ಹುಬ್ಬಳ್ಳಿ: ತುರ್ತು ಪರಿಸ್ಥಿತಿಯ ಬಗ್ಗೆ ಬಿಜೆಪಿಯವರು ಹೇಳುತ್ತಾರೆ. ಆದರೆ, ಈಗ ಏನಾಗುತ್ತಿದೆ ಎಂಬ ಬಗ್ಗೆ ಅವರು ಮಾತನಾಡಬೇಕು. ಮುಡಾ ಪ್ರಕರಣದಲ್ಲಿ ಬಿಜೆಪಿಗೆ ಮುಖಭಂಗವಾಗಿದೆ. ಅಲ್ಲದೆ, ಇಡಿಯ ಕಾರ್ಯವೈಖರಿ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು ಅವರಿಗೆ ನಾಚಿಕೆಯಾಗಬೇಕು ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾರಿ ನಿರ್ದೇಶನಾಲಯ(ಇ.ಡಿ) ಯಾವ ರೀತಿ ದುರುಪಯೋಗವಾಗುತ್ತಿದೆ ಎಂಬುದು ಮುಡಾ ಪ್ರಕರಣದಲ್ಲಿ ಸ್ಪಷ್ಟವಾಗಿದೆ. ಇಡಿ, ಐಟಿ, ಸಿಬಿಐ ನಂತಹ ಸ್ವಾಯತ್ತ ಸಂಸ್ಥೆಗಳನ್ನು ಬಿಜೆಪಿ ತನ್ನ ಅಂಗಸಂಸ್ಥೆಗಳನ್ನಾಗಿ ಮಾಡಿಕೊಂಡು ಅವುಗಳನ್ನು ದುರ್ಬಲಗೊಳಿಸುತ್ತಿದೆ. ಅವರಿಗೆ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.
ಧರ್ಮಸ್ಥಳದಲ್ಲಿ ಅನೇಕ ಶವಗಳನ್ನು ಹೂತು ಹಾಕಲಾಗಿದೆ ಎಂದು ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ವಿವಿಧ ಸಂಘ ಸಂಸ್ಥೆಗಳು ಒತ್ತಾಯಿಸಿದ್ದವು. ಆ ನಿಟ್ಟಿನಲ್ಲಿ ಸರ್ಕಾರ ಎಸ್ಐಟಿ ರಚನೆ ಮಾಡಿದೆ ಎಂದು ಹೇಳಿದರು.
ಶವಗಳನ್ನು ಹೂತು ಹಾಕಿರುವುದು ಎಷ್ಟರಮಟ್ಟಿಗೆ ನಿಜವೋ ಗೊತ್ತಿಲ್ಲ. ಈ ವಿಷಯದಲ್ಲಿ ಗೊಂದಲ ಸೃಷ್ಡಿಯಾಗಿತ್ತು. ಜನರು ಗಾಬರಿಗೊಂಡಿದ್ದರು. ಅದನ್ನು ನಿವಾರಿಸುವ ದೃಷ್ಟಿಯಿಂದ ಉತ್ತಮ ಅಧಿಕಾರಿ ನೇತೃತ್ವದಲ್ಲಿ ಎಸ್ಐಟಿ ರಚಿಸಲಾಗಿದೆ. ಇದು ರಾಜಕೀಯ ಪ್ರೇರಿತ ಎಂಬ ಬಿಜೆಪಿಯವರ ಹೇಳಿಕೆ ಖಂಡನೀಯ ಎಂದರು.
ತೆರಿಗೆ ಪಾವತಿ ಸಂಬಂಧ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ವ್ಯಾಪಾರಿಗಳಿಗೆ ನೋಟಿಸ್ ನೀಡಿದ್ದಾರೆ. ಇದರಲ್ಲಿ ಬಿಜೆಪಿಯವರ ಪಾತ್ರ ಏನು? ಅವರನ್ನು ಏಜೆನ್ಸಿಯಾಗಿ ನೇಮಕ ಮಾಡಲಾಗಿದೆಯೇ, ಬಿಜೆಪಿಯವರಿಗೆ ತಿಳಿವಳಿಕೆ ಕೊರತೆ ಇದೆ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲಿ ಎಂಬ ಬಿಜೆಪಿಯವರ ಹೇಳಿಕೆಗೆ ಪ್ರತಿಕ್ರಿಯಿಸಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಧಾನಿಯಾಗುವ ಎಲ್ಲ ಅರ್ಹತೆ ಇದೆ ಎಂದರು.
ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿಗೆ ವಿಶಪ್ರಾಶನ ಮಾಡಲಾಗಿದೆ ಎಂಬ ಶಾಸಕ ಅರವಿಂದ ಬೆಲ್ಲದ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ, ಅವರ ಆರೋಪಕ್ಕೆ ಆಧಾರ ಏನು? ಯಾರು ವಿಶಪ್ರಾಶನ ಮಾಡಿಸಿದ್ದಾರೆ, ಅದರ ಹಿಂದೆ ಯಾರಿದ್ದಾರೆ ಎಂಬ ದಾಖಲೆಯನ್ನು ಬೆಲ್ಲದ ಅವರು ಪೊಲೀಸರಿಗೆ ನೀಡಬೇಕು. ಆಗ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.