ADVERTISEMENT

ಪ್ರೈಮರ್ ಆಫ್ ಲಿಂಗಾಯಿತಿಸಂ | ಲಿಂಗಾಯತ ಧರ್ಮದ ತತ್ವ ಸಾರುವ ಕೃತಿ

‘ಪ್ರೈಮರ್ ಆಫ್ ಲಿಂಗಾಯಿತಿಸಂ’ಬಿಡುಗಡೆ ಸಮಾರಂಭದಲ್ಲಿ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2023, 5:11 IST
Last Updated 15 ಮಾರ್ಚ್ 2023, 5:11 IST
ಧಾರವಾಡದ ಸಾಹಿತ್ಯ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಅವರು ಡಾ. ಎನ್.ಜಿ.ಮಹಾದೇವಪ್ಪ ಅವರನ್ನು ಅಭಿನಂದಿಸಿದರು. ಡಾ. ಶಿವಾನಂದ ಶೆಟ್ಟರ್, ಡಾ. ವೀರಣ್ಣ ರಾಜೂರ, ಪ್ರೊ. ಜಿ.ಬಿ.ಹಳ್ಯಾಳ, ಡಾ. ಲಿಂಗರಾಜ ಅಂಗಡಿ ಇದ್ದಾರೆ
ಧಾರವಾಡದ ಸಾಹಿತ್ಯ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಅವರು ಡಾ. ಎನ್.ಜಿ.ಮಹಾದೇವಪ್ಪ ಅವರನ್ನು ಅಭಿನಂದಿಸಿದರು. ಡಾ. ಶಿವಾನಂದ ಶೆಟ್ಟರ್, ಡಾ. ವೀರಣ್ಣ ರಾಜೂರ, ಪ್ರೊ. ಜಿ.ಬಿ.ಹಳ್ಯಾಳ, ಡಾ. ಲಿಂಗರಾಜ ಅಂಗಡಿ ಇದ್ದಾರೆ   

ಧಾರವಾಡ: ‘ತತ್ವಶಾಸ್ತ್ರ ಪ್ರಾಧ್ಯಾಪಕ ಎನ್.ಜಿ.ಮಹಾದೇವಪ್ಪ ಅವರ ಈ ಹಿಂದೆ ಬರೆದಿದ್ದ ‘ಲಿಂಗಾಯತರು ಹಿಂದೂಗಳಲ್ಲ’ ಕೃತಿಯು ಅಂದಿನ ಸಮಾಜದಲ್ಲಿ ಮನ್ವಂತರ ಸೃಷ್ಟಿಸಿತ್ತು. ಅಲ್ಲಿಯವರೆಗೂ ಲಿಂಗಾಯತರು ಮತ್ತು ವೀರಶೈವರು ಒಂದೇ ಎನ್ನುವ ತಪ್ಪುಗ್ರಹಿಕೆ ಬದಲಿಸಿ, ಹೊಸ ಆಲೋಚನಾ ಕ್ರಮವನ್ನು ಹುಟ್ಟುಹಾಕಿತು’ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ನಗರದಲ್ಲಿ ಶರಣ ಲಿಟರೇಚರ್ ಪ್ರಕಾಶನ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ ಧಾರವಾಡ ಘಟಕ ಆಯೋಜಿಸಿದ್ದ ಡಾ. ಎನ್.ಜಿ.ಮಹಾದೇವಪ್ಪ ಅವರ ‘ಪ್ರೈಮರ್ ಆಫ್ ಲಿಂಗಾಯಿತಿಸಂ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

‘ಈ ಕೃತಿಯು ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವೆಂದು ಪ್ರತಿಪಾದಿಸುವ ಅಧಿಕೃತವಾದ ಆಧಾರಗ್ರಂಥವಾಗಿದೆ. 12ನೇ ಶತಮಾನದಲ್ಲಿ ಬಸವಣ್ಣ ಮತ್ತು ಅನೇಕ ಶಿವಶರಣರು ರಚಿಸಿದ ವಚನಗಳನ್ನು ಆಧಾರವಾಗಿಟ್ಟುಕೊಂಡು ಇತಿಹಾಸ ದಾಖಲಿಸುತ್ತಾ, ಅತ್ಯಂತ ಸರಳವಾಗಿ, ಖಚಿತವಾಗಿ ಮತ್ತು ಸಮಗ್ರವಾಗಿ ಲಿಂಗಾಯತ ಧರ್ಮದ ತತ್ವವನ್ನು ಸಾರುವ ಸಂದೇಶ ಈ ಕೃತಿಯಲ್ಲಿದೆ’ ಎಂದರು.

