆಯರು ಇದ್ದಾರೆ –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಚುನಾವಣೆ ಪ್ರಚಾರದ ವೇಳೆ ನಾನು ಮನೆ, ಮನೆಗಳಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಆದರೆ, ನನ್ನ ಪತ್ನಿ ಪಕ್ಷದ ಕಾರ್ಯಕರ್ತೆಯರೊಂದಿಗೆ ಕ್ಷೇತ್ರದ ಹಲವೆಡೆ ಮನೆ, ಮನೆಗಳಿಗೆ ಭೇಟಿ ನೀಡಿ ನನ್ನ ಪರವಾಗಿ ಮತಯಾಚಿಸಿದರು. ಅಲ್ಲದೇ, ಮನೆಗೆ ಬರುವ ಮುಖಂಡರು, ಕಾರ್ಯಕರ್ತರು, ಹಿತೈಷಿಗಳನ್ನು ಹಾಗೂ ಕುಟುಂಬವನ್ನು ಸಂಬಾಳಿಸಿಕೊಂಡು ಹೋಗುವಲ್ಲಿ ಆಕೆಯ ಪಾತ್ರ ದೊಡ್ಡದು’

ಧಾರವಾರ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆ ಸಂದರ್ಭದಲ್ಲಿ ಸತತ ಎರಡು ತಿಂಗಳು ವಿರಮಿಸದೆ ತಮ್ಮ ಪರ ಪ್ರಚಾರ ನಡೆಸಿದ ಪತ್ನಿ ಜ್ಯೋತಿ ಅವರನ್ನು ಸಂಸದ ಪ್ರಹ್ಲಾದ ಜೋಶಿ ಶ್ಲಾಘಿಸಿದ್ದು ಹೀಗೆ.

‘ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಮಗಳು ಅರ್ಪಿತಾ ಕೂಡ ಒಂದು ವಾರ ರಜೆ ಹಾಕಿ ಬಂದು ನನ್ನ ಪರ ಪ್ರಚಾರ ನಡೆಸಿದ್ದಾಳೆ. ಅವಳ ಕಾರ್ಯವೂ ಮೆಚ್ಚುವಂತಹದು’ ಎಂದರು ಜೋಶಿ.

ADVERTISEMENT

ಅನುಭವ ಹಂಚಿಕೊಂಡ ಜ್ಯೋತಿ:

ಪತಿ ಪರ ಮತಯಾಚನೆಗಾಗಿ ಕ್ಷೇತ್ರವನ್ನು ಬಿಡುವಿಲ್ಲದೇ ಸುತ್ತಾಡಿದ ತಮ್ಮ ಅನುಭವವನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ಜ್ಯೋತಿ ಜೋಶಿ, ‘ನೀವು ಏಕೆ ಬರಲು ಹೋದಿರಿ, ನೀವು ಮನೆಯಲ್ಲೇ ಇದ್ದರೂ ಸಾಕು ಜೋಶಿ ಅವರನ್ನು ನಾವೇ ಗೆಲ್ಲಿಸಿಕೊಡುತ್ತೇವೆ ಎಂದು ಪಕ್ಷದ ಕಾರ್ಯಕರ್ತರು, ಮತದಾರರು ಹೇಳುತ್ತಿದ್ದರು’ ಎಂದರು.

ವೇದಿಕೆಯಾದ ಮಹಿಳಾ ದಿನಾಚರಣೆ:

‘ವಿಶ್ವ ಮಹಿಳಾ ದಿನಾಚರಣೆ ಚುನಾವಣಾ ಪ್ರಚಾರಕ್ಕೆ ಪ್ರಮುಖ ವೇದಿಕೆಯಾಗಿತ್ತು. ಕ್ಷೇತ್ರದಲ್ಲಿ ವಿವಿಧ ಮಹಿಳಾ ಸಂಘಟನೆಗಳು ಮಾರ್ಚ್‌ ತಿಂಗಳ ಪೂರ್ತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮತಯಾಚನೆ ಮಾಡಿದೆ. ಸ್ಪಂದನೆಯೂ ಚೆನ್ನಾಗಿತ್ತು. ಇದರಿಂದ ಪ್ರೇರಣೆಗೊಂಡಿರುವ ನಾನು ಭವಿಷ್ಯದಲ್ಲಿ ಮಹಿಳೆಯರಿಗಾಗಿ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಬೇಕೆಂಬ ಯೋಜನೆ ಹೊಂದಿದ್ದೇನೆ’ ಎಂದರು.

