ADVERTISEMENT

ಒಳ ಜಗಳದಿಂದ ಸರ್ಕಾರ ಪತನ: ಅರವಿಂದ ಲಿಂಬಾವಳಿ

ಮೈತ್ರಿ‌ ಪಕ್ಷದ ಬಲ 104 ಕ್ಕಿಂತ ಕಡಿಮೆಯಾದರೆ ಬಿಜೆಪಿ ಸರ್ಕಾರ ರಚನೆ

​ಪ್ರಜಾವಾಣಿ ವಾರ್ತೆ
Published 14 ಮೇ 2019, 11:10 IST
Last Updated 14 ಮೇ 2019, 11:10 IST
   

ಹುಬ್ಬಳ್ಳಿ: ಪರಸ್ಪರ ಕಚ್ಚಾಟದಲ್ಲಿ‌ ತೊಡಗಿರುವ ಮೈತ್ರಿ ಪಕ್ಷದ ಶಾಸಕರು ರಾಜೀನಾಮೆ ನೀಡಿ, ಅವರ ಸಂಖ್ಯಾಬಲ 104 ಕ್ಕೆ ಕುಸಿದರೆ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದು ಶಾಸಕ ಅರವಿಂದ ಲಿಂಬಾವಳಿ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವೇಗೌಡರು ಜೆಡಿಎಸ್‌ನಿಂದ ಉಚ್ಛಾಟಿಸಿದರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ವಿಶ್ವನಾಥ್ ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡಿದ್ದಾರೆ. ಜೆಡಿಎಸ್ ರಾಷ್ಟ್ರೀಯ ‌ಪ್ರಧಾನ‌ ಕಾರ್ಯದರ್ಶಿ ಕುಪೇಂದ್ರ ರೆಡ್ಡಿ ಅವರು ಕಾಂಗ್ರೆಸ್ ಬೇಕಾದರೆ ಮೈತ್ರಿ‌ ಕಡಿದುಕೊಳ್ಳಲಿ ಎಂದು ಹೇಳಿಕೆ‌ ನೀಡಿದ್ದಾರೆ. ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಗೊತ್ತಾಗುತ್ತದೆ. ಸಮ್ಮಿಶ್ರ ಸರ್ಕಾರದ ರಚನೆ ಮಾಡುವ ಮೊದಲು ಸಿದ್ದರಾಮಯ್ಯ ಅವರನ್ನು ಕೇಳಿರಲಿಲ್ಲ. ಕೌಂಟಿಂಗ್ ಮುಗಿಯುವ ಮೊದಲೇ ಸಮ್ಮಿಶ್ರ ಸರ್ಕಾರ ರಚನೆಯ ಘೋಷಣೆ ಮಾಡಿದರು ಎಂದರು.

ಕಳಸಾ ಬಂಡೂರಿ ನ್ಯಾಯಾಧೀಕರಣದ ತೀರ್ಪು ಬಂದರೂ ಕೇಂದ್ರ ಅಧಿಸೂಚನೆ ಹೊರಡಿಸಿಲ್ಲ ಎಂದು ದೂರುವ ಸಚಿವ ಡಿ.ಕೆ. ಶಿವಕುಮಾರ್ ಉಪ ಚುನಾವಣೆಯಲ್ಲಿ ಹಣ ಹಂಚುವುದು, ಧಮ್ಕಿ ಹಾಕುವುದನ್ನು ಬಿಟ್ಟು ಕೇಂದ್ರದ ಅಧಿಕಾರಿಗಳನ್ನು ಭೇಟಿಯಾಗಲಿ. ಗೋವಾ ಹಾಗೂ ಕರ್ನಾಟಕದ ಮೇಲ್ಮನವಿ ವಿಚಾರಣೆ ಬಾಕಿ ಇದ್ದರೂ ಅಧಿಸೂಚನೆ ಹೊರಡಿಸಬೇಕು ಎಂದು ಕೇಂದ್ರವನ್ನು ಒತ್ತಾಯಿಸಲಿ ನೋಡೋಣ ಎಂದು ತಿರುಗೇಟು ನೀಡಿದರು.

ADVERTISEMENT

ಬೇನಾಮಿ ಆಸ್ತಿ ಪ್ರಕರಣ ಎದುರಿಸುತ್ತಿರುವ ಶಿವಕುಮಾರ್ ಗುತ್ತಿಗೆದಾರರಿಂದ ಹಣ ಪಡೆದುಕೊಂಡು ಬಂದು ಕ್ಷೇತ್ರದಲ್ಲಿ ಹಂಚುತ್ತಿದ್ದಾರೆ. ಬಿಜೆಪಿ ಅಕೌಂಟ್ ಸರಿಯಾಗಿದೆ. ಅವರ ಅಕೌಂಟ್ ಸರಿ ಇಲ್ಲ ಎಂಬ ಕಾರಣಕ್ಕಾಗಿಯೇ ಐಟಿ ದಾಳಿಯಾಗಿದೆ. ನೋಟಿಸ್ ಸಹ ಬಂದಿದೆ. ಆದರೂ ಚಾಳಿ ಬಿಟ್ಟಿಲ್ಲ ಎಂದರು.

ಕೇಂದ್ರ ಸರ್ಕಾರ ಬರ ಪರಿಹಾರ ಕಾಮಗಾರಿಗೆ ಈಗಾಗಲೇ ಬಿಡುಗಡೆ ಮಾಡಿರುವ ಹಣವನ್ನು ಮೊದಲು ಖರ್ಚು ಮಾಡಿ ಆ‌ನಂತರ ಹೆಚ್ಷಿನ‌ಹಣ ಕೇಳಲಿ ಎಂದರು.

ಸರ್ಕಾರದ ಕಚ್ಚಾಟ ಹಾಗೂ ರೆಸಾರ್ಟ್ ವಾಸವನ್ನು ತೋರಿಸುತ್ತಿರುವುದರಿಂದ ಮಾಧ್ಯಮಗಳ ಮೇಲೆ ಕುಮಾರಸ್ವಾಮಿ ಅವರಿಗೆ ಸಿಟ್ಟು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇದ್ದರೂ ಕಂದಾಯ ಸಚಿವರು ರಾಜ್ಯ ಪ್ರವಾಸ ಮಾಡುತ್ತಿಲ್ಲ. ಚುನಾವಣಾ ಆಯೋಗ ನೀತಿ ಸಂಹಿತೆ ಸಡಿಲಿಸಿ ವಿನಾಯಿತಿ ನೀಡಿದರೂ ಕುಡಿಯುವ ನೀರಿನ ಪೂರೈಕೆಗೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.