ADVERTISEMENT

‘ಅತ್ಯಲ್ಪ ಅವಧಿಯಲ್ಲಿ ಆ ಕೃತಿ ಹಿಂದಿ, ಮರಾಠಿ, ತೆಲುಗು ಭಾಷೆಗಳಿಗೂ ಅನುವಾದಗೊಂಡು ರಾಷ್ಟ್ರವ್ಯಾಪಿ ಪ್ರಚಾರ ಪಡೆಯುವಂತಾಗಿದೆ. ಅವರು ಕನ್ನಡದಲ್ಲಿ ಬರೆದ ಬಿಡಿ ಲೇಖನಗಳ ಸಾರವನ್ನು ಇಂಗ್ಲಿಷ್‌ ಭಾಷೆಯಲ್ಲಿ ಹಿಡಿದಿಟ್ಟ ಅತ್ಯಂತ ಮೌಲಿಕ ಕೃತಿಯಾಗಿದೆ’ ಎಂದರು.

ಡಾ. ಶಿವಾನಂದ ಶೆಟ್ಟರ ಮಾತನಾಡಿ, ‘ಕೃತಿಯ ಹದಿಮೂರು ಅಧ್ಯಾಯಗಳು ಸಂಶೋಧನೆ ಮತ್ತು ವಿದ್ವತ್ತು ಒಳಗೊಂಡ, ಹೊಸ ತಲೆಮಾರಿಗೆ ಮಾದರಿಯಾಗಬಲ್ಲ ಕೃತಿಯಾಗಿದೆ. ನಂದಿಮಠ ಅವರ ಕೃತಿಯಲ್ಲಿ ದಾಖಲಾಗಿರುವ ತಪ್ಪುಗಳನ್ನು ಸೂಕ್ತ ದಾಖಲೆಗಳ ಮೂಲಕ ವಿಶ್ಲೇಷಿಸುತ್ತಾ ಕೇಶಿರಾಜ, ರಾಘವಾಂಕ, ಭೀಮಕವಿ, ಚಾಮರಸ, ಮುಂತಾದವರ ಸಾಹಿತ್ಯದ ಉದಾಹರಣೆಗಳ ಮೂಲಕ ಮರೆಯಾದ ಇತಿಹಾಸವನ್ನು ದಾಖಲಿಸಿದೆ. ಪುರಾಣಗಳಲ್ಲಿ ಅಡಕವಾಗಿರುವ ಹುಸಿ ವೈಭವೀಕರಣವನ್ನು ಅಲ್ಲಗಳಿಯುವ ಸಂಶೋಧನಾ ಕೃತಿಯಾಗಿದೆ’ ಎಂದರು.

‘ಮೇಲ್ನೋಟಕ್ಕೆ ಇದು ಲಿಂಗಾಯದ ಧರ್ಮವನ್ನು ಪ್ರತಿಪಾದಿಸುವ ಪ್ರಾಥಮಿಕ ಕೃತಿಯೆಂತೆ ಕಂಡರೂ ಇದರಲ್ಲಿ ಲೇಖಕರ ಸಂಶೋಧನೆಯ ಸಮಗ್ರ ಶ್ರಮ ಅಡಕವಾಗಿದೆ. ಸರಳವಾದ ಇಂಗ್ಲಿಷ್‌ ಭಾಷೆಯಲ್ಲಿ ಕರಾರುವಕ್ಕಾಗಿ ರಚಿಸಿದ ಕೃತಿಯಾಗಿದೆ’ ಎಂದು ವಿವರಿಸಿದರು.

ಕೃತಿಕಾರ ಡಾ. ಎನ್.ಜಿ.ಮಹಾದೇವಪ್ಪ ಅವರು ಮಾತನಾಡಿದರು. ಡಾ. ವೀರಣ್ಣ ರಾಜೂರ ಮಾತನಾಡಿದರು. ಡಾ. ಲಿಂಗರಾಜ ಅಂಗಡಿ, ಪ್ರೊ. ಜಿ.ಬಿ.ಹಳ್ಯಾಳ, ಪ್ರೊ. ಶಶಿಧರ ತೋಡಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.