ಮನೆಗಳ ನಿರ್ಮಾಣಕ್ಕೆ ಸಲಹೆ:

ಕ್ಷೇತ್ರದಲ್ಲಿ ಬಡವರಿಗೆ ಮನೆಗಳ ಅವಶ್ಯಕತೆ ಹೆಚ್ಚಿದೆ ಎಂಬುದು ಪ್ರಚಾರದ ವೇಳೆ ಅರಿವಿಗೆ ಬಂದಿದೆ. ಇದನ್ನು ಜೋಶಿ ಅವರ ಗಮನಕ್ಕೆ ತರುತ್ತೇನೆ. ಬಡವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳನ್ನು ನಿರ್ಮಿಸಿಕೊಡಲು ಆದ್ಯತೆ ನೀಡುವಂತೆ ಸಲಹೆ ನೀಡುತ್ತೇನೆ’ ಎಂದು ತಿಳಿಸಿದರು.

‘ಕ್ಷೇತ್ರದಲ್ಲಿ ರಸ್ತೆ, ನೀರು, ಗಟಾರ, ಬೀದಿ ದೀಪ ಇಲ್ಲದಿರುವ ಬಗ್ಗೆಯೂ ಜನರು ಗಮನಕ್ಕೆ ತಂದಿದ್ದಾರೆ. ಇದು ರಾಜ್ಯ ಸರ್ಕಾರದ ಕೆಲಸವಾದರೂ ಸಹ ಪರಿಹಾರಕ್ಕೆ ಆದ್ಯತೆ ನೀಡುವಂತೆ ಜೋಶಿ ಅವರಿಗೆ ತಿಳಿಸುತ್ತೇನೆ’ ಎಂದರು.

ಜೋಶಿ ಏನ್‌ ಮಾಡಿದ್ದಾರೆ ಪ್ರಶ್ನೆಗೆ ಬೇಸರ:

ಹುಬ್ಬಳ್ಳಿ ವಿಮಾನ ನಿಲ್ದಾಣ ಅಭಿವೃದ್ಧಿ, ಧಾರವಾಡಕ್ಕೆ ಐಐಟಿ, ಅವಳಿ ನಗರದಲ್ಲಿ ನೂರಾರು ಕೋಟಿ ವೆಚ್ಚದಲ್ಲಿ ಸಿಆರ್‌ಎಫ್‌ ರಸ್ತೆಗಳ ನಿರ್ಮಾಣ, ಕಿಮ್ಸ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಆದರೆ, ಇದೆಲ್ಲವನ್ನು ಮರೆಮಾಚಿ ‘ಮೂರು ಬಾರಿ ಸಂಸದರಾಗಿ ಜೋಶಿ ಏನ್‌ ಕೆಲಸ ಮಾಡಿದ್ದಾರೆ’ ಎಂಬ ವಿರೋಧಿಗಳ ಟೀಕೆ ಬಹಳ ಬೇಸರ ತರಿಸಿತು ಎಂದರು.

ಜನ ಗೆಲ್ಲಿಸಿದ್ದಾರೆ:

‘ಕ್ಷೇತ್ರದಲ್ಲಿ ಜೋಶಿ ಅವರ ಜಾತಿ ಜನಸಂಖ್ಯೆ ಕಡಿಮೆ ಇದೆ. ಆದರೂ ಚುನಾವಣೆಯಲ್ಲಿ ಸತತವಾಗಿ ಗೆಲ್ಲುತ್ತಿದ್ದಾರೆ ಎಂಬ ವಿಷಯವನ್ನೇ ಮುಂದಿಟ್ಟುಕೊಂಡು ವಿರೋಧಿಗಳು ಚುನಾವಣೆಯಲ್ಲಿ ಪ್ರಚಾರ ನಡೆಸಿದರು. ಆದರೆ, ಜಾತಿ ವೋಟ್‌ ಕಡಿಮೆ ಇದ್ದರೂ ಎಲ್ಲ ಜಾತಿಯ ಜನರು ಸೇರಿಕೊಂಡು ದೊಡ್ಡಮಟ್ಟದಲ್ಲಿ ಗೆಲ್ಲಿಸಿರುವುದು ಹೆಮ್ಮೆಯ ಸಂಗತಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.